ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾಕರ್ ಗೆಲ್ಲಿಸುವ ಜವಾಬ್ದಾರಿ ನಿಮ್ಮದು

ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮನವಿ
Last Updated 30 ನವೆಂಬರ್ 2019, 14:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸುಧಾಕರ್ ಅವರು ಚುನಾವಣೆಯಲ್ಲಿ ಗೆಲ್ಲುವುದು ಮಾತ್ರವಲ್ಲ, ನಮ್ಮೊಂದಿಗೆ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು. ಯಾರು ತಲೆ ಕೆಡಿಸಿದರೂ, ತಲೆ ಹಾಳು ಮಾಡಿಕೊಳ್ಳಬೇಡಿ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನಮಗೆ ಬೇಕಿರುವುದು ಆರು ಸ್ಥಾನ ಮಾತ್ರ. ಆದರೆ 15 ಕಡೆ ನಾವು ಗೆಲ್ಲುವ ವಿಶ್ವಾಸ ಇದೆ. ಎಲ್ಲರೂ ಸಚಿವರಾಗುತ್ತಾರೆ. ಮುಂದಿನ ಮೂರೂವರೆ ವರ್ಷ ಏನೂ ಗೊಂದಲ ಇಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಚುನಾವಣೆಯಲ್ಲಿ ನಿಮಗೆ ಹಣ ಕೊಟ್ಟರೆ ತೆಗೆದುಕೊಳ್ಳಿ. ಮತ ಮಾತ್ರ ಕಮಲದ ಗುರುತಿಗೆ ನೀಡಿ. ನಮ್ಮ ಸರ್ಕಾರ 39 ಹಿಂದುಳಿದ ವರ್ಗದ ಸಮುದಾಯಗಳಿಗೆ ₹100 ಕೋಟಿ ಅನುದಾನ ಕೊಟ್ಟಿದೆ. ಹೀಗಾಗಿ ಎಲ್ಲಾ ವರ್ಗದವರು ಇಂದು ಬಿಜೆಪಿ ಜತೆಗಿದ್ದಾರೆ. ಕಾಂಗ್ರೆಸ್-, ಜೆಡಿಎಸ್ ಒಂದಾದರೂ ಈ ಅಭಿವೃದ್ಧಿ ಆಗಲ್ಲ. ಸಮಾಜದ ಜವಾಬ್ದಾರಿ ನಾವು ವಹಿಸಿಕೊಳ್ಳುತ್ತೇವೆ. ನಿಮ್ಮ ಬೇಡಿಕೆ ಈಡೇರಿಸುತ್ತೇವೆ’ ಎಂದು ಹೇಳಿದರು.

‘ಒಬ್ಬ ಸಜ್ಜನ ವ್ಯಕ್ತಿ ಸಾಕಷ್ಟು ಆತಂಕ ಎದುರಾದಾಗ ಕಾಂಗ್ರೆಸ್‌ನಲ್ಲಿ ಇರಲಾಗದೇ ಬಿಜೆಪಿಗೆ ಬಂದಿದ್ದಾರೆ. ಮುಂದಿನ ಮೂರು ದಿನ ನಾವು ನಮಗೆ ಸಂಪರ್ಕದಲ್ಲಿರುವ ಕನಿಷ್ಠ 10 ಮಂದಿ ಮನವೊಲಿಸಿ ಸುಧಾಕರ್ ಪರ ಬಿಜೆಪಿಗೆ ಮತ ನೀಡಿಸುತ್ತೇವೆ ಎಂಬ ಸಂಕಲ್ಪ ಮಾಡಿ. ಹಿಂದುಳಿದ ವರ್ಗ, ಕುರುಬರು ಸುಧಾಕರ್ ಜತೆ ಇದ್ದಾರೆ ಎನ್ನುವುದನ್ನು ತೋರಿಸಿಕೊಡಿ. ಸರ್ಕಾರ ನಿವೇಶನ ನೀಡುತ್ತಿದೆ. ಚುನಾವಣೆ ನಂತರ ಅದನ್ನು ಪಡೆಯಲು ನೀವು ಪ್ರಯತ್ನ ಆರಂಭಿಸಿ. ಮಹಿಳಾ ಸಬಲೀಕರಣಕ್ಕೆ ಇನ್ನಷ್ಟು ಪ್ರಯತ್ನ ಮಾಡೋಣ’ ಎಂದರು.

ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಮಾತನಾಡಿ, ‘ಶಾಸಕನಾಗಿ ಆಯ್ಕೆಯಾದ ಮೂರು ತಿಂಗಳಲ್ಲಿ ಪರಿಶಿಷ್ಟ ಜಾತಿಯ ಎಲ್ಲರಿಗೂ ಸ್ವಂತ ಸೂರ ಕಟ್ಟಿಸಿಕೊಡಲು ಕ್ರಮ ಕೈಗೊಳ್ಳುತ್ತೇನೆ. ಈವರೆಗೆ ಸರ್ಕಾರ ಬಡವರಿಗೆ ಸ್ವಂತ ಮನೆ ಕಟ್ಟಿಕೊಳ್ಳಲು ₹1.5 ಲಕ್ಷ ರೂ. ಕೊಡುತ್ತಿತ್ತು. ಆದರೆ ಈಗಿನ ಸರ್ಕಾರ ಇದನ್ನು ₹5 ಲಕ್ಷಕ್ಕೆ ಹೆಚ್ಚಿಸಿದೆ. ಈ ಮಾಹಿತಿ ಎಲ್ಲರಿಗೂ ಸಿಗಬೇಕಿದೆ. ನಾವು 5 ಸಾವಿರ ನಿವೇಶನವನ್ನು ಬಡವರಿಗೆ ಹಂಚಿಕೆ ಆರಂಭಿಸಿದ್ದು, ಇಲ್ಲಿ ಮನೆ ಕಟ್ಟಿಕೊಳ್ಳಲು ಪ್ರತಿಯೊಬ್ಬ ನಿವೇಶನದಾರರಿಗೆ ಮನೆ ಕಟ್ಟಿಸಿಕೊಡುತ್ತೇವೆ. ಈ ವಿಚಾರವಾಗಿ ನಾನು ನನ್ನ ಮಾತಿಗೆ ಬದ್ಧವಾಗಿರುತ್ತೇನೆ’ ಎಂದು ಭರವಸೆ ನೀಡಿದರು.

‘ದೇವೇಗೌಡರು ಇಲ್ಲಿಗೆ ಬಂದು ನನ್ನನ್ನು ಕಂಡರೆ ಭಯವಾಗುತ್ತದೆ, ನಾನು ಗೆಲ್ಲಬಾರದು ಎಂದು ಪ್ರಚಾರ ಮಾಡುತ್ತಾರೆ. ಅವರು ದೇಶಕ್ಕೇ ನ್ಯಾಯ ಹೇಳಿದವರು, ನಮಗೆ ಹೇಳುವುದು ಬೇಡವೇ? ನಮ್ಮ ಜಿಲ್ಲೆಗೆ ನ್ಯಾಯ ಕೊಡಬೇಕಲ್ಲಾ ಅವರು? ಸ್ವಾಭಿಮಾನದಿಂದ ಮನುಷ್ಯ ಬದುಕಬೇಕಾದರೆ ಒಂದು ಸೂರು ಬೇಕು. ಇದಕ್ಕೆ ತಡೆಯಾಜ್ಞೆ ತರುವವರಿಗೆ ನಾಚಿಕೆ ಆಗಲ್ವೇ? ಪರಿಶಿಷ್ಟ ಜಾತಿಯವರಿಗೆ ಮನೆ ಕಟ್ಟಿಸಿಕೊಡುತ್ತೇನೆ’ ಎಂದರು.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ. ವಿಧಾನಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಡಿ.ಎಸ್.ವೀರಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್, ಮುಖಂಡರಾದ ನಾಗೇಶ್ ಬುಲೆಟ್ ನಾರಾಯಣಸ್ವಾಮಿ, ಪಾಪಣ್ಣ, ವೆಂಕಟಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT