ಬುಧವಾರ, ಅಕ್ಟೋಬರ್ 16, 2019
22 °C
ಐಟಿ ಅಧಿಕಾರಿಗಳ ಮೂರು ದಿನಗಳ ಜಾಲಾಟಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಸೋದರಳಿಯ

ಮುಗಿದ ತನಿಖೆ, ನಿರಾಳವಾದ ನಾಗರಾಜ್

Published:
Updated:
Prajavani

ಚಿಕ್ಕಬಳ್ಳಾಪುರ: ಕಳೆದ ಮೂರು ದಿನಗಳಿಂದ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳಿಂದ ದಿಗ್ಭಂಧನಕ್ಕೆ ಒಳಗಾಗಿದ್ದ ಕೇಂದ್ರದ ಮಾಜಿ ಸಚಿವಆರ್.ಎಲ್.ಜಾಲಪ್ಪ ಅವರ ಸೋದರಳಿಯ ಜಿ.ಎಚ್.ನಾಗರಾಜ್ ಅವರು ಶನಿವಾರ ಮಧ್ಯಾಹ್ನ ಐಟಿ ಅಧಿಕಾರಿಗಳು, ಮನೆಯಿಂದ ತೆರಳುತ್ತಿದ್ದಂತೆ ನಿರಾಳರಾದರು.

ಸಣ್ಣ ಸುಳಿವು ನೀಡದಂತೆ ಗುರುವಾರ ಬೆಳಿಗ್ಗೆ ಮನೆ ನಾಗರಾಜ್ ಅವರ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ಆ ವೇಳೆ ಮನೆಯಲ್ಲಿದ್ದ ನಾಗರಾಜ್ ಮತ್ತು ಹೇಮಾವತಿ ದಂಪತಿಯನ್ನು ಮೂರು ದಿನ ಎಡೆಬಿಡದೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಸುರಿಮಳೆಗೈದು ಹೈರಾಣು ಮಾಡಿದ್ದರು ಎಂದು ತಿಳಿದು ಬಂದಿದೆ.

ಸುಮಾರು 54 ತಾಸು ಮನೆಯಲ್ಲಿ ಬೀಡು ಬಿಟ್ಟಿದ್ದ ಅಧಿಕಾರಿಗಳು ನಾಗರಾಜ್ ಅವರ ವಹಿವಾಟು, ಚರ–ಸ್ಥಿರ ಆಸ್ತಿಗಳು, ಆದಾಯ, ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಸಕಲ ಮಾಹಿತಿಯನ್ನು ಕಲೆ ಹಾಕಿ, ದಾಖಲಿಸಿಕೊಂಡರು ಎನ್ನಲಾಗಿದೆ.

ಇಷ್ಟಕ್ಕೆ ತೃಪ್ತರಾಗದ ಅಧಿಕಾರಿಗಳು ನಾಗರಾಜ್ ಅವರನ್ನು ಶುಕ್ರವಾರ ಸಂಜೆ ಕೋಲಾರಕ್ಕೆ ಕೂಡ ಕರೆದುಕೊಂಡು ಆರ್.ಎಲ್.ಜಾಲಪ್ಪ ವೈದ್ಯಕೀಯ ಕಾಲೇಜಿನ ವ್ಯವಹಾರಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡು ತಡರಾತ್ರಿ ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದರು.

ಮೊದಲೆರಡು ದಿನ ನಾಗರಾಜ್ ಅವರ ಮನೆ ಮುಂದೆ ಜಮಾಯಿಸಿದ ಕಾಂಗ್ರೆಸ್‌ನ ಕೆಲ ಮುಖಂಡರು ಈ ದಾಳಿಯ ಹಿಂದೆ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಮತ್ತು ಬಿಜೆಪಿ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿ, ನಾಗರಾಜ್ ಅವರಿಗೆ ನೈತಿಕ ಬೆಂಬಲ ಸೂಚಿಸಿದ್ದರು. ಆದರೆ ಮೂರು ದಿನವೂ ನಾಗರಾಜ್ ಅವರ ಆಪ್ತರು, ಸಿಬ್ಬಂದಿಗಳು ಮನೆ ಎದುರು ಕುತೂಹಲ, ಆತಂಕದಿಂದ ಅಧಿಕಾರಿಗಳು ನಿರ್ಗಮಿಸುವುದನ್ನೇ ಎದುರು ನೋಡುತ್ತಿದ್ದರು.

ಶನಿವಾರ ಅಧಿಕಾರಿಗಳು ತನಿಖೆ ಮುಗಿಸಿ ಮನೆಯಿಂದ ತೆರಳುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಾಜ್, ‘ಒಂದೇ ದಿನದಲ್ಲಿ ಪರಿಶೀಲನೆ ಕಾರ್ಯ ಮುಗಿಸಬಹುದಿತ್ತು. ಹಿಂದೆಲ್ಲ ಬೆಳಿಗ್ಗೆ ಬಂಂದ ಅಧಿಕಾರಿಗಳು ಸಂಜೆ ಹೊತ್ತಿಗೆ ವಾಪಾಸಾಗಿದ್ದಾರೆ. ಈಗಲೂ ಶುಕ್ರವಾರವೇ ತನಿಖೆ ಮುಗಿದಿತ್ತು. ಅಧಿಕಾರಿಗಳು ನಮಗೆ ಕಿರುಕುಳು ನೀಡಬೇಕು ಎನ್ನುವ ಉದ್ದೇಶಕ್ಕೆ ಮೂರು ದಿನ ಸುಮ್ಮನೆ ಕೆದಕುವ ಕೆಲಸ ಮಾಡಿದರು’ ಎಂದು ಆರೋಪಿಸಿದರು.

‘ನಾನು ಈ ತನಿಖೆಗೆ ಹೆದರಿಕೊಂಡಿಲ್ಲ. ಸರಿಯಾದ ಸಮಯಕ್ಕೆ ಊಟ, ನಿದ್ದೆ ಮಾಡಿಕೊಂಡು ಆರಾಮದಿಂದ ಇದ್ದೆ. ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡಿದ್ದೇವೆ. ಬೇಸರವಿಲ್ಲದೆ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದೇವೆ. ಅಧಿಕಾರಿಗಳು ಕಾಲಹರಣ ಮಾಡುವುದಕ್ಕೆ ನಾನು ಗಲಾಟೆ ಕೂಡ ಮಾಡಿದ್ದೇನೆ. ನಮ್ಮ ಮನೆಯಲ್ಲಾಗಲಿ, ಸಂಸ್ಥೆಯಲ್ಲಿ ಆಗಲಿ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ’ ಎಂದು ಹೇಳಿದರು.

‘ಅಧಿಕಾರಿಗಳು ಖುಷಿಯಾಗಿಯೇ ವರದಿ ಕೊಟ್ಟು ಹೋಗಿದ್ದಾರೆ. ಮುಂದೆ ಏನಾಗುತ್ತೋ ನೋಡೋಣ. ಇದು ನಿಜವಾಗಿ ಹೇಯವಾದದ್ದು. ಡಿ.ಕೆ.ಶಿವಕುಮಾರ್ ಅವರು ಇಂತಹದ್ದನ್ನೆಲ್ಲ ಹೇಗೆ ಸಹಿಸಿಕೊಂಡರೋ? ನಿಜಕ್ಕೂ ಅವರನ್ನು ಮೆಚ್ಚಬೇಕು’ ಎಂದು ತಿಳಿಸಿದರು.

Post Comments (+)