ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ ಚುನಾವಣೆ ಎದುರಿಸಲು ನಾಯಕತ್ವ ಘೋಷಿಸಿ: ಮುಖಂಡರ ಆಗ್ರಹ

ಜಿಲ್ಲಾ ಮತ್ತು ತಾಲ್ಲೂಕು ಜೆಡಿಎಸ್ ಕಚೇರಿ ಉದ್ಘಾಟನೆಯಲ್ಲಿ ಮುಖಂಡರ ಆಗ್ರಹ
Last Updated 15 ಮಾರ್ಚ್ 2021, 14:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದಲ್ಲಿ ಸೋಮವಾರ ನಡೆದ ಜಿಲ್ಲಾ ಮತ್ತು ತಾಲ್ಲೂಕು ಜೆಡಿಎಸ್ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯ ನೇತೃತ್ವವಹಿಸಲು ನಾಯಕರೊಬ್ಬರನ್ನು ಪಕ್ಷದ ವರಿಷ್ಠರು ಘೋಷಿಸಬೇಕು. ಅವರ ಮುಂದಾಳತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಹಲವು ಮುಖಂಡರು ಆಗ್ರಹಿಸಿದರು.

ಅಲ್ಲದೆ ಪಕ್ಷದ ಒಳಗಿದ್ದುಕೊಂಡೇ ಪಕ್ಷದ ವಿರುದ್ಧ ಕೆಲಸ ಮಾಡುವವರು ಮೊದಲು ಪಕ್ಷವನ್ನು ತೊರೆಯಬೇಕು. ಮುಂದಿನ ದಿನಗಳಲ್ಲಿ ಜೆಡಿಎಸ್ ಅನ್ನು ಮತ್ತಷ್ಟು ಸಂಘಟಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧವಾಗಬೇಕಿದೆ. ಜಿಲ್ಲಾ ಮತ್ತು ತಾಲ್ಲೂಕು ಘಟಕಕ್ಕೆ ಪದಾಧಿಕಾರಿಗಳು ನೇಮಕ ಮಾಡಲು ವೀಕ್ಷಕ ಸಮಿತಿ ನೇಮಕ ಮಾಡಿದ್ದಾರೆ. ಈ ಸಮಿತಿ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿ ಸಭೆ ನಡೆಸಬೇಕಿತ್ತು. ನಂದಿ ಜಾತ್ರೆ, ಶಿವರಾತ್ರಿ ಕಾರಣ ಸಭೆ ಮುಂದೆ ಹೋಯಿತು. ಶೀಘ್ರದಲ್ಲಿಯೇ ಸಭೆ ನಡೆಸುವರು ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಬಿಜೆಪಿ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ರಾಜ್ಯದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬಿಜೆಪಿ ಸಂಸದರು ಇದ್ದಾರೆ. ಆದರೆ ರಾಜ್ಯಕ್ಕೆ ಅನುಕೂಲವಾಗುತ್ತಿಲ್ಲ ಎಂದು ದೂರಿದರು.

ಅಡುಗೆ ಅನಿಲ, ಇಂಧನಗಳ ಬೆಲೆ ಹೆಚ್ಚಿದೆ. ಅಗತ್ಯ ವಸ್ತುಗಳ ಬೆಲೆಗಳು ಗನ‌ಮುಖಿ ಆಗಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರವು ಆಡಳಿತದಲ್ಲಿ ವಿಫಲವಾಗಿವೆ. ‌ಈ ಸರ್ಕಾರದ ನಡವಳಿಕೆಗಳು ಜನರಲ್ಲಿ ಬೇಸರ ತರಿಸಿವೆ ಎಂದು ಹೇಳಿದರು.

‌‌ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಕಾಂಗ್ರೆಸ್ ಪಕ್ಷದವರು ಅವರ ಕಾಲೆಳೆದರು. 2023ಕ್ಕೆ ರಾಜ್ಯದಲ್ಲಿ ಜಾತ್ಯತೀತ ಜನತಾದಳ ಆಡಳಿತ ತರುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ರೋಷನ್ ಅಬ್ಬಾಸ್ ಮಾತನಾಡಿ, ಚಿಕ್ಕಬಳ್ಳಾಪುರ ಜೆಡಿಎಸ್ ಭದ್ರಕೋಟೆ. ಆ ಸ್ಥಾನ ಉಳಿಸಿಕೊಳ್ಳಬೇಕು. ಎಲ್ಲರೂ ಒಂದೇ ಮನಸ್ಸಿನಲ್ಲಿ ಕೆಲಸ ಮಾಡಬೇಕು. ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕು ಎನ್ನುವ ಉದ್ದೇಶ ನಮ್ಮದಾಗಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ರಾಜಾಕಾಂತ್ ಮಾತನಾಡಿ, ಪಕ್ಷ ನಮ್ಮದು ಎನ್ನುವ ಭಾವನೆ ಇರಬೇಕು. ಜಾತ್ಯತೀತ ಭಾವನೆ ಇದ್ದರೆ ಪಕ್ಷ ಬೆಳೆಸಲು ಸಾಧ್ಯ. ಪಕ್ಷವನ್ನು ಬೇರು ಮಟ್ಟದಲ್ಲಿ ಬೆಳೆಸಬೇಕಾದರೆ ನಾವು ಪ್ರಾಮಾಣಿಕವಾಗಿ ಇರಬೇಕು. ಒಳಗೊಂದು ಹೊರಗೊಂದು ಇರಬಾರದು ಎಂದರು.

ಬಹಳಷ್ಟು ಪ್ರಾದೇಶಿಕ ಪಕ್ಷಗಳು ರಾಜ್ಯದಲ್ಲಿ ಉರುಳಿವೆ. ಆದರೆ ದೇವೇಗೌಡರ ಪ್ರಾಮಾಣಿಕತೆ, ಜಾತ್ಯತೀತ ನಿಲುವು, ಹೋರಾಟದ ಗುಣದ ಕಾರಣ ರಾಜ್ಯದಲ್ಲಿ ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿ ಉಳಿದಿದೆ ಎಂದು ಹೇಳಿದರು.

ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ ಮಟಮಪ್ಪ, ಮುಖಂಡರಾದ ಮುನಿಯಪ್ಪ, ಗೌರಿಬಿದನೂರು ಕ್ಷೇತ್ರದ ಮುಖಂಡ ನರಸಿಂಹ ಮೂರ್ತಿ
ಶಿಲ್ಪಾ ಗೌಡ, ಗಂಗರಾಜು, ವೀಣಾ ಮತ್ತಿತರರು ಮಾತನಾಡಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುನೇಗೌಡ ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT