ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಕ್ಯಾಂಟೀನ್‌: ದೂರವಾಗದ ಸಮಸ್ಯೆ

ಯೋಜನೆ ಆರಂಭವಾಗಿ ಮೂರು ವರ್ಷ; ಕಳೆದ 15 ದಿನಗಳಿಂದ ಬಾಗಿಲು ಮುಚ್ಚಿದ್ದ ಕ್ಯಾಂಟೀನ್‌ಗಳು
Last Updated 5 ಏಪ್ರಿಲ್ 2021, 2:44 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಡವರು, ಕೂಲಿ ಕಾರ್ಮಿಕರು, ಹಮಾಲಿಗಳು, ನಿರ್ಗತಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರು, ಬೀದಿಬದಿಯ ವ್ಯಾಪಾರಿಗಳಿಗೆ ಕನಿಷ್ಠ ದರದಲ್ಲಿ ಊಟ, ಉಪಾಹಾರ ನೀಡುವ ಮೂಲಕ ಅನ್ನಕ್ಕೆ ಆಶ್ರಯವಾಗಿರುವ ಇಂದಿರಾ ಕ್ಯಾಂಟೀನ್‌ಗಳು ಜಿಲ್ಲೆಯಲ್ಲಿ ಇಂದಿಗೂ ಸಮಸ್ಯೆಗಳಿಂದ ಬಳಲುತ್ತಿವೆ.

ಯೋಜನೆ ಜಾರಿಯಾಗಿ ಮೂರು ವರ್ಷ ದಾಟಿದೆ. ಆದರೂ ಜಿಲ್ಲೆಯ ಒಂದೊಂದು ಕಡೆಗಳಲ್ಲಿಯೂ ಒಂದೊಂದು ಸಮಸ್ಯೆಗಳಿವೆ. ಕಳೆದ 15 ದಿನಗಳಿಂದ ಚಿಕ್ಕಬಳ್ಳಾಪುರ ಮತ್ತು ಗುಡಿಬಂಡೆಯಲ್ಲಿ ಬಾಗಿಲು ಮುಚ್ಚಿದ್ದ ಇಂದಿರಾ ಕ್ಯಾಂಟೀನ್ ಈಗ ಬಾಗಿಲು ತೆರೆದಿವೆ. ಚಿಕ್ಕಬಳ್ಳಾಪುರದಲ್ಲಿ ಪೂರ್ಣ ಪ್ರಮಾಣದಲ್ಲಿ ಬಾಗಿಲು ತೆರೆದಿಲ್ಲ. ಬೆಳಿಗ್ಗೆ ಉಪಾಹಾರ ನೀಡಿ ಬಾಗಲು ಹಾಕುವರು ಎನ್ನುವ ಆರೋಪ ಸಹ ವ್ಯಕ್ತವಾಗಿದೆ.

ಚಿಕ್ಕಬಳ್ಳಾಪುರ ಎಪಿಎಂಸಿಗೆ ಹಮಾಲಿಗಳು, ನಾನಾ ಭಾಗಗಳ ರೈತರು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನಿತ್ಯವೂ ಬರುವರು. ಇವರೆಲ್ಲರಿಗೂ ಅನ್ನಕ್ಕೆ ಪ್ರಮುಖವಾಗಿ ಆಶ್ರಯವಾಗಿರುವುದು ಇಂದಿರಾ ಕ್ಯಾಂಟೀನ್. ಆದರೆ 15 ದಿನಗಳ ಕಾಲ ಬಾಗಿಲು ಹಾಕಿದ್ದು ಈ ವರ್ಗಗಳ ಜನರಿಗೆ ತೀವ್ರವಾಗಿಯೇ ಸಮಸ್ಯೆ ಆಗಿತ್ತು.

‘ಇಂದಿರಾ ಕ್ಯಾಂಟೀನ್ ನಿರ್ವಹಿಸುತ್ತಿರುವ ಮುಖ್ಯ ಸಂಸ್ಥೆಯಿಂದ ಉಪಗುತ್ತಿಗೆ ಪಡೆದಿದ್ದೇವೆ. ಮುಖ್ಯ ಸಂಸ್ಥೆಯವರು ₹ 1.5 ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿದ್ದರು. ನಮಗೆ ನಿರ್ವಹಣೆ ಕಠಿಣ
ವಾಗಿತ್ತು. ಈ ಕಾರಣದಿಂದ 15 ದಿನ ಬಾಗಿಲು ಹಾಕಬೇಕಾಗಿತ್ತು. ಈಗ ಹಣ ಬಿಡುಗಡೆ ಮಾಡಿದ್ದಾರೆ. ಮೂರು ದಿನಗಳಿಂದ ಬಾಗಿಲು ತೆರೆದಿದ್ದೇವೆ’ ಎಂದು ಮಾಹಿತಿ ನೀಡುವರು ಗುತ್ತಿಗೆದಾರರ ಕಡೆಯವರು.

ಕೆಲವು ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ನೌಕರರಿಗೆ ನಾಲ್ಕೈದು ತಿಂಗಳ ವೇತನವನ್ನೂ ನೀಡಿಲ್ಲ.

ಬಾಗೇಪಲ್ಲಿಯಲ್ಲಿ ‌ಜಾಗದ ಸಮಸ್ಯೆಯಿಂದ ಇಂದಿಗೂ ಇಂದಿರಾ ಕ್ಯಾಂಟೀನ್ ತೆರೆದಿಲ್ಲ. ಗೌರಿಬಿದನೂರಿನಲ್ಲಿ ಕ್ಯಾಂಟೀನ್ ಬಾಗಿಲು ಮುಚ್ಚಿದೆ. ಶಿಡ್ಲಘಟ್ಟದಲ್ಲಿ ಕ್ಯಾಂಟೀನ್ ಇದ್ದರೂ ಜನರಿಂದ ದೂರ ಎನ್ನುವ ಸ್ಥಿತಿ ಇದೆ. ಚಿಂತಾಮಣಿಯಲ್ಲಿ ಒಂದು ತಿಂಗಳಿನಿಂದ ಬಾಗಿಲು ಮುಚ್ಚಿದೆ.

ಗುಡಿಬಂಡೆಯಲ್ಲಿ ಈಗ ಆರಂಭ: 15 ದಿನಗಳಿಂದ ಮುಚ್ಚಿದ್ದ ಗುಡಿಬಂಡೆ ತಾಲ್ಲೂಕು ಕಚೇರಿ ಬಳಿಯ ಇಂದಿರಾ ಕ್ಯಾಂಟೀನ್ ಏ.1ರಿಂದ ಆರಂಭವಾಗಿದೆ. ಅನುದಾನ ಕೊರತೆಯಿಂದ ಸಿಬ್ಬಂದಿ ಸ್ಥಳೀಯ ಅಂಗಡಿಗಳಿಂದ ಸಾಮಗ್ರಿಗಳನ್ನು ಸಾಲ ಪಡೆದಿದ್ದಾರೆ. ಸಿಬ್ಬಂದಿಗೆ ನಾಲ್ಕು ತಿಂಗಳ ವೇತನ ಸಹ ನೀಡಿಲ್ಲ.

ಬಡವರಿಂದ ದೂರ

ಶಿಡ್ಲಘಟ್ಟ: ಇಂದಿರಾ ಕ್ಯಾಂಟೀನ್ ಶಿಡ್ಲಘಟ್ಟದಲ್ಲಿ 2019ರ ಫೆಬ್ರುವರಿ 11ರಂದು ಆರಂಭವಾಯಿತು. ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಕಚೇರಿ ಪಕ್ಕದಲ್ಲಿನ ಸ್ಥಳದಲ್ಲಿ ಕ್ಯಾಂಟಿನ್ ನಿರ್ಮಿಸಲಾಗಿತ್ತು.

ಉದ್ಘಾಟನೆ ಸಂದರ್ಭದಲ್ಲಿಯೇ ಸ್ಥಳವೇ ಸಮರ್ಪಕವಾಗಿಲ್ಲ. ಬಡವರು, ಕೂಲಿಕಾರ್ಮಿಕರು ಮತ್ತು ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಎರಡು ಕಿ.ಮೀ ಗಿಂತಲೂ ಹೆಚ್ಚು ದೂರದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದರು. ಕ್ಯಾಂಟೀನ್‌ನಲ್ಲಿ ಕುಡಿಯುವ ನೀರಿನ ಫಿಲ್ಟರ್ ಕೆಟ್ಟಿದೆ. ಕೈತೊಳೆಯುವ ನೀರಿನ ನಲ್ಲಿಗಳು ಬತ್ತಿವೆ. ಪ್ರತಿದಿನ ಸುಮಾರು ಹತ್ತು ಕ್ಯಾನ್ ಶುದ್ಧ ನೀರನ್ನು ಖರೀದಿಸಿ ಅಡುಗೆಗೆ ಬಳಸುವ ಸ್ಥಿತಿ ಇದೆ. ಇಡ್ಲಿ ಮಾಡಲು ಮೆಷಿನ್ ಕೆಟ್ಟಿದೆ ಎಂದು ಚಿತ್ರಾನ್ನ ಮಾಡುತ್ತಾರೆ. ಮಧ್ಯಾಹ್ನ ಅನ್ನ, ಸಾಂಬರ್, ಉಪ್ಪಿನಕಾಯಿ ಮತ್ತು ಮೊಸರನ್ನು ಕೊಟ್ಟರೆ ರಾತ್ರಿ ರೈಸ್ ಬಾತ್ ಮಾಡುತ್ತಾರೆ. ರುಚಿಯ ಬಗ್ಗೆ ದೂರುಗಳಿಲ್ಲವಾದರೂ ಜನಗಳು ಬರುತ್ತಿರುವುದು ತೀರಾ ಕಡಿಮೆ.

‘ಕ್ಯಾಂಟೀನ್‌ಗೆ ಊಟ ಮಾಡಲು ಬರುವವರಲ್ಲಿ ವಿದ್ಯಾರ್ಥಿಗಳು ಹೆಚ್ಚು’ ಎನ್ನುವರು ಅಡುಗೆ ಸಿಬ್ಬಂದಿ ಡಿ.ಎನ್.ನಾಗರಾಜ್.

ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಕಾಲೇಜಿನ ಕೆಲವು ವಿದ್ಯಾರ್ಥಿಗಳು ದೂರದಿಂದ ನಡೆದು ಬಂದು ಕ್ಯಾಂಟೀನ್‌ನಲ್ಲಿ ಊಟ ಮಾಡುವರು. ಬೇಸಿಗೆಯಲ್ಲಿ ಎರಡು ಕಿ.ಮೀ ದೂರ ನಡೆದು ಬರಲು ಕಷ್ಟವಾಗುತ್ತದೆ ಎಂದು ವಿದ್ಯಾರ್ಥಿಗಳು ದೂರುವರು ಎಂದರು.

ತಿಂಗಳಿನಿಂದ ಬೀಗ

ಚಿಂತಾಮಣಿ: ಎಪಿಎಂಸಿ ಆವರಣದಲ್ಲಿರುವ ಕ್ಯಾಂಟೀನ್ ಬಡವರ ಪಾಲಿಗೆ ಅಕ್ಷಯಪಾತ್ರೆಯಾಗಿತ್ತು. ಆದರೆ ಕಳೆದ ಆರೇಳು ತಿಂಗಳಿನಿಂದ ಸೊರಗುತ್ತಿದೆ. ಒಂದು ತಿಂಗಳಿನಿಂದ ಕ್ಯಾಂಟೀನ್‌ಗೆ ಬೀಗ ಹಾಕಲಾಗಿದೆ. ಮಾರುಕಟ್ಟೆಗೆ ಬರುವ ರೈತರು, ಕೂಲಿ ಕಾರ್ಮಿಕರು, ಹಮಾಲಿಗಳಿಗೆ ಕಡಿಮೆ ಬೆಲೆಯಲ್ಲಿ ಊಟ, ತಿಂಡಿ ದೊರೆಯುವುದರಿಂದ ಹೆಚ್ಚು ಅನುಕೂಲವಾಗಿತ್ತು. ನಿತ್ಯ ಗರಿಷ್ಠ 650 ಜನರಿಗೆ ಊಟ, ಉಪಾಹಾರದ ಅವಕಾಶವಿದೆ. ವಾರದ ಸಂತೆ ಹಾಗೂ ಹರಾಜು ನಡೆಯುವ ದಿನಗಳಲ್ಲಿ ಗರಿಷ್ಠ ಜನರು ಊಟ ಮಾಡುತ್ತಾರೆ.

‘ನವಫೈಯಾಜ್ ಎಂಬ ಕಂಪನಿ ಜಿಲ್ಲೆಯ ಎಲ್ಲ ಕ್ಯಾಂಟೀನ್‌ಗಳ ಗುತ್ತಿಗೆ ಪಡೆದಿದೆ. ಈ ಸಂಸ್ಥೆಯಿಂದ ಲಕ್ಷಾಂತರ ಹಣ ಬಾಕಿ ಬರಬೇಕಾಗಿದೆ. ಕೆಲಸಗಾರರ ವೇತನ, ಆಹಾರ ಪದಾರ್ಥಗಳ ವೆಚ್ಚ ಭರಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಕೆಲವು ದಿನಗಳಿಂದ ಬಾಗಿಲು ಹಾಕಲಾಗಿತ್ತು. ಗುರುವಾರದಿಂದ ತೆರೆಯುತ್ತಿದ್ದೇವೆ’ ಎಂದು ಇಂದಿರಾ ಕ್ಯಾಂಟೀನ್ ನೋಡಿಕೊಳ್ಳುತ್ತಿರುವ ದಿಲೀಪ್ ತಿಳಿಸಿದರು.

ಸ್ಥಳದ ಗೊಂದಲ; ಆರಂಭವೇ ಇಲ್ಲ

ಬಾಗೇಪಲ್ಲಿ: ಜಾಗದ ಸಮಸ್ಯೆಯಿಂದ ಇಂದಿರಾ ಕ್ಯಾಂಟೀನ್ ಪಟ್ಟಣದಲ್ಲಿ ಇನ್ನೂ ಆರಂಭವಾಗಿಯೇ ಇಲ್ಲ. ಸಂತೇಮೈದಾನದಲ್ಲಿ ಪುರಸಭೆ ಕ್ಯಾಂಟೀನ್‍ಗೆ ಜಾಗ ನೀಡಿದೆ. ಕ್ಯಾಂಟೀನ್ ಕೆಲಸ ಆರಂಭವಾಗುವ ಸಂದರ್ಭದಲ್ಲಿ ಜನರಿಗೆ ದೂರ ಆಗುತ್ತದೆ ಎಂದು ಕೆಲ ಮುಖಂಡರು ಡಾ.ಎಚ್.ಎನ್.ವೃತ್ತದಲ್ಲಿ ಪ್ರತಿಭಟನೆ ಮಾಡಿದ್ದರು. ತಾಲ್ಲೂಕು ಪಂಚಾಯಿತಿ ಆವರಣ, ಸರ್ಕಾರಿ ಜಾಗ, ಪುರಸಭೆಯ ಸ್ವತ್ತಿನಲ್ಲಿ ಕ್ಯಾಂಟೀನ್ ಆರಂಭಿಸಬೇಕು ಎಂದು ಕೆಲವು ಸಂಘಟನೆಗಳು ಒತ್ತಾಯಿಸಿದ್ದವು.

ಈ ವಿಚಾರವಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮುಖಂಡರ ಸಭೆ ಮಾಡಿದರು. ಕ್ಯಾಂಟೀನ್ ಮಾಡಬೇಕು ಎಂದುಕೊಂಡಿದ್ದ ಸ್ಥಳವನ್ನು ಅಂಬೇಡ್ಕರ್ ಭವನಕ್ಕೆ ಮೀಸಲಿಡಲಾಗಿದೆ. ಇಲ್ಲಿ ಅಂಬೇಡ್ಕರ್ ಭವನ ನಿರ್ಮಿಸಬೇಕು ಎಂದು ಸಭೆಯಲ್ಲಿ ಪರಿಶಿಷ್ಟ ಸಮುದಾಯಗಳ ಮುಖಂಡರು ಆಗ್ರಹಿಸಿದ್ದರು. ಸಂತೇಮೈದಾನದಲ್ಲಿ ಕ್ಯಾಂಟೀನ್ ನಿರ್ಮಿಸಲು ಹಾಕಿರುವ ಸಿಮೆಂಟ್ ಗೋಡೆಗಳು ನೆಲಕ್ಕೆ ಉರುಳಿವೆ. ಕಿಟಕಿ, ಬಾಗಿಲುಗಳ ಗಾಜುಗಳು ಪುಡಿಯಾಗಿವೆ. ಕಾಮಗಾರಿ ಅರ್ಧಕ್ಕೆ ನಿಂತಿದೆ. ಸುತ್ತಲೂ ಮುಳ್ಳಿನ ಗಿಡಗಳು ಬೆಳೆದಿವೆ. ‘ಇಂದಿರಾ ಕ್ಯಾಂಟೀನ್ ಬಹಳ ಉಪಯುಕ್ತ. ಜನಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರು ಜನಪರ ಯೋಜನೆಗೆ ಅಡ್ಡಿಮಾಡಬಾರದು. ಪಟ್ಟಣದ ಮುಖ್ಯರಸ್ತೆಯಲ್ಲಿಯೇ ಕ್ಯಾಂಟೀನ್ ತೆರೆಯಬೇಕು’ ಎಂದು ಪಟ್ಟಣದ ನಿವಾಸಿ ಮೆಕಾನಿಕ್ ಬಾಬು ಮನವಿ ಮಾಡುವರು.

ನಿರ್ವಹಣೆಯ ಸಮಸ್ಯೆ

ಗೌರಿಬಿದನೂರು: ನಗರದಲ್ಲಿರುವ ಇಂದಿರಾ ಕ್ಯಾಂಟೀನ್ ಎರಡು ವಾರಗಳಿಂದ ‌ಸ್ಥಗಿತವಾಗಿದೆ. ಕ್ಯಾಂಟೀನ್ ‌ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರಿಗೆ ನಿಗದಿತ ಮಯದಲ್ಲಿ ಬಿಲ್ ಪಾವತಿಸದ ಕಾರಣ ಕ್ಯಾಂಟೀನ್ ಬಂದ್ ಆಗಿದೆ. ಶೀಘ್ರದಲ್ಲಿಯೇ ಬಾಗಿಲು ತೆರೆಯಲಿದೆ ಎನ್ನುವರು ನಗರಸಭೆ ಅಧಿಕಾರಿಗಳು.

ಆದರೆ ಸ್ಥಳೀಯರ ಪ್ರಕಾರ, ಕ್ಯಾಂಟೀನ್ ಆರಂಭದ ದಿನಗಳಲ್ಲಿ ಗುಣಮಟ್ಟದ ರುಚಿಯಾದ ಆಹಾರ ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ‌ನಿರ್ವಹಣೆ ಸಮಸ್ಯೆಯಿಂದ ಸ್ಥಳೀಯರು ಕ್ಯಾಂಟೀನ್‌ನತ್ತ ಸುಳಿಯುತ್ತಿಲ್ಲ ಎನ್ನುವರು.

ರಾಜಕೀಯ ಸ್ವಪ್ರತಿಷ್ಠೆ

ಬಾಗೇಪಲ್ಲಿ ಸಂತೇ ಮೈದಾನದಲ್ಲಿ ಕ್ಯಾಂಟೀನ್ ಮಾಡಿದೆವು. ಆದರೆ ಕೆಲವರು ವಿರೋಧ ಮಾಡಿದ್ದಾರೆ. ಮುಖ್ಯರಸ್ತೆಯಲ್ಲಿ ಜಾಗದ ಕೊರತೆ ಇದೆ. ಕೆಲವರು ರಾಜಕೀಯ, ಸ್ವಪ್ರತಿಷ್ಠೆ ಮಾಡಿದ್ದಾರೆ. ಕ್ಯಾಂಟೀನ್‌ಗೆ ಸ್ವಂತ ಹಣ ₹ 8 ಲಕ್ಷ ನೀಡಿದ್ದೇನೆ. ಅನ್ನ, ತಿಂಡಿ ತಯಾರಿಸುವ ಪಾತ್ರೆಗಳು ಇದೆ. ಮುಂದಿನ ದಿನಗಳಲ್ಲಿ ಕ್ಯಾಂಟೀನ್ ತೆರೆದು, ಜನರಿಗೆ ಯೋಜನೆ ತಲುಪಿಸುತ್ತೇನೆ.

ಎಸ್.ಎನ್.ಸುಬ್ಬಾರೆಡ್ಡಿ, ಶಾಸಕ, ಬಾಗೇಪಲ್ಲಿ

ತಾ.ಪ‍ಂ ಕ್ಯಾಂಟೀನ್ ಮಾಡಿ

ಬಾಗೇಪಲ್ಲಿಯ ಗೂಳೂರು ವೃತ್ತದಲ್ಲಿ ಬೆಳಿಗ್ಗೆ ನೂರಾರು ಕೃಷಿ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗುತ್ತಾರೆ. ಇಂತಹವರಿಗೆ ಯೋಜನೆ
ಸಹಕಾರಿ ಆಗುತ್ತದೆ. ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಮಾಡಿ, ಜನರಿಗೆ ಅನುಕೂಲ ಮಾಡಬೇಕು.

ರಿಜ್ವಾನ್ ಬಾಷ, ಕೂಲಿ ಕಾರ್ಮಿಕ, ಬಾಗೇಪಲ್ಲಿ

ಬಡವರಿಗೆ ಅನುಕೂಲ

ಕ್ಯಾಂಟೀನ್ ಕೂಲಿ ಕಾರ್ಮಿಕರು, ರೈತರು ಸೇರಿದಂತೆ ಬಡವರಿಗೆ ಅನುಕೂಲವಾಗುತ್ತಿತ್ತು. 20 ದಿನಗಳಿಂದ ಬಾಗಿಲು ಮುಚ್ಚಿದ್ದಾರೆ. ₹ 5ಕ್ಕೆ ತಿಂಡಿ, ₹ 10ಕ್ಕೆ ಊಟ ಎಲ್ಲಿ ದೊರೆಯುತ್ತದೆ?

ನರಸಿಂಹಪ್ಪ, ಕಾರ್ಮಿಕರು, ಚಿಂತಾಮಣಿ

ಸಮಸ್ಯೆ ಪರಿಹರಿಸಿ

ಕ್ಯಾಂಟೀನ್ ಬಂದ್‌ನಿಂದ ಬಡವರಿಗೆ ತೊಂದರೆಯಾಗಿದೆ. ಮೊದಲು ಸಮಸ್ಯೆಗಳನ್ನು ಪರಿಹರಿಸಿ ಬಡವರಿಗೆ ಸರ್ಕಾರ ಅನುಕೂಲ ಮಾಡಿಕೊಡಬೇಕು.

ಕೃಷ್ಣಪ್ಪ, ಕಾರ್ಮಿಕರು, ಚಿಂತಾಮಣಿ

ಉದ್ದೇಶ ವಿಫಲ

ಊರ ಹೊರಗೆ ನಿರ್ಮಾಣಗೊಂಡ ಕಾರಣ ಶಿಡ್ಲಘಟ್ಟದಲ್ಲಿ ಇಂದಿರಾ ಕ್ಯಾಂಟೀನ್ ಉದ್ದೇಶ ವಿಫಲವಾಗಿದೆ. ಬಡವರಿಗಾಗಿ ನಿರ್ಮಾಣ ಮಾಡಿಸಿರುವುದಾಗಿ ಹೇಳುವ ಜನಪ್ರತಿನಿಧಿಗಳು ಎಷ್ಟು ಬಾರಿ ಇಲ್ಲಿ ಬಂದು ತಿಂದು ಗುಣಮಟ್ಟ ಪರೀಕ್ಷಿಸಿದ್ದಾರೆ.

ರವಿಪ್ರಕಾಶ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ, ಶಿಡ್ಲಘಟ್ಟ

ಊರ ನಡುವೆ ಬೇಕಿತ್ತು

ಕ್ಯಾಂಟೀನ್‌ನಲ್ಲಿ ಊಟ ಮಾಡಿದೆ. ರುಚಿಯಿದೆ. ಆದರೆ ಜನರಿಗೆ ತುಂಬ ದೂರವಾಗಿದೆ. ಊರ ಮಧ್ಯದಲ್ಲಿರಬೇಕಿತ್ತು. ಇಲ್ಲಿನ ಯಂತ್ರೋಪಕರಣಗಳನ್ನು, ನೀರಿನ ಫಿಲ್ಟರ್‌ಗಳನ್ನು ದುರಸ್ತಿ ಮಾಡಬೇಕು.

ವೆಂಕಟೇಶಪ್ಪ, ವೀರಾಪುರ, ಶಿಡ್ಲಘಟ್ಟ ತಾ

ನಮ್ಮದು ಮೇಲ್ವಿಚಾರಣೆ ಮಾತ್ರ

ಜಿಲ್ಲಾಧಿಕಾರಿ ಟೆಂಡರ್ ಮೂಲಕ ಗುತ್ತಿಗೆದಾರರನ್ನು ನೇಮಕ ಮಾಡುವರು. ಅವರಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಆಗುತ್ತದೆ. ಕಾಂಟೀನ್‌ನಲ್ಲಿ ದೊರೆಯುವ ಸೌಲಭ್ಯಗಳು, ಆಹಾರದ ಗುಣಮಟ್ಟದ ಮೇಲ್ವಿಚಾರಣೆ ಮಾತ್ರ ನಗರಸಭೆಯ ಕರ್ತವ್ಯ.

ಚೇತನ್ ಎಸ್.ಕೊಳವಿ, ಪೌರಾಯುಕ್ತ

ವರದಿ: ಡಿ.ಎಂ.ಕುರ್ಕೆ ಪ್ರಶಾಂತ್, ಪಿ.ಎಸ್.ರಾಜೇಶ್, ಎಂ.ರಾಮಕೃಷ್ಣಪ್ಪ, ಎ.ಎಸ್.ಜಗನ್ನಾಥ್, ಡಿ.ಜಿ.ಮಲ್ಲಿಕಾರ್ಜುನ್, ಜೆ.ವೆಂಕಟರಾಯಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT