ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನ ತೋಟಕ್ಕೆ ನುಗ್ಗಿದ ಜೆಸಿಬಿ

ವಿದ್ಯುತ್ ಗುತ್ತಿಗೆದಾರರಿಂದ ತೋಟದ ಬೆಳೆ ನಾಶ
Last Updated 29 ಸೆಪ್ಟೆಂಬರ್ 2022, 5:07 IST
ಅಕ್ಷರ ಗಾತ್ರ

ಚಿಂತಾಮಣಿ: ರೈತರಿಗೆ ಮಾಹಿತಿ ನೀಡದೆ ವಿದ್ಯುತ್ ಗುತ್ತಿಗೆದಾರರು ಏಕಾಏಕಿ ಬೆಳೆದು ನಿಂತಿದ್ದ ತೋಟಕ್ಕೆ ಬುಧವಾರ ಜೆಸಿಬಿ ನುಗ್ಗಿಸಿ ವಿದ್ಯುತ್ ಕಂಬಗಳ ಅಳವಡಿಕೆಗೆ ಗುಣಿಗಳನ್ನು ತೆಗೆದಿದ್ದಾರೆ. ಇದರಿಂದ ತೋಟದಲ್ಲಿ ಬೆಳೆದು ನಿಂತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ರೈತ ದೂರಿದ್ದಾರೆ.

ತಾಲ್ಲೂಕಿನ ಮುನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಂಪುರ ಗ್ರಾಮದ ರೈತ ಶ್ರೀರಾಮರೆಡ್ಡಿ ಎಂಬುವರು ತಮ್ಮ 2.5 ಎಕರೆ ಜಮೀನಿನಲ್ಲಿ ಹೂಕೋಸು ಬೆಳೆ ಬೆಳೆದಿದ್ದರು. ಬೆಳೆ ಉತ್ತಮವಾಗಿ ನಳನಳಿಸುತ್ತಿತ್ತು. ಇನ್ನೂ 15-20 ದಿನಗಳಲ್ಲಿ ಬೆಳೆ ಕೈಗೆ ಸಿಗುತ್ತಿತ್ತು. ಅಂತಹ ತೋಟಕ್ಕೆ ಬೆಂಗಳೂರು ವಿದ್ಯುತ್ ಕಂಪನಿಯ ಗುತ್ತಿಗೆದಾರರು ಅತಿಕ್ರಮವಾಗಿ ಪ್ರವೇಶಿಸಿ 220 ಕೆವಿ ಸಂಪರ್ಕ ಲೈನ್‌ಗಾಗಿ ಕಂಬಗಳನ್ನು ನೆಡಲು ಗುಂಡಿಗಳನ್ನು ತೋಡಿದ್ದಾರೆ. ಜತೆಗೆ ಬೆಳೆ ಮೇಲೆಯೇ ಜೆಸಿಬಿಯನ್ನು ನುಗ್ಗಿಸಿ ಕ್ರೂರಿಗಳಂತೆ ವರ್ತಿಸಿದ್ದಾರೆ ಎಂದು ರೈತ ಶ್ರೀರಾಮರೆಡ್ಡಿ ದೂರಿದರು.

ಜಮೀನನ್ನು ಗುತ್ತಿಗೆಗೆ ಪಡೆದು ಸುಮಾರು ₹10 ಲಕ್ಷ ಖರ್ಚು ಮಾಡಿ ಬೆಳೆ ಬೆಳೆದಿದ್ದೇನೆ. 20 ದಿನಗಳ ನಂತರ ಕಾಮಗಾರಿ ಪ್ರಾರಂಭಿಸಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಪರಿಗಣಿಸದೆ ದೌರ್ಜನ್ಯವೆಸಗಿದ್ದಾರೆ ಎಂದು ವಿದ್ಯುತ್ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು,ರೈತರ ಬೆಳೆ ನಾಶಪಡಿಸಿದ ನಿರ್ಧಯಿ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ಬೆಸ್ಕಾಂ ಇಲಾಖೆ ಅಧಿಕಾರಿಗಳು ತಹಶೀಲ್ದಾರ್ ಸಮ್ಮುಖದಲ್ಲಿ ರೈತ ಮುಖಂಡರ ಸಭೆ ನಡೆಸಿದ್ದರು. ರೈತರ ಜಮೀನುಗಳಲ್ಲಿ ವಿದ್ಯುತ್ ಕಂಬಗಳು ಹಾಗೂ ತಂತಿಗಳನ್ನು ಅಳವಡಿಸಲು ಅನುಮತಿ ಪಡೆಯಬೇಕು. ಸರ್ಕಾರ ನಿಗದಿಪಡಿಸಿದ ಪರಿಹಾರ ನೀಡಿ, ಸರ್ವೆ ಕಾರ್ಯ ನಡೆಸಿದ ನಂತರ ಕಂಬಗಳನ್ನು ಅಳವಡಿಸುತ್ತೇವೆ ಎಂದಿದ್ದರು.

ಅದ್ಯಾವುದನ್ನು ಲೆಕ್ಕಿಸದೆ, ರೈತರಿಗೆ ಮಾಹಿತಿ ನೀಡದೆ ಜೆಸಿಬಿ ನುಗ್ಗಿಸಲಾಗಿದೆ. ಇದರಿಂದ ಸುಮಾರು ಅರ್ಧ ಎಕರೆ
ಬೆಳೆ ನಾಶವಾಗಿದ್ದು, ₹4 ಲಕ್ಷ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT