ಕ್ಷಣಿಕ ಸುಖಕ್ಕೆ ಆರೋಗ್ಯ ಬಲಿಗೊಡದಿರಿ

7
‘ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ’ ಜಾಥಾಗೆ ಚಾಲನೆ

ಕ್ಷಣಿಕ ಸುಖಕ್ಕೆ ಆರೋಗ್ಯ ಬಲಿಗೊಡದಿರಿ

Published:
Updated:

ಚಿಕ್ಕಬಳ್ಳಾಪುರ: ‘ಕ್ಷಣಿಕ ಸುಖಕ್ಕಾಗಿ ಸೇವಿಸುವ ಮಾದಕ ವಸ್ತುಗಳು ಆರೋಗ್ಯ ಹಾಳು ಮಾಡುವ ಜತೆಗೆ ಸಮಾಜದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತವೆ. ಆದ್ದರಿಂದ ಯಾರು ಕೂಡ ಮಾದಕ ವಸ್ತುಗಳ ಸೇವನೆಯ ಬಲೆಗೆ ಬೀಳಬಾರದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಗುರುದತ್‌ ಹೆಗಡೆ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ’ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮಾದಕ ವಸ್ತುಗಳ ಸೇವನೆ ಸಾವಿಗೆ ಆಹ್ವಾನ ನೀಡಿದಂತೆ. ವ್ಯಸನಕ್ಕೆ ಬಲಿಯಾದರೆ ವ್ಯಕ್ತಿ ಹಣ, ಸಮಯ, ಜೀವನವನ್ನೇ ವ್ಯರ್ಥ ಮಾಡಿಕೊಳ್ಳುತ್ತಾನೆ. ನಮಗೆ ದೊರೆತಿರುವ ಜೀವನ ಅಮೂಲ್ಯವಾದ್ದದ್ದು. ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಇಂದಿನ ಯುವ ಪೀಳಿಗೆ ಮಾದಕ ವ್ಯಸನದ ದಾಸರಾಗದೆ ಸಮಾಜದ ಮುಖ್ಯವಾಹಿನಿಗೆ ಬಂದು ಗೌರವಯುತ ಜೀವನ ನಡೆಸಬೇಕು’ ಎಂದು ಹೇಳಿದರು.

‘ಯುವಕರು ಒಮ್ಮೆ ಮಾದಕ ವಸ್ತುಗಳಿಗೆ ಶರಣಾದರೆ ಅದನ್ನು ತ್ಯಜಿಸುವುದು ಕಷ್ಟ. ಆದ್ದರಿಂದ ಇಂತಹ ವಿಚಾರಗಳ ವಿರುದ್ಧ ಪ್ರತಿಯೊಬ್ಬರು ಜಾಗೃತಿ ಮೂಡಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರವಿಶಂಕರ್‌ ಮಾತನಾಡಿ, ‘ಕುಡಿತದ ಚಟ ಒಮ್ಮೆ ಅಂಟಿಕೊಂಡರೆ ಬಿಡುವುದು ಕಷ್ಟ. ಕುಡಿತದಿಂದ ಯಕೃತ್‌ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಿದುಳಿನ ಜೀವಕೋಶಗಳು ಕುಗ್ಗುತ್ತವೆ. ಅಧಿಕ ರಕ್ತದೊತ್ತಡ, ಭ್ರೂಣಕ್ಕೆ ತೊಂದರೆ, ಹೃದಯ ಸ್ನಾಯುಗಳ ದೌರ್ಬಲ್ಯ, ಅರ್ಜಿಣ ತೊಂದರೆಗಳು, ಲೈಂಗಿಕ ದೌರ್ಬಲ್ಯ ಸೇರಿದಂತೆ ಅನೇಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಆದ್ದರಿಂದ ಮಾದಕ ವಸ್ತುಗಳಿಂದ ಜನರು ದೂರವಿರಬೇಕು’ ಎಂದು ಹೇಳಿದರು.

ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ.ಚಂದ್ರಮೋಹನ್‌ ಮಾತನಾಡಿ, ‘ಮಾದಕ ವಸ್ತುಗಳ ಸೇವನೆಯಿಂದ ಜೀವಕ್ಕೆ ಆಪತ್ತು ಬರುತ್ತದೆ. ಮದ್ಯಪಾನ ಮತ್ತು ಮಾದಕ ಸೇವನೆಗಳಿಂದ ಶರೀರ ಬಲಹೀನಗೊಳ್ಳುತ್ತದೆ. ನರ ದೌರ್ಬಲ್ಯ ಉಂಟಾಗುತ್ತದೆ. ಮಿದುಳಿನ ಕಾರ್ಯ ಕುಗ್ಗುತ್ತದೆ. ಮನೋ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಜತೆಗೆ ವ್ಯಕ್ತಿಯ ಮೇಲೆ ಭಾವನಾತ್ಮಕ, ದೈಹಿಕ ಮತ್ತು ಮಾನಸಿಕವಾಗಿ ಪ್ರಭಾವ ಬೀರುತ್ತದೆ’ ಎಂದು ಹೇಳಿದರು.

‘ಮಾದಕ ವಸ್ತುಗಳ ಸೇವನೆಯ ಚಟ ಬಿಡಲಾಗದೆ ಮಿದುಳಿನ ಕ್ರಿಯೆಗಳಾದ ಕಲಿಕೆ, ತೀರ್ಪು, ನಿರ್ಧಾರ, ವರ್ತನೆ ನಿಯಂತ್ರಣದ ಮೇಲೆ ಪರಿಣಾಮ ಬೀರಿ ಮಾನಸಿಕವಾಗಿ ಹಿಂಸೆ ಒಳಗಾಗುವ ಸಾಧ್ಯತೆ ಹೆಚ್ಚು’ ಎಂದು ಹೇಳಿದರು.  ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು. ದುಶ್ಚಟಗಳ ದುಷ್ಪರಿಣಾಮ ಬಿಂಬಿಸುವ ಬೀದಿ ನಾಟಕ ಪ್ರದರ್ಶಿಸಲಾಯಿತು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯ್‌ ಕುಮಾರ್‌, ಸ್ಥಳೀಯ ವೈದ್ಯಾಧಿಕಾರಿ ಡಾ.ರಮೇಶ್‌, ಶಿಕ್ಷಣ ವೈದ್ಯಾಧಿಕಾರಿ ಡಾ.ಮಹೇಶ್‌ ಜಾಥಾದಲ್ಲಿ ಭಾಗವಹಿಸಿದ್ದರು.

ಯುವ ಜನಾಂಗ ದೇಶದ ಸಂಪತ್ತು. ಅದು ದಾರಿ ತಪ್ಪುವ ಮುನ್ನ ಸರಿಯಾದ ತಿಳಿವಳಿಕೆ ನೀಡುವುದು ಅಗತ್ಯ. ಯುವಕರು ಆರೋಗ್ಯವಂತರಾಗಿದ್ದರೆ ದೇಶದ ಅಭಿವೃದ್ಧಿ ಸಾಧ್ಯ.
ಗುರುದತ್‌ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !