ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೊಂದು, ಜೆಡಿಎಸ್‌ಗೊಂದು ನೀತಿಯೇ?

ಸಾರ್ವಜನಿಕ ಸಭೆಯಲ್ಲಿ ಸಾಲ ವಿತರಣೆಗೆ ತಡೆ; ಸರ್ಕಾರದ ಆದೇಶಕ್ಕೆ ಶಾಸಕ ಕೃಷ್ಣಾರೆಡ್ಡಿ ಕಿಡಿ
Last Updated 7 ಡಿಸೆಂಬರ್ 2022, 4:26 IST
ಅಕ್ಷರ ಗಾತ್ರ

ಚಿಂತಾಮಣಿ:ಚಿಕ್ಕಬಳ್ಳಾಪುರದಲ್ಲಿ ಕಳೆದ ವಾರ ಸಭೆ ಮಾಡಿ ಎಲ್ಲ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ಕೊಟ್ಟಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಯಾವುದೇ ಅಡೆ ತಡೆ ಇಲ್ಲ. ಆದರೆ ಚಿಂತಾಮಣಿಯಲ್ಲಿ ಸಾಲ ವಿತರಣೆ ಕಾರ್ಯಕ್ರಮಕ್ಕೆ ಮುಂದಾದರೆ ಸರ್ಕಾರದಿಂದ ಆದೇಶ ಹೊರಡಿಸುತ್ತಾರೆ. ಸಾಲ ವಿತರಣೆಯ ವಿಚಾರದಲ್ಲಿ ಬಿಜೆಪಿಯವರಿಗೆ ಒಂದು ನೀತಿ ಜೆಡಿಎಸ್, ಕಾಂಗ್ರೆಸ್‌ನವರಿಗೆ ಒಂದು ನೀತಿಯೇ ಎಂದುಶಾಸಕ ಎಂ. ಕೃಷ್ಣಾರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಗೊಲ್ಲಹಳ್ಳಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಸಾಲ ವಿತರಣೆ ಮಾಡುವುದು ಸಮಂಜಸವಲ್ಲ ಎಂಬ ಸರ್ಕಾರದ ಆದೇಶವು ವಾಮಮಾರ್ಗದ್ದಾಗಿದೆ’ ಎಂದರು.

‘ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಸ್ತ್ರೀಶಕ್ತಿ ಸಂಘಗಳು ಮತ್ತು ಇತರೆ ಸಂಘಗಳ ಸದಸ್ಯರಿಗೆ ಸಾಲ ವಿತರಣೆ ಮಾಡುವುದು ಸಮಂಜಸವಲ್ಲ ಎಂಬ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಆದೇಶ ಹೊರಡಿಸಿದ್ದಾರೆ.ಚಿಕ್ಕಬಳ್ಳಾಪುರ, ಬಾಗೇಪಲ್ಲಿಯಲ್ಲಿ ಕಳೆದ ವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸಾರ್ವಜನಿಕ ಸಮಾರಂಭಗಳಲ್ಲಿ ಸಾಲದ ಚೆಕ್ ವಿತರಿಸಿದ್ದಾರೆ. ನಾವು ಸಾಲ ವಿತರಿಸುವ ಸಮಾರಂಭಗಳಿಗೆ ಮಾತ್ರ ಆದೇಶ ಅನ್ವಯವಾಗುತ್ತದೆಯೇ? ಬಿಜೆಪಿಗೆ ಒಂದು ನ್ಯಾಯ, ಇತರರಿಗೆ ಒಂದು ನ್ಯಾಯವೇ? ಸಾಲ ನೀಡುವುದು ಸಾರ್ವಜನಿಕರ ತೆರಿಗೆಯ ಹಣದಿಂದ, ಚುನಾಯಿತ ಜನಪ್ರತಿನಿಧಿಯಾಗಿ ಸಾಲ ವಿತರಿಸುವ ಹಕ್ಕು ಶಾಸಕರಿಗೆ ಇದೆ’ ಎಂದರು.

ಅಯೋಗ್ಯ ಅಧಿಕಾರಿಗಳು ಸರ್ಕಾರ ಮತ್ತು ಮಂತ್ರಿಯ ಮಾತು ಕೇಳಿ ಇಂತಹ ಆದೇಶಗಳನ್ನು ಮಾಡುತ್ತಿದ್ದಾರೆ.ಸಾರ್ವಜನಿಕ ಸಭೆ, ಸಮಾರಂಭದಲ್ಲಿ ಸಾಲ ವಿತರಣೆ ಮಾಡಬಾರದು ಎಂಬ ಆದೇಶ ಹಿಂಪಡೆಯದಿದ್ದರೆ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುಡೇ ಶ್ರೀನಿವಾಸ್, ಬಾರ್ ವೆಂಕಟರವಣಪ್ಪ, ದೊಡ್ಡಬೊಮ್ಮನಹಳ್ಳಿ ವೆಂಕಟರೆಡ್ಡಿ, ಕುರುಬೂರು ನಟರಾಜ್ ಮತ್ತಿತರರು ಭಾಗವಹಿಸಿದ್ದರು.

ಆದೇಶದಲ್ಲಿ ಇರುವುದೇನು?

ವ್ಯವಸಾಯ ಸೇವಾ ಸಹಕಾರ ಸಂಘಗಳು ಸಂಘದ ಸದಸ್ಯರಿಗೆ ಸಾಲ ವಿತರಣೆ ಮಾಡುವ ಕಾರ್ಯಕ್ರಮವನ್ನು ಸಾರ್ವಜನಿಕ ಸಮಾರಂಭದ ರೀತಿಯಲ್ಲಿ ನಡೆಸಲಾಗುತ್ತಿದೆ. ಇದು ಚುನಾವಣೆ ವರ್ಷವಾಗಿರುವುದರಿಂದ ಸಹಕಾರ ಸಂಘಗಳ ಸಾಲ ವಿತರಣೆಯನ್ನು ಸಾರ್ವಜನಿಕ ಸಮಾರಂಭ ರೀತಿ ನಡೆಸುವುದು ಸರಿಯಲ್ಲ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಸಾಲವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗಬೇಕು. ಇನ್ನು ಮುಂದೆ ಸಾರ್ವಜನಿಕ ಸಮಾರಂಭದಲ್ಲಿ ಸಾಲ ವಿತರಣೆ ಮಾಡಿದ್ದು ಕಂಡುಬಂದರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುತ್ತದೆ. ಸಾಲ ವಿತರಣೆಯು ಸಂಘದ ಆವರಣದಲ್ಲೇ ನಡೆಯಬೇಕು. ಜತೆಗೆ ಆಡಳಿತ ಮಂಡಳಿ ಹಾಗೂ ಸಂಘದ ಸದಸ್ಯರನ್ನು ಮಾತ್ರ ಒಳಗೊಂಡಿಬೇಕು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT