ಶನಿವಾರ, ಡಿಸೆಂಬರ್ 7, 2019
21 °C

ವಿಶ್ವವೇ ನೋಡಲಿ|ಇಸ್ರೋ ವಿಜ್ಞಾನಿಗಳಿಗೆ ಪತ್ರ ಬರೆದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಚಂದ್ರಯಾನ 2ರ ಕಕ್ಷಾಗಾಮಿ (ಆರ್ಬಿಟರ್) ಉತ್ತಮವಾಗಿದ್ದು, ಅದಕ್ಕೆ ನಿಯೋಜಿಸಿದ್ದ ಪ್ರಯೋಗಗಳಲ್ಲಿ ನಿರತವಾಗಿದೆ. ಇಸ್ರೋ ವಿಜ್ಞಾನಿಗಳ ಸಾಧನೆಯ ಬಗ್ಗೆ ಜಗತ್ತೇ ಕೊಂಡಾಡುತ್ತಿದೆ. ದೇಶ ವಿದೇಶಗಳಿಂದ ಇಸ್ರೋ ವಿಜ್ಞಾನಿಗಳಿಗೆ ಬೆಂಬಲ ಶುಭಾಶಯಗಳನ್ನು ತಿಳಿಸಿದ್ದಾರೆ.

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಾವೂ ಕೂಡ ಇಸ್ರೋ ವಿಜ್ಞಾನಿಗಳಿಗೆ ಶುಭಾಶಯ ತಿಳಿಸುತ್ತೇವೆಂದು ಶಿಕ್ಷಕರಿಗೆ ತಿಳಿಸಿ, ಪತ್ರಗಳನ್ನು ಬರೆದಿದ್ದಾರೆ.

‘ನಿಮ್ಮ ಮುಂದಿನ ಯೋಜನೆಗಳು ಕೂಡ ಯಶಸ್ವಿಯಾಗಲಿ, ನಮ್ಮ ದೇಶದ ಕೀರ್ತಿ ಪ್ರಪಂಚಕ್ಕೆ ಹರಡಲಿ, ನಮ್ಮ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಇಡೀ ಪ್ರಪಂಚ ತಿರುಗಿ ನೋಡುವಂತಾಗಲಿ’ ಎಂದು ಮಕ್ಕಳು ಹಾರೈಸಿದ್ದಾರೆ. ಏಳನೇ ತರಗತಿಯ ಪವನ್, ಮೋಹಿತ್, ವರ್ಷಿತ, ಸ್ಫೂರ್ತಿ ತಮ್ಮ ಎಲ್ಲ ಸ್ನೇಹಿತರನ್ನೂ ಹುರಿದುಂಬಿಸಿ ಪತ್ರ ಬರೆದಿದ್ದಾರೆ ಎಂದು ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ತಿಳಿಸಿದರು.

‘ಒಬ್ಬೊಬ್ಬ ವಿದ್ಯಾರ್ಥಿಯೂ ವಿಭಿನ್ನವಾಗಿ ತಮ್ಮ ಅನಿಸಿಕೆಗಳನ್ನು ಪತ್ರದಲ್ಲಿ ಬರೆದಿದ್ದಾರೆ. ಚಂದ್ರಯಾನ 2ರ ರಾಕೆಟ್ ಉಡಾವಣೆಯನ್ನು ದೂರದರ್ಶನದಲ್ಲಿ ನೋಡಿದ್ದ ಮಕ್ಕಳು ಆಗ ಅನುಭವಿಸಿದ್ದ ಕಾತರ, ಆತಂಕದ ಕ್ಷಣಗಳು, ಆ ಸಂದರ್ಭದಲ್ಲಿ ಅವರ ಮನಸ್ಸಿನ ಭಾವನೆಗಳು, ಪ್ರಶ್ನೆಗಳನ್ನೆಲ್ಲ ಅಭಿವ್ಯಕ್ತಿಸಿದ್ದಾರೆ. ವಿಜ್ಞಾನ ಕ್ಷೇತ್ರದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿದೆ. ಹಲವರಿಗೆ ವಿಜ್ಞಾನಿಗಳಾಗುವ ಕನಸು ಹುಟ್ಟಿದೆ’ ಎಂದು ಶಿಕ್ಷಕ ಚಾಂದ್ ಪಾಷಾ ಸಂತಸ ವ್ಯಕ್ತಪಡಿಸಿದರು.

ಪ್ರಪಂಚವೇ ನಮ್ಮತ್ತ ನೋಡುವಂತೆ ಮಾಡಿರುವ ನಿಮಗೆ ಸಾವಿರ ಸಾವಿರ ಚಪ್ಪಾಳೆ ಎಂದೊಬ್ಬರು ಬರೆದಿದ್ದರೆ. ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರೂ ನಿಮ್ಮ ಬಗ್ಗೆ ಹೆಮ್ಮೆ ಪಡಬೇಕು ಎಂದೊಬ್ಬರು ಬರೆದಿದ್ದಾರೆ. ನಿಮ್ಮನ್ನು ಸದಾ ನಾವು ಬೆಂಬಲಿಸುತ್ತೇವೆ ಎಂದು ತಮ್ಮ ಮುಗ್ದ ಮನಸ್ಸಿನ ಪದಗಳಲ್ಲಿ ಮಕ್ಕಳು ಪತ್ರಗಳನ್ನು ಬರೆದಿದ್ದಾರೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು