ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದುರಾಶ್ವತ್ಥ: ಜನರ ಹೋರಾಟದ ಕಥನ

ಕರ್ನಾಟಕ ಜಲಿಯನ್ ವಾಲಾಬಾಗ್; ಸ್ವಾತಂತ್ರ್ಯ ಹೋರಾಟದ ಮಾಹಿತಿ ನೀಡುವ ಚಿತ್ರಪಟ ಗ್ಯಾಲರಿ
Last Updated 15 ಆಗಸ್ಟ್ 2022, 4:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ:ಅದು 1938ರ ಏಪ್ರಿಲ್ 25. ವಿದುರಾಶ್ವತ್ಥದ ವಿದುರ ನಾರಾಯಣಸ್ವಾಮಿ ದೇಗುಲದ ಹಿಂಬದಿಯ ಅರಳಿಮರಗಳ ತೋಪಿನಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ. ಚಂಗಲರಾಯರೆಡ್ಡಿ ಸೇರಿದಂತೆ ರಾಜ್ಯದ ಘಟನುಘಟಿ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಅಂದು ವಿದುರ ನಾರಾಯಣ ಸ್ವಾಮಿಯ ತೇರು ಸಹ ಇತ್ತಂತೆ.

ಹೀಗೆ ಭಾರಿ ಪ್ರಮಾಣದಲ್ಲಿ ಸೇರಿದ್ದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಜನರ ಮೇಲೆ ಏಕಾಏಕಿ ಬ್ರಿಟಿಷ್ ಆಡಳಿತದ ಪೊಲೀಸರು ಗುಂಡುಗಳ ಮಳೆಗರೆದರು. ಸಾಲು ಸಾಲು ಹೆಣಗಳು ಬಿದ್ದವು. ಸರ್ಕಾರದ ದಾಖಲೆಯ ಪ್ರಕಾರ 9 ಮಂದಿ ಹೋರಾಟಗಾರರು ಹತ್ಯೆಯಾದರು. ಆದರೆ 32ಕ್ಕೂ ಹೆಚ್ಚು ಚಳವಳಿಗಾರರು ಬಲಿಯಾದರು ಎನ್ನುವ ಮಾತುಗಳಿವೆ.

ಗೌರಿಬಿದನೂರು ತಾಲ್ಲೂಕು ಕೇಂದ್ರದಿಂದ ಹಿಂದೂಪುರ ರಸ್ತೆಯಲ್ಲಿ ಸಿಗುವ ವಿದುರಾಶ್ವತ್ಥ ಗ್ರಾಮ ಕರ್ನಾಟಕ ಜಲಿಯನ್ ವಾಲಾಬಾಗ್ ಎಂದೇ ಹೆಸರಾಗಿದೆ. ಗ್ರಾಮದ ಮುಖ್ಯ ರಸ್ತೆಯಿಂದ ವಿದುರ ನಾರಾಯಣಸ್ವಾಮಿ ಸ್ವಾಗತ ಕಮಾನು ದಾಟಿ ಒಂದು ಕಿ.ಮೀ ಸಾಗಿದರೆ ಸ್ವಾತಂತ್ರ್ಯ ಹೋರಾಟದ ಕಥನ ಬಿಚ್ಚಿಕೊಳ್ಳುತ್ತದೆ.

ಸ್ವಾತಂತ್ರ್ಯ ಹೋರಾಟಗಳ ಬಹುತೇಕ ಘಟನೆಗಳನ್ನು ಸ್ಮರಿಸುವಾಗ ಅಲೊಬ್ಬ ‘ನಾಯಕ’ನ ನೇತೃತ್ವದಲ್ಲಿ ಚಳವಳಿಗಳು ನಡೆದಿವೆ. ಆದರೆ ವಿದುರಾಶ್ವತ್ಥದಲ್ಲಿ ನಡೆದ ಸ್ವಾತಂತ್ರ್ಯದ ಹೋರಾಟವು ಜನಸಾಮಾನ್ಯರ ಹೋರಾಟವಾಗಿದೆ. ಈ ಕಾರಣದಿಂದಲೇ ವಿದುರಾಶ್ವತ್ಥ ಹೋರಾಟ ರಾಜ್ಯ ಹಾಗೂ ದೇಶದಸ್ವಾತಂತ್ರ್ಯ ಹೋರಾಟದಲ್ಲಿ ವಿಶಿಷ್ಟವಾಗಿ ನಿಲ್ಲುತ್ತದೆ. ವಿದುರಾಶ್ವತ್ಥದಲ್ಲಿ ನಡೆದ ಹೋರಾಟಗಾರರ ಮೇಲಿನ ದಾಳಿಯ ಬಗ್ಗೆ ಅಂದು ಗಾಂಧೀಜಿ ಅವರು ತಮ್ಮ ಹರಿಜನ ಪ್ರತಿಕೆಯಲ್ಲಿಯೂ ಪ್ರಸ್ತಾಪಿಸಿದ್ದಾರೆ.

ಅಂದಿನ ಗೋಲಿಬಾರ್ ವೇಳೆಕೆಲವರು ಪಕ್ಕದಲ್ಲಿಯೇ ಹರಿಯುವ ಉತ್ತರ ಪಿನಾಕಿನಿ ನದಿಯಲ್ಲಿ ಬಿದ್ದು ಎದ್ದು ಓಡಿದರು. ಈ ರೌದ್ರ ಘಟನೆ ಸಾಕ್ಷಿ ಎನ್ನುವಂತೆ ಉತ್ತರ ಪಿನಾಕಿನಿ ಅಂದಿನಿಂದ ಇಂದಿನವರೆಗೂ ಉತ್ತರಪಿನಾಕಿನಿ ತಣ್ಣಗೆ ಹರಿಯುತ್ತಿದ್ದಾಳೆ.

ಇಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದವರ ನೆನಪುಗಳನ್ನು ಈ ನೆಲದಲ್ಲಿ ಕಾಪಿಡಲಾಗಿದೆ. ವೀರಭೂಮಿಯಲ್ಲಿರುವ ಹುತಾತ್ಮರ ಸ್ತೂಪದಲ್ಲಿ ಪೊಲೀಸರ ಗುಂಡಿಗೆ ಬಲಿಯಾದವರ ಹೆಸರುಗಳಿವೆ. ಹುತಾತ್ಮರಾದ ಕೆಲವು ಹೋರಾಟಗಾರರ ಭಾವಚಿತ್ರಗಳು ವಿದುರಾಶ್ವತ್ಥದ ನಾಗಯ್ಯರೆಡ್ಡಿ ಭವನದಲ್ಲಿವೆ.

ಐತಿಹಾಸಿಕ ಹೋರಾಟ ನಡೆದ ಸ್ಥಳದಲ್ಲಿ ಇಂದು ಸ್ವಾತಂತ್ರ್ಯ ಸ್ಮಾರಕ ಸಂಕೀರ್ಣ ಮತ್ತು ವಿದುರಾಶ್ವತ್ಥ ಉದ್ಯಾನ ನಿರ್ಮಾಣವಾಗಿದೆ. ಈ ಸಂಕೀರ್ಣದಲ್ಲಿ ವೀರಸೌಧ, ಚಿತ್ರಪಟ ಗ್ಯಾಲರಿ, ನಾಗಯ್ಯರೆಡ್ಡಿ ಭವನ, ಗ್ರಂಥಾಲಯ, ಸುಂದರ ಉದ್ಯಾನ, ಸ್ವಾತಂತ್ರ್ಯ ಹೋರಾಟಗಾರರ ಮೂರ್ತಿಗಳನ್ನು ಕಾಣಬಹುದು. ಈ ಮೂಲಕ ಅಂದು ನಡೆದ ಹೋರಾಟದ ಬಗ್ಗೆ ಇಂದಿನ ಪೀಳಿಗೆಯೂ ಅರಿವು ಪಡೆಯಬಹುದು.

ನಾವು ಹೋರಾಟಗಾರರ ಪತ್ನಿಯರು: ಎಚ್.ನಾಗಸಂದ್ರದ ನರಸಿಂಹಯ್ಯ, ಗಂಗಯ್ಯ, ಸಂಜೀವಪ್ಪ ವಿದುರಾಶ್ವತ್ಥ ಹೋರಾಟದಲ್ಲಿ ಭಾಗಿಯಾಗಿ ಜೈಲು ವಾಸ ಅನುಭವಿಸಿದ್ದರು. ನರಸಿಂಹಯ್ಯ ಮತ್ತು ಗಂಗಯ್ಯ ಇತ್ತೀಚೆಗೆ ಮೃತಪಟ್ಟಿದ್ದಾರೆ. ‌ಹುತಾತ್ಮರ ಹೋರಾಟಗಾರರ ಪತ್ನಿಯರು ಅಂದಿನ ನೆನಪುಗಳನ್ನು ಈಗ ಕಷ್ಟದಿಂದಲೇ ಹೆಕ್ಕುವರು. ‘ನಾವು ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯರು’ ಎನ್ನುವ ಹೆಮ್ಮೆ ಇವರಿಗಿದೆ. ಮನೆಯ ಗೋಡೆಯಲ್ಲಿರುವ ದೇವರ ಚಿತ್ರಪಟಗಳ ಸಾಲಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಎಂದು ಸರ್ಕಾರ ನೀಡಿದ ಪ್ರಮಾಣ ಪತ್ರವಿದೆ.

ಹೋರಾಟದಲ್ಲಿ ಪಾಲ್ಗೊಂಡಿದ್ದ ಎಚ್.ನಾಗಸಂದ್ರದನರಸಿಂಹಯ್ಯ ಮತ್ತು ಗಂಗಯ್ಯ ಅವರು ನೀಡಿದ ಮಾಹಿತಿ ಅಧರಿಸಿ ಅಂದಿನ ಹೋರಾಟದ ಸನ್ನಿವೇಶದ ಚಿತ್ರವನ್ನು ಬಿಡಿಸಲಾಗಿದೆ. ಆ ಚಿತ್ರ ವಿದುರಾಶ್ವತ್ಥದ ಚಿತ್ರಪಟ ಗ್ಯಾಲರಿಯಲ್ಲಿದೆ.

‘ಆರು ತಿಂಗಳು ಜೈಲಿಗೆ ಹೋಗಿದ್ದರು’

‘ವಿದುರಾಶ್ವತ್ಥಕ್ಕೆ ಹೋಗಿದ್ದರು. ಅಲ್ಲಿ ಅವರು (ಪೊಲೀಸರು) ಇವರಿಗೆ ಹೊಡೆದರಂತೆ ಇವರು (ಸ್ವಾತಂತ್ರ್ಯ ಹೋರಾಟಗಾರರು) ಅವರಿಗೆ ಹೊಡೆದರಂತೆ’ ಎಂದು ನೆನಪಿಸಿಕೊಳ್ಳುವರು ನರಸಿಂಹಯ್ಯ ಅವರ ಪತ್ನಿ ಗಂಗಮ್ಮ.

ಇವರನ್ನು (ನರಸಿಂಹಯ್ಯ) ಮೊದಲು ಎರಡು ತಿಂಗಳು ಜೈಲಿನಲ್ಲಿ ಇಟ್ಟಿದ್ದರು. ಮನೆಗೆ ಬಂದ ಸ್ವಲ್ಪ ದಿನದ ನಂತರ ಮತ್ತೆ ಪೊಲೀಸರು ಕರೆದುಕೊಂಡು ಹೋದರು. ಮೂರು ತಿಂಗಳು ಜೈಲಿನಲ್ಲಿಟ್ಟರು. ಅಲ್ಲಿಂದ ಬಂದ ನಂತರ ಸ್ವಾತಂತ್ರ್ಯ ಹೋರಾಟಗಾರರು ಎನಿಸಿದರು’ ಎಂದು ನೆನಪಿಸಿಕೊಳ್ಳುವರು.

ಸಂಜೀವಪ್ಪ ಅವರ ಪತ್ನಿ ನಾಗಮ್ಮ ಸಹ ಅಂದಿನ ಹೋರಾಟದ ದಿನಗಳನ್ನು ನೆನಪಿಸಿಕೊಳ್ಳುವರು. ಸ್ವಾತಂತ್ರ್ಯ ಹೋರಾಟಗಾರರ ಈ ಪತ್ನಿಯರನ್ನು ಸರ್ಕಾರ ಇತ್ತೀಚೆಗೆ ವಿದುರಾಶ್ವತ್ಥದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿತ್ತು. ಪಿಂಚಣಿ ಸಹ ಪಡೆಯುತ್ತಿದ್ದಾರೆ.

‘ಹೋರಾಟಗಾರರಿಂದ ಮಾಹಿತಿ’

ಸ್ವಾತಂತ್ರ್ಯ ಸ್ಮಾರಕ ಸಂಕೀರ್ಣ ಮತ್ತು ವಿದುರಾಶ್ವತ್ಥ ಉದ್ಯಾನ ನಿರ್ಮಾಣ ಕಾರ್ಯವನ್ನು 2006ರಿಂದ ಆರಂಭಿಸಿದೆವು. ಹೋರಾಟದಲ್ಲಿ ಪಾಲ್ಗೊಂಡಿದ್ದ ನರಸಿಂಹಯ್ಯ ಮತ್ತು ಗಂಗಯ್ಯ ಅವರು ನೀಡಿದ ಮಾಹಿತಿ ಆಧರಿಸಿ ಸ್ಮಾರಕ ನಿರ್ಮಿಸಿದೆವು ಎಂದು ವಿದುರಾಶ್ವತ್ಥ ಸ್ವಾತಂತ್ರ್ಯ ಸ್ಮಾರಕ ಸಮಿತಿ ನಿರ್ದೇಶಕ ಹಾಗೂ ವೀರಸೌಧದ ರೂವಾರಿ ಪ್ರೊ.ಬಿ.ಗಂಗಾಧರಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗ ಸ್ಮಾರಕ ಇರುವ ಸ್ಥಳದಲ್ಲಿ ಬ್ರಿಟಿಷ್ ಪೊಲೀಸರು ಗೋಲಿಬಾರ್ ಮಾಡಿದರಂತೆ. ಆಗ ಜಾತ್ರೆ ನಡೆಯುತ್ತಿತ್ತಂತೆ. 30ರಿಂದ 40 ಜನರು ಸತ್ತರು. ಹಕ್ಕಿ, ಕೋತಿಗಳು ಸಹ ಗುಂಡಿಗೆ ಬಲಿಯಾದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ಆ ಆಧಾರದಲ್ಲಿ ಸ್ಮಾರಕ ರೂಪಿಸಿದೆವು’ ಎಂದರು.

ಹೋರಾಟಗಾರಜ್ವಾಲನಯ್ಯ ಅವರ ಹೇಳುವ ಪ್ರಕಾರ, ಅವರ ಜತೆಯೇ ಐದು ಸಾವಿರ ಜನರು ಬಂದಿದ್ದರಂತೆ. ಅವರನ್ನೇ ಹೊರಗೆ ಬಿಡಲಿಲ್ಲವಂತೆ. ವಿದುರಾಶ್ವತ್ಥದ ಹೋರಾಟದಲ್ಲಿ ಪಾಲ್ಗೊಂಡ ಯಾರೂ ಸಹ ಇಂದು ಬದುಕಿಲ್ಲ ಎಂದು ಹೇಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT