ಮಂಡ್ಯದಲ್ಲೇ ಸೋತವರು ಚಿಕ್ಕಬಳ್ಳಾಪುರದಲ್ಲಿ ಗೆಲ್ಲಲು ಸಾಧ್ಯವೇ: ಸಿ.ಟಿ.ರವಿ

ಚಿಕ್ಕಬಳ್ಳಾಪುರ: ‘ಜೆಡಿಎಸ್‌ನವರಿಗೆ ಅವರ ಕ್ಷೇತ್ರದಲ್ಲಿಯೇ ಏನು ಕಡಿಯಲು ಆಗದೆ, ಕಳೆದುಕೊಂಡಿದ್ದಾರೆ. ಒಬ್ಬ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇದ್ದಾಗ ಮಾಜಿ ಪ್ರಧಾನಿಯಾದ ತಂದೆಯನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಚಿಕ್ಕಬಳ್ಳಾಪುರದಲ್ಲಿ ಏನು ತಿರುವಿ ಹಾಕುತ್ತಾರೆ? ತಿರುವಿ ಹಾಕಲು ಇದು ಮುದ್ದೇನೂ ಅಲ್ಲ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಟೀಕಿಸಿದರು.
ನಗರದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಮತ ಯಾಚನೆ ಮಾಡುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ತನ್ನ ಮಗ ತನ್ನದೇ ಭದ್ರಕೋಟೆಯಲ್ಲಿ, ಎಂಟಕ್ಕೆ ಎಂಟು ಜೆಡಿಎಸ್ ಶಾಸಕರು ಇರುವ ಕ್ಷೇತ್ರದಲ್ಲಿ ಒಬ್ಬ ಪಕ್ಷೇತರ ಅಭ್ಯರ್ಥಿ ಎದುರು ಸೋಲಬೇಕಾಯಿತು. ದೇವೇಗೌಡರು ಯಾವತ್ತು ನಮ್ಮನ್ನು ಹತ್ತಿರ ಇಟ್ಟುಕೊಂಡಿದ್ದಾರೆ? ರಾಜ್ಯದ ಜನ ಜೆಡಿಎಸ್ ದೂರವಿಟ್ಟು, ನಮ್ಮನ್ನು ಹತ್ತಿರ ಇಟ್ಟುಕೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಮ್ಮ ಮಾಲೀಕರು ದೇವೇಗೌಡರಲ್ಲ. ಈ ರಾಜ್ಯದ ಜನರು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಸಿದ್ದರಾಮಯ್ಯ ಅವರು ತಮ್ಮದೇ ಕರ್ಮಭೂಮಿ ಚಾಮುಂಡೇಶ್ವರಿಯಲ್ಲಿ ಸೋತರು. ಬಾದಾಮಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಆಗಲಿಲ್ಲ. ಈ ಪರಿಸ್ಥಿತಿಯಲ್ಲಿ ಅವರು ಇಲ್ಲಿಗೆ ಬಂದು ಏನು ಮಾಡಲು ಆಗುವುದಿಲ್ಲ. ಬೇಕಿದ್ದರೆ ಬಂದು ಭಾಷಣ ಮಾಡಿ, ಹಾವಭಾವ ಪ್ರದರ್ಶಿಸಿ ಮನರಂಜನೆ ಕೊಟ್ಟು ಹೋಗಬಹುದು’ ಎಂದು ವ್ಯಂಗ್ಯವಾಡಿದರು.