ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರಿಗೆ ತಾರತಮ್ಯ ಸಲ್ಲದು

ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಮಟ್ಟದ ಏಡ್ಸ್ ದಿನದ ಕಾರ್ಯಕ್ರಮ
Last Updated 2 ಡಿಸೆಂಬರ್ 2022, 4:09 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದಲ್ಲಿ ಗುರುವಾರ ನಡೆದ ವಿಶ್ವ ಏಡ್ಸ್ ದಿನದ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೆಳಿಗ್ಗೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮಿಕಾಂತ್ ಜೆ. ಮಿಸ್ಕಿನ್ ಅವರು ವಿಶ್ವ ಏಡ್ಸ್ ದಿನಾಚರಣೆಯ 2022ರ ಜಾಥಾಕ್ಕೆ ಚಾಲನೆ ನೀಡಿದರು.

ಕಾಲೇಜಿನ ಆವರಣದಿಂದ ಬಿ.ಬಿ ರಸ್ತೆ ಮೂಲಕ ಜಿಲ್ಲಾಸ್ಪತ್ರೆಯವರೆಗೆ ಜಾಥಾ ಸಾಗಿತು. ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಎಚ್.ಐ.ವಿ ಸೋಂಕು ನಿಯಂತ್ರಣಾ ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದು ಸಾಗಿದರು. ಕಲಾತಂಡಗಳು ಜಾಥಾಕ್ಕೆ ಸಾಥ್ ನೀಡಿದ್ದವು.ಐ.ಇ.ಸಿ ಜಾಗೃತಿ ಮಳಿಗೆಗಳ ಮೂಲಕ ಏಡ್ಸ್ ನಿರ್ಮೂಲನೆಗೆ ಘೋಷಣೆಗಳು ಮೊಳಗಿದವು.

ಏಡ್ಸ್ ನಿರ್ಮೂಲನೆ ಕುರಿತು ಕರಪತ್ರಗಳು ಮತ್ತು ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸೋಂಕು ನಿಯಂತ್ರಣದಲ್ಲಿ ತೊಡಗಿಸಿಕೊಂಡ ವೈದ್ಯರನ್ನು ಎ.ಆರ್.ಟಿ. ಕೇಂದ್ರದ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.

ಜಿಲ್ಲಾಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ವೇದಿಕ ಕಾರ್ಯಕ್ರಮಕ್ಕೆ ‌ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದರು.

ಎಚ್‌ಐವಿ ಸೋಂಕಿತರಿಗೆ ತಾರತಮ್ಯ ಸಲ್ಲದು.ಸೋಂಕಿತರನ್ನು ತಾರತಮ್ಯದಿಂದ ನೋಡಿದರೆ ಎರಡು ತಿಂಗಳಿಂದ, ಎರಡು ವರ್ಷದ ವರೆಗೆ ಜೈಲು ಶಿಕ್ಷೆ ಅಥವಾ ಒಂದು ಲಕ್ಷದವರೆಗೂ ದಂಡ ವಿಧಿಸುವ ಅವಕಾಶ ಕಾನೂನಿನಲ್ಲಿ ಇದೆ ಎಂದರು.

ರಾಜ್ಯದಲ್ಲಿ ಸೋಂಕು ಕಡಿಮೆಯಾಗುತ್ತಿದೆ. ಸೋಂಕಿನ ಬಗ್ಗೆ ಅರಿವು ಕಾರ್ಯಕ್ರಮಗಳು ಹೆಚ್ಚಾಗಿರು ವುದರಿಂದ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ.ಸೋಂಕಿನ ಬಗ್ಗೆ ಉದಾಸೀನ ಸಲ್ಲದು. ನಿಯಂತ್ರಣಾ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು. ರಾಜ್ಯದಲ್ಲಿ ಸೋಂಕನ್ನು ಶೂನ್ಯಕ್ಕೆ ತರಲು ಪ್ರಯತ್ನಿಸಬೇಕು. 2030ರ ಒಳಗೆ ಸೋಂಕನ್ನು ರಾಜ್ಯದಿಂದ ಓಡಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಎಚ್‌ಐವಿ ಸೋಂಕು ಜಗತ್ತಿನಲ್ಲಿ1981ರಲ್ಲಿ ಮೊದಲ ಪತ್ತೆಯಾಯಿತು. ಎಚ್‌ಐವಿಗೆ ಈ ಹಿಂದೆ ನಿಖರ ಚಿಕಿತ್ಸೆ ಇರಲಿಲ್ಲ. ಇದರಿಂದ ಸೋಂಕಿತರಿಗೆ ಸಾಮಾಜಿಕ ಬಹಿಷ್ಕಾರದಂತಹ ಪರಿಸ್ಥಿತಿ ಇತ್ತು. ಚಿಕಿತ್ಸೆ ಯಿಂದ ಸೋಂಕಿತರು ದೀರ್ಘ ಕಾಲದವರೆಗೂ ಬದುಕುತ್ತಿದ್ದಾರೆ. ಕೆಲವರು ಎರಡು ದಶಕಗಳಿಂದ ಸಹಜವಾಗಿ ಬದುಕುತ್ತಿರುವುದೇ ಇದಕ್ಕೆ ನಿದರ್ಶನವಾಗಿದೆ ಎಂದರು.

ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣಿಸುವ ಕಾಯಿಲೆಗಳಲ್ಲಿ ಇದೂ ಒಂದಾಗಿದೆ. ಟ್ರಕ್ ಚಾಲಕರು ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗಿದವರಲ್ಲಿ ಸೋಂಕು ಹೆಚ್ಚು ಕಾಣಿಸಿಕೊಂಡಿದೆ.ರಾಜ್ಯದ 7 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಿದೆ. ರಾಜ್ಯದಲ್ಲಿ 3.73 ಲಕ್ಷ ಮಂದಿ ಎಚ್‌ಐವಿ ಸೋಂಕಿತರಿದ್ದಾರೆ. ಇವರಲ್ಲಿ 1.76 ಲಕ್ಷ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕಿ ಡಾ. ಇಂದುಮತಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಡಾ. ಅರುಂಧತಿ ಚಂದ್ರಶೇಖರ್, ರಾಜ್ಯ ಏಡ್ಸ್‌ ಪ್ರಿವೆನ್‌ಷನ್ ಸೊಸೈಟಿ ಯೋಜನಾ ನಿರ್ದೇಶಕಿ ಕೆ.ಲೀಲಾವತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಸ್.ಮಹೇಶ್ ಕುಮಾರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಯಲ್ಲ ರಮೇಶ್ ಬಾಬು,ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ ಇತರರು ಇದ್ದರು.

ಪ್ರಾಣೇಶ್, ಮಹಾಮನಿಯ ಹಾಸ್ಯದ ಹೊನಲು

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್ ಮತ್ತು ಬಸವರಾಜ ಮಹಾಮನಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಎಚ್‌ಐವಿ ಸೋಂಕು ನಿಯಂತ್ರಣ ಕುರಿತು ಹಾಸ್ಯದ ಮೂಲಕ ಜಾಗೃತಿ ಮೂಡಿಸಿದರು. ಸಾರ್ವಜನಿಕರು ಹಾಸ್ಯದ ಹೊನಲಿನಲ್ಲಿ ತೇಲಿದರು. ಎಚ್.ಐ.ವಿ ಸೋಂಕಿತರನ್ನು ತಾರತಮ್ಯ ಭಾವದಿಂದ ನೋಡುವುದು ತಪ್ಪು ಎನ್ನುವುದನ್ನು ಮನಮುಟ್ಟುವಂತೆ ಕಲಾವಿದರು ತಿಳಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT