ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ದೊಡ್ಡ ಗಾತ್ರದ ಚೇಳು

Last Updated 22 ಜನವರಿ 2020, 16:21 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಚೇಳು ಕುಟುಕಿದರೆ ಅತೀವ ನೋವಾಗುತ್ತದೆ. ಸಾಮಾನ್ಯವಾಗಿ ರೈತರು ತಮ್ಮ ಜಾನುವಾರುಗಳಿಗೆ ಚೇಳು ಕುಟುಕುವ ಅಪಾಯವನ್ನರಿತು ಸದಾ ಎಚ್ಚರಿಕೆ ವಹಿಸುತ್ತಾರೆ.

ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನ ಕೆ.ಟಿ.ಮಂಜು ಅವರ ನೀರಿನ ಹೊಂಡ ಶುಚಿಗೊಳಿಸುವಾಗ ದೊಡ್ಡ ಗಾತ್ರದ ಚೇಳೊಂದು ಕಾಣಿಸಿಕೊಂಡಿದ್ದು, ಅದನ್ನು ಸ್ನೇಕ್ ನಾಗರಾಜ್ ಅವರು ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.

ಚೇಳು ತನ್ನ ಆಹಾರಕ್ಕಾಗಿ ಬೇಟೆಗಳ ಹಿಡಿಯಲು ತನ್ನ ವಿಷವನ್ನು ಬಳಸಿ ಆ ಬೇಟೆಯನ್ನು ನಿಷ್ಕ್ರಿಯಗೊಳಿಸಿ ಸೇವಿಸುತ್ತದೆ. ಪರಭಕ್ಷಕಗಳ ವಿರುದ್ಧ ರಕ್ಷಣೆಗಾಗಿಯೂ ಇದು ಬಳಕೆಯಾಗುತ್ತದೆ. ಈ ವಿಷವು ಕೆಲವು ಸಂಯುಕ್ತಗಳ ಮಿಶ್ರಣವಾಗಿದೆ.(ನರಕೋಶದ ನಂಜುಸಂಯುಕ್ತ, ಎಂಜೈಮ್ ರಾಸಾಯನಿಕಗಳು) ಇವು ದುಷ್ಪರಿಣಾಮ ಬೀರುವುದಲ್ಲದೇ ಕೆಲವೊಂದು ಪ್ರಾಣಿಗಳನ್ನು ಕೊಲ್ಲುವಷ್ಟು ಶಕ್ತವಾಗಿರುತ್ತದೆ.

‘ಚೇಳು ನಿಶಾಚರಿ, ಹಗಲೆಲ್ಲ ಕಲ್ಲುಗಳ ಪೊಟರೆಗಳಲ್ಲೊ ತೊಗಟೆ, ಎಲೆ, ಕಸಕಡ್ಡಿ, ಮನೆಗಳ ಹೆಂಚುಗಳ ಬುಡದಲ್ಲೊ ಅಡಗಿದ್ದು ಕತ್ತಲಾದ ನಂತರ ಆಹಾರ ಅರಸಿಕೊಂಡು ಹೊರಬರುತ್ತದೆ. ಸಣ್ಣಪುಟ್ಟ ಕೀಟಗಳು ಇದರ ಮುಖ್ಯ ಆಹಾರ. ಇದು ಆಹಾರವನ್ನು ಸೇವಿಸುವ ಕ್ರಮ ಬಲು ವಿಚಿತ್ರ. ಯಾವುದಾದರೂ ಕೀಟವೊಂದು ಸಿಕ್ಕರೆ ಅದನ್ನು ತನ್ನ ಚಿಮಟದಂತಿರುವ ಕೈಗಳಿಂದ ಬಿಗಿಯಾಗಿ ಹಿಡಿದು, ಕೊಂಡಿಯಿಂದ ಕುಟುಕಿ, ಆ ಪ್ರಾಣಿಯೊಳಕ್ಕೆ ತನ್ನ ಕಿಣ್ವಗಳನ್ನು ಸೇರಿಸುತ್ತದೆ. ಕಿಣ್ವಗಳ ಚಟುವಟಿಕೆಯಿಂದ ಆಹಾರ ಪ್ರಾಣಿಯ ಒಳ ಅಂಗಾಂಶಗಳೆಲ್ಲ ದ್ರವರೂಪಕ್ಕೆ ತಿರುಗುತ್ತದೆ. ಆಗ ಅದಕ್ಕೆ ತನ್ನ ಬಾಯಿ ಹಚ್ಚಿ ಆಹಾರದ್ರವವನ್ನು ಹೀರಿಕೊಳ್ಳುತ್ತದೆ. ಚೇಳು ಆಹಾರವಿಲ್ಲದೆ ಬಹಳ ದಿನ, ಕೆಲವೊಮ್ಮೆ ವರ್ಷಕ್ಕೂ ಹೆಚ್ಚು ಕಾಲ ಬದುಕಿರಬಲ್ಲದು. ಹಾಗೆಯೇ ಅದಕ್ಕೆ ನೀರಿನ ಆವಶ್ಯಕತೆಯೂ ಬಹಳ ಕಡಿಮೆ. ಚೇಳಿನ ಕಣ್ಣುಗಳು ಇರುವುದು ಬೆನ್ನ ಮೇಲೆ. ಹಾವಿನಂತೆ ಚೇಳು ಕೂಡ ನಮ್ಮ ಜೀವಸಂಕುಲದ ಒಂದು ಭಾಗ. ನಮಗೆ ಅಪಾಯವೆಂದು ಕೊಲ್ಲಬಾರದು. ಅದನ್ನು ಸುರಕ್ಷಿತ ಸ್ಥಳದಲ್ಲಿ ಬಿಡಬೇಕಷ್ಟೆ’ ಎಂದು ಸ್ನೇಕ್ ನಾಗರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT