ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶಭಕ್ತರ’ ಹಳ್ಳಿ– ಭಕ್ತರಹಳ್ಳಿ

Last Updated 15 ಆಗಸ್ಟ್ 2022, 4:39 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಸ್ವಾತಂತ್ರ್ಯಕ್ಕಾಗಿ ಬಲಿದಾನವನ್ನು ನೀಡಿದ ಹಾಗೂ ಹಲವಾರು ಹೋರಾಟಗಾರರನ್ನು ಹೊಂದಿದ್ದ ಗ್ರಾಮ ಭಕ್ತರಹಳ್ಳಿ ‘ದೇಶಭಕ್ತರ’ಹಳ್ಳಿ ಎಂದೇ ಪ್ರಸಿದ್ಧಿ ಪಡೆದಿದೆ.

ಭಕ್ತರಹಳ್ಳಿ ಇತಿಹಾಸವನ್ನು 1,200 ವರ್ಷಗಳ ಹಿಂದಕ್ಕೆ ಕರೆದೊಯ್ಯುವ ಶಾಸನವೊಂದಿದೆ. ಗ್ರಾಮದ ಹೊರವಲಯದಲ್ಲಿ ತೆಲುಗರ ಕೃಷ್ಣಪ್ಪ ಅವರ ತೋಟದಲ್ಲಿರುವ ಕ್ರಿ.ಶ. 870ರ ಹಳೆಗನ್ನಡ ಲಿಪಿಯ ಶಿಲಾ ಶಾಸನದಲ್ಲಿ ವೀರನೊಬ್ಬನ ವರ್ಣನೆ ಹಾಗೂ ಆತನ ಕುಟುಂಬಕ್ಕೆ ನೀಡಿದ ಬಳುವಳಿಯ ವಿವರವಿದೆ.

ಗ್ರಾಮದ ಬಂಡಿ ನಾರಾಯಣಪ್ಪ ಅವರ ಮನೆಯು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಕೇಂದ್ರವಾಗಿತ್ತು.ಸರ್ಕಾರಿ ಲೆಕ್ಕದಲ್ಲಿ ಭಕ್ತರಹಳ್ಳಿಯಲ್ಲಿ 13 ಮಂದಿ ಮಾತ್ರ ಸ್ವಾತಂತ್ರ್ಯ ಹೋರಾಟಗಾರರೆಂದು ಗುರುತಿಸಲ್ಪಟ್ಟಿದ್ದಾರೆ. ಆದರೆ ಹಲವಾರು ಮಂದಿ ಹೋರಾಟದಲ್ಲಿ ಭಾಗಿಯಾಗಿದ್ದರು.

ಶಿಡ್ಲಘಟ್ಟ ಕ್ಷೇತ್ರದ ಮಾಜಿ ಶಾಸಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಭಕ್ತರಹಳ್ಳಿಯ ಬಿ.ವೆಂಕಟರಾಯಪ್ಪ ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರ ನೀಡುವ ಪಿಂಚಣಿ ಸಹ ಪಡೆಯುತ್ತಿರಲಿಲ್ಲ. ಭಕ್ತರಹಳ್ಳಿ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಗಾಂಧಿ ಪ್ರತಿಮೆ ಹಾಗೂ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನ ಫಲಕವನ್ನು ಹಾಕಲಾಗಿದೆ.

ಭಕ್ತರಹಳ್ಳಿಯ ಬಂಡಿ ನಾರಾಯಣಪ್ಪ 1920ರಲ್ಲಿ ಕಟ್ಟಿದ ಮನೆಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ನೆಲೆಯಾಗಿತ್ತು. ಸ್ವಾತಂತ್ರ್ಯ ಹೋರಾಟಕ್ಕಾಗಿ ಮನೆ, ಗ್ರಾಮಗಳನ್ನು ತೊರೆದವರಿಗೆ ಆಶ್ರಯ ತಾಣವಾಗಿತ್ತು.

ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದವರಿಗೆ ಹಣಕಾಸಿನ ನೆರವು, ಗುಪ್ತ ಪತ್ರ ರವಾನೆ, ಕಾರ್ಯಾಚರಣೆಗಳ ಯೋಜನೆ ಎಲ್ಲವನ್ನೂ ಈ ಮನೆಯಿಂದಲೇ ನಡೆಸುತ್ತಿದ್ದರು. ಬಂಡಿನಾರಾಯಣಪ್ಪ ಆಗಿನ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಪರೋಕ್ಷವಾಗಿ ಪೋಷಕರಾಗಿದ್ದರು.

ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ರಾಜಮನೆತನದ ಆಡಳಿತದ ಅವಧಿಯಲ್ಲಿ ಪ್ರಜಾಪ್ರತಿನಿಧಿ ಸಭೆಗೆ ನಾರಾಯಣಪ್ಪನವರು ಎರಡು ಬಾರಿ ಆಯ್ಕೆಯಾಗಿದ್ದರು. ಬಂಡಿ ಚಿಹ್ನೆಯಿಂದ ಆಯ್ಕೆಯಾಗಿದ್ದರಿಂದಾಗಿ ಅವರಿಗೆ ಬಂಡಿ ನಾರಾಯಣಪ್ಪ ಎಂದೇ ಹೆಸರು ರೂಢಿಗೆ ಬಂದಿತು. ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಜನರ ಮನದಲ್ಲಿ ಹಚ್ಚಿದವರಲ್ಲಿ ಇವರು ಪ್ರಮುಖರು.

ಅವರ ಮಕ್ಕಳಾದ ಬಿ.ಎನ್.ಕ್ಯಾತಣ್ಣ ಮತ್ತು ಬಿ.ಎನ್.ಪುಟ್ಟಣ್ಣ ಸ್ವಾತಂತ್ರ್ಯ ಹೋರಾಟದಲ್ಲಿ
ಭಾಗಿಯಾಗಿದ್ದರು.

ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರಿಗೆ ಆಪ್ತರಾಗಿದ್ದ ಬಂಡಿ ನಾರಾಯಣಪ್ಪ ಕೆ.ಸಿ.ರೆಡ್ಡಿ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಕೋರಿ ಜವಾಹರಲಾಲ್ ನೆಹರೂ ಅವರನ್ನು ಭೇಟಿ ಮಾಡಿದ ಮುಖಂಡರಲ್ಲಿ ಒಬ್ಬರಾಗಿದ್ದರು. ಮುಖ್ಯಮಂತ್ರಿ ಆದ ನಂತರ ಕೆ.ಸಿ.ರೆಡ್ಡಿ ಅವರು ಭಕ್ತರಹಳ್ಳಿಗೆ ಬಂದು ಬಂಡಿನಾರಾಯಣಪ್ಪ ಅವರನ್ನು ಭೇಟಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT