ಬುಧವಾರ, ಅಕ್ಟೋಬರ್ 16, 2019
22 °C
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಜಿ.ಎಚ್.ನಾಗರಾಜ್ ಅವರ ಮನೆ ತಪಾಸಣೆ, ಅನರ್ಹ ಶಾಸಕ, ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರ ಆರೋಪ

ಐಟಿ ದಾಳಿ ರಾಜಕೀಯ ಪ್ರೇರಿತ?

Published:
Updated:
Prajavani

ಚಿಕ್ಕಬಳ್ಳಾಪುರ: ನಗರದಲ್ಲಿರುವ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಸೋದರ ಅಳಿಯ ಜಿ.ಎಚ್.ನಾಗರಾಜ್ ಅವರ ಮನೆ ಮೇಲೆ ಗುರುವಾರ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ, ಕಾಂಗ್ರೆಸ್ ಮುಖಂಡರು ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯ ಕಾರ್ಯದರ್ಶಿಯೂ ಆಗಿರುವ ನಾಗರಾಜ್ ಅವರು ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವುದು ‘ರಾಜಕೀಯ ಪ್ರೇರಿತ ದಾಳಿ’ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತಿದೆ.

ಐಟಿ ದಾಳಿ ಸುದ್ದಿ ತಿಳಿಯುತ್ತಿದ್ದಂತೆ ಪ್ರಶಾಂತ್ ನಗರದಲ್ಲಿರುವ ನಾಗರಾಜ್ ಅವರ ಮನೆಯತ್ತ ಧಾವಿಸಿದ ಮುಖಂಡರು, ಅನರ್ಹ ಶಾಸಕ ಡಾ.ಕೆ.ಸುಧಾಕರ್ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಭರಿತರಾಗಿ ವಾಗ್ದಾಳಿ ನಡೆಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಲಾಯರ್ ನಾರಾಯಣಸ್ವಾಮಿ, ‘ಕಾಂಗ್ರೆಸ್‌ಗೆ ದ್ರೋಹ ಬಗೆದು ಬಿಜೆಪಿ ಸೇರಲು ಹೊರಟಿರುವ ಅನರ್ಹ ಶಾಸಕ ಸುಧಾಕರ್ ಅವರು ಉಪ ಚುನಾವಣೆಯಲ್ಲಿ ತನ್ನ ವಿರುದ್ಧ ನಾಗರಾಜ್ ಅವರು ಸ್ಪರ್ಧಿಸಿದರೆ ತನ್ನ ಸೋಲು ಖಚಿತ ಎಂದು ಅರಿತು, ಬಿಜೆಪಿ ವರಿಷ್ಠರ ಮೇಲೆ ಒತ್ತಡ ತಂದು ಈ ದಾಳಿ ನಡೆಸಿದ್ದಾರೆ’ ಎಂದು ಆರೋಪಿಸಿದರು.

‘ಸುಧಾಕರ್ ಮತ್ತು ಅವರ ತಂದೆ ಕೇಶವರೆಡ್ಡಿ ಅವರ ಆಸ್ತಿ 2008ರಲ್ಲಿ ಎಷ್ಟಿತ್ತು? ಅವರು ಶಾಸಕರಾದ ಬಳಿಕ ಅದರ ಪ್ರಮಾಣ ಎಷ್ಟಾಗಿದೆ? ಅವರಿಗೆ ಪೇರೇಸಂದ್ರದಲ್ಲಿ ₹40 ಕೋಟಿ ಮೌಲ್ಯದ ಶಿಕ್ಷಣ ಸಂಸ್ಥೆ, ಬೆಂಗಳೂರಿನಲ್ಲಿ ₨40 ಕೋಟಿ ಮೌಲ್ಯದ ಬಂಗಲೆ, ಓಡಾಡಲು ಐಷಾರಾಮಿ ಕಾರು ಎಲ್ಲಿಂದ ಬರುತ್ತವೆ? ಅವರಿಗೆ ಯಾವ ಉದ್ಯಮದಲ್ಲಿ ಇಷ್ಟೊಂದು ಹಣ ಬಂತು? ಬೇನಾಮಿ ಕಂಪೆನಿಗಳ ಹೆಸರಿನಲ್ಲಿ ದುಡ್ಡು ಮಾಡುತ್ತಿರುವ ಅವರು ನಿಜವಾದ ಕಳ್ಳರು. ಅವರ ಮನೆಗಳ ಮೇಲೆ ಏಕೆ ದಾಳಿಗಳು ನಡೆಸಬಾರದು’ ಎಂದು ಪ್ರಶ್ನಿಸಿದರು.

‘ಚುನಾವಣೆ ಸಂದರ್ಭದಲ್ಲಿ ಪ್ರತಿ ಸ್ಪರ್ಧಿಗಳನ್ನು ಹತ್ತಿಕ್ಕುವ ಕೆಲಸ ಮಾಡಲು ಈ ದಾಳಿ ನಡೆಸಿದ್ದಾರೆ. ನಾಗರಾಜ್ ಅವರು ಮಾನಸಿಕ ಖಿನ್ನತೆಗೆ ಒಳಗಾದರೆ, ನಾನೇ ಚುನಾವಣೆಯಲ್ಲಿ ಪುನಃ ಗೆದ್ದು ನಿರಂಕುಶ ಪ್ರಭುತ್ವ ಸ್ಥಾಪಿಸಬಹುದು ಎಂಬ ಉದ್ದೇಶದಿಂದ ಸುಧಾಕರ ಈ ಕೆಲಸ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಸಿಎಂ ಯಡಿಯೂರಪ್ಪ ಅವರು ಈಗಾಗಲೇ ಅಧಿಕಾರಿಗಳಿಗೆ ಅನರ್ಹ ಶಾಸಕರ ಮಾತು ಕೇಳುವಂತೆ ಸೂಚನೆ ನೀಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನೆರೆ ಸಂತ್ರಸ್ತರಿಗೆ ಪರಿಹಾರ ನೀಡದ ಸರ್ಕಾರದ ಕ್ರಮ ಖಂಡಿಸಿ ಕಾಂಗ್ರೆಸ್ ಅಧಿವೇಶನದಲ್ಲಿ ಅಹೋರಾತ್ರಿ ಧರಣಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದ್ದರಿಂದ ಜನರ ಗಮನ ಬೇರೆಡೆ ಸೆಳೆಯಲು ಈ ದಾಳಿ ನಡೆಸಲಾಗಿದೆ. ಬಿಜೆಪಿಯಲ್ಲಿ ಶ್ರೀಮಂತರು ಇಲ್ಲವೆ? ಎಲ್ಲರೂ ಬಡವರೇ ಇದ್ದಾರಾ? ಜನ ಎಲ್ಲಾ ನೋಡುತ್ತಿದ್ದಾರೆ. ಅವರೇ ತೀರ್ಮಾನ ಮಾಡುತ್ತಾರೆ’ ಎಂದು ಕಾಂಗ್ರೆಸ್ ಮುಖಂಡ ಕೊಡೆಸ್ ವೆಂಕಟೇಶ್‌ ತಿಳಿಸಿದರು.

ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ, ಕಾಂಗ್ರೆಸ್‌ ಮುಖಂಡರಾದ ನಂದಿ ಆಂಜನಪ್ಪ, ಮುನೇಗೌಡ, ಎಸ್‌.ಪಿ.ಶ್ರೀನಿವಾಸ್ ಸೇರಿದಂತೆ ಸಾಕಷ್ಟು ಸಂಖ್ಯೆಯ ಮುಖಂಡರು ನಾಗರಾಜ್ ಅವರ ಮನೆ ಬಳಿ ನೆರೆದಿದ್ದರು.

 

Post Comments (+)