ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಾಗೃಹದಲ್ಲಿ ಅವ್ಯವಸ್ಥೆ: ಪ್ರಕರಣ ದಾಖಲು

ನ.6ರಂದು ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ್ದ ಉಪ ಲೋಕಾಯುಕ್ತ: ಸ್ವಯಂ ಪ್ರೇರಿತವಾಗಿ ಪ್ರಕರಣ
Last Updated 16 ನವೆಂಬರ್ 2022, 16:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ಸೂಚನೆ ಮೇರೆಗೆ ಚಿಕ್ಕಬಳ್ಳಾಪುರಜಿಲ್ಲಾ ಕಾರಾಗೃಹದ 10 ಸಿಬ್ಬಂದಿ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನ.5ರಿಂದ 7ರವರೆಗೆ ಕೆ.ಎನ್.ಫಣೀಂದ್ರ ಅವರು ಹಾಗೂ ಲೋಕಾಯುಕ್ತ ಸಂಸ್ಥೆ ಅಧಿಕಾರಿಗಳು ಜಿಲ್ಲೆಯಲ್ಲಿ ಪ್ರವಾಸಕೈಗೊಂಡಿದ್ದರು. ನ.6ರಂದು ಸಂಜೆ ನಗರದ ಹೊರ ವಲಯದ ಅಣಕನೂರಿನ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಅಲ್ಲಿ ವಿಚಾರಣಾಧೀನ ಕೈದಿಗಳ ಕುಂದು ಕೊರತೆಗಳನ್ನು ಆಲಿಸಿದ್ದರು.

ಈ ವೇಳೆ ಕೈದಿಗಳು ಲೋಕಾಯುಕ್ತರಿಗೆ ಆಹಾರ, ಔಷಧ ಮತ್ತಿತರ ಸೌಲಭ್ಯಗಳನ್ನು ಸಮರ್ಪಕವಾಗಿ ಜೈಲು ಸಿಬ್ಬಂದಿ ನೀಡುತ್ತಿಲ್ಲಎಂದು ದೂರಿದ್ದರು. ಉಪಲೋಕಾಯುಕ್ತರು ಭೇಟಿ ನೀಡಿದ್ದ ವೇಳೆ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಖಲಾತಿ ಪುಸ್ತಕಗಳನ್ನು ಸರಿಯಾಗಿ ನಿರ್ವಹಿಸಿರಲಿಲ್ಲ. ಹಾಜರಾತಿ ಪುಸ್ತಕದಲ್ಲಿ ಸಿಬ್ಬಂದಿ ಸಹಿ ಹಾಕಿರಲಿಲ್ಲ. ಹಲವು ಸಮಸ್ಯೆಗಳು ಕಂಡಿದ್ದವು. ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಳ್ಳುವಂತೆ ಉಪ ಲೋಕಾಯುಕ್ತರು ಸೂಚಿಸಿದ್ದರು. ದೂರಿನಲ್ಲಿ ಕಾರಾಗೃಹದಲ್ಲಿನ ಅವ್ಯವಸ್ಥೆಗಳ ಬಗ್ಗೆ ವಿಸ್ತಾರವಾಗಿ ವಿವರಿಸಲಾಗಿದೆ.

ಖುದ್ದು ಹಾಜರಾಗಿ ಹೇಳಿಕೆ ನೀಡುವಂತೆ ಜಿಲ್ಲಾ ಕಾರಾಗೃಹದ ಅಧೀಕ್ಷಕ ಎಸ್‌.ಎಚ್.ಜಯರಾಮಯ್ಯ ಸೇರಿದಂತೆ ಒಟ್ಟು 10 ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ.

ಅಧೀಕ್ಷಕರಿಂದ ಕರ್ತವ್ಯ ಲೋಪ:ಜಿಲ್ಲಾ ಕಾರಾಗೃಹ ಅಧೀಕ್ಷಕ ಜಯರಾಮಯ್ಯ ಉಪ ಲೋಕಾಯುಕ್ತರ ಭೇಟಿ ವೇಳೆ ಹಾಜರಿರಲಿಲ್ಲ. ಈ ವೇಳೆ ಹಾಜರಿದ್ದ ಹೆಡ್ ವಾರ್ಡನ್ ರಾಜಣ್ಣ, ‘ಮಧ್ಯಾಹ್ನ
ದವರೆಗೂ ಅಧೀಕ್ಷಕರು ಇದ್ದರು. ಭಾನುವಾರವಾದ ಕಾರಣಮಧ್ಯಾಹ್ನ ತೆರಳಿದರು’ ಎಂದು ತಿಳಿಸಿದ್ದರು. ಉಳಿದ ಅಧಿಕಾರಿಗಳು ಸಹ ಕಾರಾಗೃಹದಲ್ಲಿ ಇರಲಿಲ್ಲ. ಉಪಲೋಕಾಯುಕ್ತರು ಹಾಜರಾತಿ ಪುಸ್ತಕ ಪರಿಶೀಲಿಸಿದಾಗ ಅದರಲ್ಲಿ ಜಯರಾಮಯ್ಯ ಸಹಿ ಇರಲಿಲ್ಲ. ರಾಜಣ್ಣ ಹೇಳಿದ್ದು ಸುಳ್ಳು ಎನ್ನುವುದು ಕಂಡು ಬಂದಿತ್ತು.

ಕಾರಾಗೃಹದ ಅಧೀಕ್ಷಕ ಜಯರಾಮಯ್ಯ, ಅ.29ರಿಂದ 31ರವರೆಗೆ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿಲ್ಲ. ಸಹಾಯಕ ಜೈಲರ್ ‌ಎಂ.ಶಶಿಕುಮಾರ್, ಹೆಡ್ ವಾರ್ಡನ್ ಸಿ.ಪ್ರಮೋದ್, ವಾರ್ಡನ್‌ಗಳಾದ ಸಿ.ಎಸ್.ವಿನೋದ್ ಕುಮಾರ್, ಎಂ.ಮೋಹನಾಂಬಿಕ, ಶೇಖರ್ ಗೌಡ ಎಸ್.ಗೌಡರ, ಎಂ.ಡಿ.ದಿವ್ಯಾ, ಜವಾನಮಾವೇಂದ್ರ ರಾಜ್ ಹಾಜರಾತಿ ಪುಸ್ತಕಕ್ಕೆ ಸಹಿಯನ್ನೇ ಹಾಕಿರಲಿಲ್ಲ! ವಾರ್ಡನ್ ವನೀತಾ ನ.5 ಮತ್ತು 6ರಂದು ಸಹಿ ಹಾಕಿಲ್ಲ.ಆದರೆ ಕಾರಾಗೃಹದ ಅಧೀಕ್ಷಕರು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕುವ ವಿಚಾರದಲ್ಲಿ ಯಾವುದೇ ಕ್ರಮವಹಿಸಿಲ್ಲ ಎನ್ನುವುದು ಕಂಡು ಬಂದಿತ್ತು.

ಊಟ ರುಚಿಯಿಲ್ಲ: ಉಪಲೋಕಾಯುಕ್ತರು ವಿಚಾರಣಾ ಧೀನ ಕೈದಿಗಳು ಮತ್ತು ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಕೇಳಿದ್ದರು. ಆಗ ಕೈದಿಗಳು ಸಮಸ್ಯೆಗಳ ಪಟ್ಟಿಯನ್ನೇ ನೀಡಿದ್ದರು. ಲೋಕಾಯುಕ್ತ ಸಂಸ್ಥೆಯ ಅಧಿಕಾರಿಯೊಬ್ಬರು ಈ ವೇಳೆ ಸಾಂಬಾರ್ ರುಚಿ ಪರಿಶೀಲಿಸಿದ್ದು ಕಳಪೆ ಆಗಿತ್ತು.ಆಹಾರದ ರುಚಿ ಪರಿಶೀಲಿಸಿರುವುದಾಗಿ ಜೈಲರ್ ರೂಪಾ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅವರು ಪುಸ್ತಕಕ್ಕೆ ಮಧ್ಯಾಹ್ನ 3ಕ್ಕೆ ಸಹಿ ಮಾಡಿ ತೆರಳಿದ್ದಾರೆ. ರಾತ್ರಿಯ ಊಟವನ್ನು ಮಧ್ಯಾಹ್ನವೇ ಪರಿಶೀಲಿಸಿದ್ದಾರೆ. ಇದು ಕರ್ತವ್ಯ ಲೋಪ.

ಜಿಲ್ಲಾ ಕಾರಾಗೃಹದ ಕಟ್ಟಡಗಳು, ಸಲಕರಣೆಗಳಿಗೆ ಹೆಚ್ಚು ಹಣ ವೆಚ್ಚವಾಗಿದೆ. ಆದರೆ ಅಧಿಕಾರಿಗಳು ಬೇಜವಾಬ್ದಾರಿ ಆಗಿದ್ದಾರೆ. ಆಹಾರ ಸರಿಯಾಗಿ ಕೊಡುತ್ತಿಲ್ಲ. ಕೈದಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಇದೆಲ್ಲವನ್ನು ನೋಡಿದರೆ ಬದುಕು ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಕಾರಾಗೃಹದಲ್ಲಿ 24 ಸಿಸಿ ಟಿವಿ ಕ್ಯಾಮೆರಾಗಳಿವೆ. ಇದರಲ್ಲಿ 14 ಕೆಲಸ ಮಾಡುತ್ತಿವೆ. ಉಳಿದವು ಕೆಲಸ ಮಾಡುತ್ತಿಲ್ಲ. ಈ ವಿಚಾರವಾಗಿಯೂ ಕಾರಾಗೃಹ ಅಧೀಕ್ಷಕರು ಯಾವುದೇ ಕ್ರಮವಹಿಸಿಲ್ಲ. ಕಾರಾಗೃಹ ಪ್ರವೇಶಿಸುವಾಗ ತಮ್ಮ ಬಳಿ ಎಷ್ಟು ಹಣ ಇದೆ ಎನ್ನುವುದನ್ನು ಪುಸ್ತಕದಲ್ಲಿ ದಾಖಲಿಸಬೇಕು. ಆದರೆ ಈ ವಿಚಾರದಲ್ಲಿಯೂ ಲೋಪಗಳಾಗಿವೆ.

ನ.4 ಮತ್ತು 5ರಂದು ಶಶಿಕುಮಾರ್ ಮಾತ್ರ ತಮ್ಮ ಬಳಿ ₹ 1,480 ಇದೆ ಎಂದು ಪುಸ್ತಕದಲ್ಲಿ ದಾಖಲಿಸಿದ್ದಾರೆ. ನ.3ರಂದು ಇಬ್ಬರು, ನ.1 ಮತ್ತು 2ರಂದು ಯಾರೂ ಈ ವಿಷಯವನ್ನು ಪುಸ್ತಕದಲ್ಲಿ ದಾಖಲಿಸಿಲ್ಲ.ನ.4 ಮತ್ತು6ರಂದು ಜಿಲ್ಲಾ ಕಾರಾಗಹದ ಅಧೀಕ್ಷಕರೇ ಪುಸ್ತಕದಲ್ಲಿ ಮಾಹಿತಿ ನಮೂದಿಸಿಲ್ಲ. ಕಾರಾಗೃಹದಲ್ಲಿ ಸರಿಯಾದ ರೀತಿಯಲ್ಲಿ ದಾಖಲೆಗಳನ್ನು ನಿರ್ವಹಿಸುತ್ತಿಲ್ಲ. ಜಿಲ್ಲಾ ಕಾರಾಗೃಹದ ಅಧಿಕಾರಿ ಈ ಬಗ್ಗೆ ಅಧೀನ ಸಿಬ್ಬಂದಿಗೆ ನಿರ್ದೇಶನ ಸಹ ನೀಡುತ್ತಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹಕ್ಕೆ ನಮ್ಮ ಭೇಟಿಯ ವೇಳೆ ವ್ಯವಸ್ಥೆ ಉತ್ತಮವಾಗಿಲ್ಲ. ಈ ಕಾರಣದಿಂದ ಲೋಕಾಯುಕ್ತ ಕಾಯ್ದೆಯ ಪ್ರಕಾರ ಇವರ ವಿರುದ್ಧ ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಳ್ಳಬಹುದು ಎಂದು ಉಪಲೋಕಾಯುಕ್ತರು ತಿಳಿಸಿದ್ದಾರೆ.

ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಜಿಲ್ಲಾ ಕಾರಾಗೃಹದ 10 ಮಂದಿಗೆ ನೋಟಿಸ್ ಸಹ ನೀಡಲಾಗಿದೆ. ಅವ್ಯವಸ್ಥೆಗಳನ್ನು ಅಧೀಕ್ಷಕರಾದ ಜಯರಾಮಯ್ಯ ಸರಿಪಡಿಸಬೇಕು ಎಂದು ಉಪಲೋಕಾಯುಕ್ತರು ಸೂಚಿಸಿದ್ದಾರೆ.

**

10 ಅಧಿಕಾರಿಗಳಿಗೆ ನೋಟಿಸ್

ಜಿಲ್ಲಾ ಕಾರಾಗೃಹದ ಅಧೀಕ್ಷಕ ಎಸ್‌.ಎಚ್.ಜಯರಾಮಯ್ಯ, ಜೈಲರ್ ಶೋಭಾ, ಸಹಾಯಕ ಜೈಲರ್ ‌ಎಂ.ಶಶಿಕುಮಾರ್, ಹೆಡ್ ವಾರ್ಡನ್‌ಗಳಾದ ಸಿ.ಪ್ರಮೋದ್, ಸಿ.ರಾಜಣ್ಣ, ವಾರ್ಡನ್‌ಗಳಾದ ಸಿ.ಎಸ್.ವಿನೋದ್ ಕುಮಾರ್, ಎಂ.ಮೋಹನಾಂಬಿಕ, ಶೇಖರ್ ಗೌಡ ಎಸ್.ಗೌಡರ, ಎಂ.ಡಿ.ದಿವ್ಯಾ, ಎನ್.ಕೆ.ವನೀತಾ ಅವರಿಗೆ ಉಪಲೋಕಾಯುಕ್ತರು ನೋಟಿಸ್ ನೀಡಿದ್ದಾರೆ.

***

ವಿದ್ಯುತ್ ಇಲ್ಲ, ಔಷಧ ನೀಡುವುದಿಲ್ಲ

ನಾಲ್ಕರಿಂದ ಐದು ತಿಂಗಳಿನಿಂದ ರಾತ್ರಿ ವೇಳೆ‌ ವಿದ್ಯುತ್ ಇಲ್ಲ. ವಿದ್ಯುತ್ ಇಲ್ಲದಿದ್ದಾಗ ಜನರೇಟರ್ ಅಥವಾ ಯುಪಿಎಸ್ ಬಳಸುವುದಿಲ್ಲ. ರಾತ್ರಿ ಶೌಚಕ್ಕೆ ಹೋಗಬೇಕಾದ ವೇಳೆ ಮೇಣದ ಬತ್ತಿ ಸಹ ಕೊಡುವುದಿಲ್ಲ. ಶೌಚಕ್ಕೆ ಹೋಗಲು ಸಮಸ್ಯೆ ಆಗಿದೆ.

ಶೌಚಾಲಯಕ್ಕೆ ಬಾಗಿಲುಗಳೇ ಇಲ್ಲ. ತಟ್ಟೆ, ಲೋಟಗಳನ್ನು ತೊಳೆಯುವುದಿಲ್ಲ. ಕೊಠಡಿಗಳು ಸ್ವಚ್ಛವಾಗಿಲ್ಲ. ಸೊಳ್ಳೆ ಪರದೆ ಕೊಡುವುದಿಲ್ಲ. ಕಾರಾಗೃಹದ ಸಿಬ್ಬಂದಿ ಸ್ವಚ್ಛತೆಗೆ ಗಮನ ಕೊಡುತ್ತಿಲ್ಲ. ವೈದ್ಯಕೀಯ ಸೌಲಭ್ಯಗಳು ಇಲ್ಲ. ಅನಾರೋಗ್ಯಕ್ಕೆ ತುತ್ತಾದಾಗ ಮಾತ್ರೆಗಳನ್ನು ಕೇಳಿದರೂ ಕೊಡುವುದಿಲ್ಲ.ಕಾರಾಗೃಹದ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸುವರು.ಕುಟುಂಬದವರು ಭೇಟಿ ಮಾಡಲು ಬಂದರೆ ಅವರಿಂದ ಲಂಚ ಕೇಳುವರು. ಕಳಪೆ ಆಹಾರ ನೀಡುತ್ತಿದ್ದಾರೆ.ಚಾವಣಿಗಳು ಸೋರುತ್ತಿದ್ದು ದುರಸ್ತಿಗೆ ಕ್ರಮವಹಿಸಿಲ್ಲಎಂದು ಉಪಲೋಕಾಯುಕ್ತರ ಮುಂದೆ ಕೈದಿಗಳು ಸಮಸ್ಯೆಗಳನ್ನು ಬಿಡಿಸಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT