ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಪ್ಲೆಕ್ಸ್‌ ತೆರವಿಗೆ ಅಧಿಕಾರಿಗಳ ನಿರಾಸಕ್ತಿ

ಕಾರ್ಯಕ್ರಮ ಮುಗಿದರೂ ರಾರಾಜಿಸುತ್ತಿರುವ ಪಕ್ಷದ ಬ್ಯಾನರ್‌ಗಳು
Last Updated 18 ಮಾರ್ಚ್ 2023, 5:19 IST
ಅಕ್ಷರ ಗಾತ್ರ

ಗೌರಿಬಿದನೂರು: ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ವಿವಿಧ ಪಕ್ಷಗಳ ಮುಖಂಡರು ಹಾಗೂ ಸಮಾಜ ಸೇವಕರ ಭಾವಚಿತ್ರ ಮತ್ತು ಸಾಧನೆಗಳುಳ್ಳ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.

ಇದು ನಗರದ ಸ್ವಚ್ಛತೆಗೆ ಹಾನಿಯನ್ನುಂಟು ಮಾಡುವ ಜತೆಗೆ ಚುನಾವಣಾ ಪೂರ್ವದಲ್ಲಿ ಹಾಕಲಾಗಿರುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ನಗರಸಭೆ ಅಧಿಕಾರಿಗಳು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ನಗರದಲ್ಲಿ ಅಧಿಕಾರಿಗಳ ಅನುಮತಿ ಇಲ್ಲದೆ ಯಾವುದೇ ಫ್ಲೆಕ್ಸ್‌ಗಳನ್ನು ಅಳವಡಿಸುವಂತಿಲ್ಲ. ಅನುಮತಿಯಿಲ್ಲದೆ, ಫ್ಲೆಕ್ಸ್ ಅಳವಡಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಲ್ಲದೆ ಚುನಾವಣಾ ಪೂರ್ವದಲ್ಲಿ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಅವರು ಆದೇಶ ನೀಡಿದ್ದಾರೆ. ಆದರೆ ಈ ಆದೇಶವನ್ನು ಅಧಿಕಾರಿಗಳು ಗಾಳಿಗೆ ತೂರಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಅನವಶ್ಯಕವಾಗಿ ಪ್ರತಿದಿನ ರಾಜಕೀಯ ನಾಯಕರು ಒಂದಲ್ಲಾ ಒಂದು ಫ್ಲೆಕ್ಸ್‌ಗಳನ್ನು ನಗರದ ವೃತ್ತಗಳಲ್ಲಿ ಅಳವಡಿಸಲಾಗುತ್ತಿದೆ. ಆದರೆ, ಹೀಗೆ ಪ್ಲೆಕ್ಸ್ ಅಳವಡಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎನ್ನಲಾಗಿದೆ.

ನಗರಸಭೆಯಲ್ಲಿ ಕೆ‌.ಎಚ್.ಪಿ ಬೆಂಬಲಿತ ಅಧ್ಯಕ್ಷರು ಆಡಳಿತದಲ್ಲಿದ್ದು, ವಿರೋಧಿ ಬಣದಲ್ಲಿ ಕ್ಷೇತ್ರದ ಶಾಸಕರ ಬೆಂಬಲಿಗರಿದ್ದಾರೆ. ಇವರಿಬ್ಬರ ನಡುವೆ‌ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ತಮ್ಮ ಪಕ್ಷ ಹಾಗೂ ತಂಡದಿಂದ ಮಾಡುವ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಫ್ಲೆಕ್ಸ್, ಬ್ಯಾನರ್‌ಗಳನ್ನು ಅವೈಜ್ಞಾನಿಕವಾಗಿ ಎಲ್ಲೆಂದರಲ್ಲೇ ಅಳವಡಿಸಲಾಗುತ್ತಿದೆ. ಜತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಸರ್ಕಾರಿ ಜಾಹೀರಾತು ಫಲಕಗಳ ಮೇಲೂ ರಾಜಕೀಯ ನಾಯಕರ ಫ್ಲೆಕ್ಸ್ ಮತ್ತು ಬ್ಯಾನರ್‌ಗಳೇ ರಾರಾಜಿಸುತ್ತಿರುತ್ತವೆ. ಕಾರ್ಯಕ್ರಮ ಮುಗಿದ ಒಂದೆರಡು ವಾರಗಳಾದರೂ, ಈ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸದೆ ಹಾಗೆಯೇ ಬಿಡಲಾಗುತ್ತವೆ.

ಸ್ಥಳೀಯ ‌ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗದೆ ಇರುವುದು ನಾಗರಿಕರಿಗೆ ತಲೆನೋವಾಗಿದೆ.

ಅಧಿಕಾರಿಗಳು ಕೈಗೊಂಬೆ

ನಗರಸಭೆಯ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳ ಮತ್ತು ಸಮಾಜಸೇವಕರ ಕೈಗೊಂಬೆಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ನಗರದ ಜನತೆಯ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸಬೇಕಾದ ಅಧಿಕಾರಿಗಳು ಅಸಹಾಯಕತೆ ಮೆರೆಯುತ್ತಿರುವುದು ಬೇಸರದ ಸಂಗತಿ.

- ರಾಮಕೃಷ್ಣ, ಸ್ಥಳೀಯ ‌ನಿವಾಸಿ

ಸೌಂದರ್ಯಕ್ಕೆ ಹಾನಿ

****

ನಗರದ ಪ್ರಮುಖ ವೃತ್ತಗಳು‌ ಮತ್ತು ರಸ್ತೆಯ ಎರಡೂ ಬದಿಗಳಲ್ಲಿ ಅಳವಡಿಸುವ ಫ್ಲೆಕ್ಸ್, ಬ್ಯಾನರ್‌ಗಳ ಹಾವಳಿಯಿಂದ ಸಂಚಾರ ನಿಯಮಗಳ ಬಗ್ಗೆ ಅರಿಯದಂತಾಗಿದೆ. ನಾಯಕರು ಅನವಶ್ಯಕ ಮತ್ತು ಅವೈಜ್ಞಾನಿಕವಾಗಿ ಎಲ್ಲೆಂದರಲ್ಲೆ ಅಳವಡಿಸುವ ಫ್ಲೆಕ್ಸ್‌ಗಳು ನಗರದ ಪರಿಸರಕ್ಕೆ ಕಳಂಕ ತರುತ್ತಿವೆ. ನಗರಸಭೆಯ ಪೌರಕಾರ್ಮಿಕರಿಗೆ ಇವುಗಳನ್ನು ತೆರವುಗೊಳಿಸಿ, ನಗರದಿಂದ ಹೊರ ಹಾಕುವುದೇ ದೊಡ್ಡ ಸವಾಲಾಗಿದೆ.

- ನವೀನ್ ಕುಮಾರ್, ನಗರ ನಿವಾಸಿ

***

ಶಿಸ್ತು ಕ್ರಮ ಖಚಿತ

ನಗರದಲ್ಲಿ ಅನವಶ್ಯಕವಾಗಿ ಫ್ಲೆಕ್ಸ್ ‌ಬ್ಯಾನರ್ ಅಳವಡಿಸುವವರಿಗೆ ಈ ಹಿಂದೆ ಎಚ್ಚರಿಕೆ ನೀಡಿದ್ದೇವೆ. ಆದರೆ ಎಲ್ಲ ಪಕ್ಷದ ಬೆಂಬಲಿಗರು ಒಂದಲ್ಲಾ ಒಂದು ಕಾರ್ಯಕ್ರಮದ ನೆಪದಲ್ಲಿ ಫ್ಲೆಕ್ಸ್ ಅಳವಡಿಸುತ್ತಿದ್ದಾರೆ. ಈ‌ ಬಗ್ಗೆ ನಗರಸಭೆಯ ಪರಿಸರ ಮತ್ತು ಹಿರಿಯ ಆರೋಗ್ಯ ನಿರೀಕ್ಷಕರ ಬಗ್ಗೆ ಚರ್ಚಿಸಿ ಶಿಸ್ತು ಕ್ರಮ ಜರುಗಿಸಲಾಗುತ್ತದೆ.

- ಡಿ.ಎಂ.ಗೀತಾ, ನಗರಸಭೆ ಪೌರಾಯುಕ್ತೆ, ಗೌರಿಬಿದನೂರು.

***

ಪೌರಾಯುಕ್ತರ ಆದೇಶಕ್ಕೆ ಬದ್ಧ

ನಗರದಲ್ಲಿನ ಫ್ಲೆಕ್ಸ್ ಅಳವಡಿಕೆ ಇಲಾಖೆಗೆ ತಲೆನೋವಾಗಿದೆ. ನಿರ್ಬಂಧ ಹೇರಲು ಮುಂದಾದರೆ ಸಂಬಂಧಪಟ್ಟ‌ ನಾಯಕರು ಶಿಫಾರಸು ತರುತ್ತಾರೆ. ಜತೆಗೆ ಎಲ್ಲ ಪಕ್ಷ ಮತ್ತು ಪಕ್ಷೇತರರ ಬೆಂಬಲಿಗರು ನಗರಸಭೆ ಸದಸ್ಯರಾಗಿರುವುದರಿಂದ ಅಧಿಕಾರಿಗಳಿಗೆ ಇದು ನುಂಗಲಾರದ ಬಿಸಿ ತುಪ್ಪವಾಗಿದೆ. ಪೌರಾಯುಕ್ತರು ನೀಡುವ ಆದೇಶಕ್ಕೆ ನಾವು ಬದ್ಧರಾಗಿರುತ್ತೇವೆ.

- ಎನ್.ವಿ.ಶಿವಣ್ಣ, ಹಿರಿಯ ಆರೋಗ್ಯ ನಿರೀಕ್ಷಕ, ನಗರಸಭೆ, ಗೌರಿಬಿದನೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT