ಸ್ವಾತಂತ್ರ್ಯೋತ್ಸವ: ನಡುರಾತ್ರಿ ಬೆಟ್ಟವೇರಿ ಧ್ವಜ ಹಾರಿಸಿದ ಯುವಕರು

7

ಸ್ವಾತಂತ್ರ್ಯೋತ್ಸವ: ನಡುರಾತ್ರಿ ಬೆಟ್ಟವೇರಿ ಧ್ವಜ ಹಾರಿಸಿದ ಯುವಕರು

Published:
Updated:
Deccan Herald

ಚಿಕ್ಕಬಳ್ಳಾಪುರ: ದೇಶವನ್ನು ಬ್ರಿಟಿಷ್‌ರ ಗುಲಾಮಗಿರಿಯ ಸಂಕೋಲೆಯಿಂದ ಬಂಧಮುಕ್ತಗೊಳಿಸಿ ಭಾರತೀಯರೆಲ್ಲ ಸ್ವತಂತ್ರರಾದ ದಿನದ ಸವಿನೆನಪಿಗಾಗಿ ಆಚರಿಸುವ ಸ್ವಾತಂತ್ರ್ಯ ದಿನಾಚರಣೆಯನ್ನು ಬುಧವಾರ ಜಿಲ್ಲೆಯಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ವಿವಿಧ ಶಾಲೆ, ಕಾಲೇಜು, ಸಂಘ ಸಂಸ್ಥೆಗಳು, ಕಚೇರಿಗಳಲ್ಲಿ ಧ್ವಜಾರೋಹಣ ಮಾಡಿ, ಸ್ವಾತಂತ್ರ್ಯಕ್ಕಾಗಿ ಮಡಿದ ಹೋರಾಟಗಾರರ ತ್ಯಾಗ ಬಲಿದಾನ ಸ್ಮರಿಸಲಾಯಿತು. ಅನೇಕ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ದೇಶದ ಪರಂಪರೆ, ಸಂಸ್ಕೃತಿಯ ಮೆಲುಕು ಹಾಕುವ ಅವಕಾಶ ಕಲ್ಪಿಸಿಕೊಟ್ಟರು. ಇನ್ನೂ ಅನೇಕ ಕಡೆಗಳಲ್ಲಿ ಈ ದಿನದ ನೆಪದಲ್ಲಿ ಗಿಡಗಳನ್ನು ನೆಟ್ಟು ಸಮಾಜಮುಖಿ ಕಾಳಜಿ ಮೆರೆಯಲಾಯಿತು.

ನಗರ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಇಂಗ್ಲಿಷ್‌ ಶಾಲೆಯಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹು ಅದ್ದೂರಿಯಾಗಿ ಆಚರಿಸಲಾಯಿತು. ಶಿಸ್ತು, ಸಂಭ್ರಮ ಮೇಳೈಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಪಥಸಂಚಲನ, ವಿವಿಧ ನೃತ್ಯ ರೂಪಕಗಳು ನೆರೆದವರಲ್ಲಿ ದೇಶಭಕ್ತಿ ಉದ್ದೀಪಿಸಿದರು. ವಿವಿಧ ಸ್ವಾತಂತ್ರ್ಯ ಸೇನಾನಿಗಳ ವೇಷ ಧರಿಸಿದ್ದ ಪುಟಾಣಿಗಳು ಎಲ್ಲರ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿದ ಪ್ರಶಾಂತ್ ಎಸ್.ಮೂರ್ತಿ ಅವರು, ‘ಸ್ವಾತಂತ್ರ್ಯ ತಂದುಕೊಡಲು ತ್ಯಾಗ, ಬಲಿದಾನ ಮಾಡಿದ ಎಲ್ಲರನ್ನು ಸ್ಮರಿಸಿ ಇಂದಿನ ಮಕ್ಕಳು ಅವರ ಆದರ್ಶ ಮತ್ತು ಬದುಕಿನ ಹಾದಿಯನ್ನು ಅರಿತು ದೇಶಸೇವೆಗೆ ಮುಂದಾಗಬೇಕು. ಚೆನ್ನಾಗಿ ಕಲಿತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯುವುದರ ಮೂಲಕ ದೇಶ ಕಟ್ಟುವಲ್ಲಿ ಕೈಜೋಡಿಸಬೇಕು’ ಎಂಬ ಸಂದೇಶ ನೀಡಿದರು.

ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್. ಶಿವರಾಮರೆಡ್ಡಿ, ಮುಖಂಡರಾದ ಕೆ.ವಿ ನಾಗರಾಜ್, ಶಾಲೆಯ ಪ್ರಾಂಶುಪಾಲ ಡಿ.ಸಿ.ಮೋಹನ್ ಕುಮಾರ್ ಹಾಜರಿದ್ದರು.

ಮಧ್ಯರಾತ್ರಿ ಧ್ವಜಾರೋಹಣ
ಅಖಂಡ ಭಾರತ ಸೇವಾ ಸಮಿತಿ ಪದಾಧಿಕಾರಿಗಳು ಮಂಗಳವಾರ ಮಧ್ಯರಾತ್ರಿ ನಗರದ ಭುವನೇಶ್ವರಿ ವೃತ್ತದಲ್ಲಿ ಧ್ವಜಾರೋಹಣ ಮಾಡುವ ಜತೆಗೆ ನಿವೃತ್ತ ಯೋಧರನ್ನು ಸನ್ಮಾನಿಸುವ ಮೂಲಕ ದೇಶಭಕ್ತಿ ಮೆರೆದರು.

ವೈದ್ಯರಾದ ಡಾ.ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಯೋಧರಾದ ರಾಘವೇಂದ್ರ, ಜಯಣ್ಣಾ ಮತ್ತು ಸುಂದರರಾಜ್‌ ಅವರನ್ನು ಸನ್ಮಾನಿಸಲಾಯಿತು. ಉತ್ತಿಷ್ಠ ಭಾರತ ಸಂಚಾಲಕ ರವಿತೇಜಾ ದಿಕ್ಸೂಚಿ ಭಾಷಣ ಮಾಡಿದರು. ಸಮಿತಿಯ ಪದಾಧಿಕಾರಿಗಳಾದ ಕಿರಣ್, ಶಂಕರ್, ಹರ್ಷ, ಗಿರೀಶ್, ಸಂದೀಪ್, ವಿಷ್ಣು, ಹರಿಪ್ರಸಾದ್ ಉಪಸ್ಥಿತರಿದ್ದರು.

ನಡುರಾತ್ರಿ ಬೆಟ್ಟವೇರಿ ಧ್ವಜ ಹಾರಿಸಿದರು
ಸ್ವಾತಂತ್ರ್ಯ ದಿನವನ್ನು ವಿಭಿನ್ನವಾಗಿ ಆಚರಿಸಬೇಕೆಂಬ ತುಡಿತ ಹೊಂದಿದ್ದ ತಾಲ್ಲೂಕಿನ ಆವಲಗುರ್ಕಿಯ ದೇಶಭಕ್ತ ಕೆಲ ಯುವಕರು ಕೇತನಹಳ್ಳಿಯ ರಸ್ತೆಯಲ್ಲಿರುವ 1,256 ಮೀಟರ್ ಎತ್ತರದ ಕೌರನಬೆಟ್ಟವನ್ನು (ಹರಿಹರೇಶ್ವರ ಬೆಟ್ಟ) ಮಂಗಳವಾರ ಮಧ್ಯರಾತ್ರಿ ಸುರಿಯುವ ಮಳೆಯ ನಡುವೆಯೇ ಏರಿ ತುದಿಯಲ್ಲಿ ಧ್ವಜಾರೋಹಣ ಮಾಡಿ, ಕೇಕ್ ಕತ್ತರಿಸಿ ಸ್ವತಂತ್ರ್ಯ ದಿನವನ್ನು ಆಚರಿಸುವ ಮೂಲಕ ಊರಿನ ಯುವಕರಿಗೆ ಮಾದರಿಯಾಗುವ ಕೆಲಸ ಮಾಡಿದರು. ವಿಜಯಕುಮಾರ್, ರಮೇಶ್, ಸುರೇಶ್, ಶಂಕರ್, ಗಂಗಾಧರ್, ಸುನಿಲ್ ಮತ್ತು ಮುರುಳೀಧರ್ ಈ ತಂಡದಲ್ಲಿದ್ದರು.

ಗಿಡ ನೆಟ್ಟು ಸ್ವಾತಂತ್ರ್ಯ ದಿನ ಆಚರಿಸಿದರು
ತಾಲ್ಲೂಕಿನ ಗುಂತಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ಪರಿಸರ ಪ್ರೇಮಿಗಳಾದ ರವೀಶ್, ವರದರಾಜು, ರಮೇಶ್, ರಾಮಕೃಷ್ಣ, ಅರವಿಂದ್ ಅವರು ವಿವಿಧ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಸ್ವಾತಂತ್ಯ ದಿನಾಚರಣೆ ಆಚರಿಸಿದರು.

ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಆಟೊ ಸುಭಾನ್, ಹಿರಿಯ ನಾಗರಿಕರಾದ ಲಕ್ಷ್ಮೀನಾರಾಯಣಪ್ಪ, ತಿಮ್ಮಯ್ಯ, ದಾಸಪ್ಪ ಅವರನ್ನು ಸನ್ಮಾನಿಸಲಾಯಿತು. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಹಾರೋಬಂಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಲ್.ವೆಂಕಟೇಶ್, ಸದಸ್ಯರಾದ ಎಲ್.ಮೂರ್ತಿ, ರಾಧಮ್ಮ, ಶಿಕ್ಷಕರಾದ ಎಸ್‌.ಸುಬ್ಬಲಕ್ಷ್ಮಿ, ಕೆ.ಎಂ.ನರಸಿಂಹಮೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !