ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಸ್ಪತ್ರೆಗಿಂತ ಸ್ಮಶಾನ ನಿರ್ಮಿಸಿದ ಸರ್ಕಾರ’

ಜೆಡಿಎಸ್ ಮುಖಂಡರ ಪ್ರತಿಭಟನೆ; ಕೆ.ಪಿ.ಬಚ್ಚೇಗೌಡ ವಾಗ್ದಾಳಿ
Last Updated 24 ಜೂನ್ 2021, 16:54 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಹಾಗೂ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ವಿದ್ಯುತ್ ಬೆಲೆ ಹೆಚ್ಚಳ ವಿರೋಧಿಸಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಮಾತನಾಡಿ, ‘ರಾಜ್ಯ ಸರ್ಕಾರ ಕೋವಿಡ್ ರೋಗಿಗಳ ಆರೈಕೆಗೆ ಆಸ್ಪತ್ರೆಗಳನ್ನು ನಿರ್ಮಿಸಬೇಕು. ಆದರೆ, ಇವರು ಸ್ಮಶಾನಗಳನ್ನು ನಿರ್ಮಿಸಿದರು. ಸತ್ತವರನ್ನು ಸ್ವರ್ಗಕ್ಕೆ ಸೇರಿಸುತ್ತೇವೆ ಎಂದರು. ಇವರನ್ನು ದೇವರು ಸಹ ಕ್ಷಮಿಸುವುದಿಲ್ಲ’ ಎಂದು ಟೀಕಿಸಿದರು.

ಕೋವಿಡ್ ಮೂರನೇ ಅಲೆ ಬರುತ್ತಿದೆ. ಸರ್ಕಾರ ಜನರ ಜೀವಗಳನ್ನು ಉಳಿಸಬೇಕು. ಮೈ ಮರೆಯಬಾರದು. ಕೊರೊನಾದ ಈ ಸಂದರ್ಭದಲ್ಲಿ ಸರ್ಕಾರದ ಕೆಲಸ ಆಸ್ಪತ್ರೆಗಳನ್ನು ನಿರ್ಮಿಸುವುದೇ ಹೊರತು ಸ್ಮಶಾನಗಳನ್ನಲ್ಲ ಎಂದು ಹೇಳಿದರು.

ಪೆಟ್ರೋಲ್, ಡೀಸೆಲ್, ವಿದ್ಯುತ್ ಬೆಲೆ ಹೆಚ್ಚಿದೆ. ಕೋವಿಡ್‌ನ ಈ ಸಂಕಷ್ಟದಲ್ಲಿ ಬೆಲೆ ಹೆಚ್ಚಳದ ಮೂಲಕ ಜನಸಾಮಾನ್ಯರ ಬದುಕನ್ನು ಕಷ್ಟಕ್ಕೆ ದೂಡಲಾಗಿದೆ. ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ₹ 5 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕೋವಿಡ್‌ನಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸಾಯಲು ಸರ್ಕಾರವೇ ಕಾರಣ. ಜನರಿಗೆ ವಿದ್ಯಾಭ್ಯಾಸ ನೀಡುವುದು ಅವರ ಆರೋಗ್ಯ ಕಾಪಾಡುವುದು ಸರ್ಕಾರದ ಕರ್ತವ್ಯ. ಆದರೆ, ಈ ವಿಚಾರವಾಗಿ ರಾಜ್ಯ ಸರ್ಕಾರ ವಿಫಲವಾಗಿದೆ. ತಜ್ಞರು ಎಚ್ಚರಿಕೆ ಕೊಟ್ಟರೂ ಉಪ ಚುನಾವಣೆಗಳಲ್ಲಿ ಇವರು ಮೈಮರೆತರು. ಕೋವಿಡ್ ಪ್ರಕರಣ ಹೆಚ್ಚಿದವು. ಹಾಸಿಗೆಗಳು, ವೆಂಟಿಲೇಟರ್‌ಗಳು ಇಲ್ಲದೆ ಜನರು ಮೃತಪಟ್ಟರು ಎಂದು ದೂರಿದರು.

ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್‌ ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದೆ. ಮುಖಂಡರಷ್ಟೇ ಸೇರಿದ್ದೇವೆ. ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ಸಕಾರಾತ್ಮಕ ನಿಲುವು ತಾಳಬೇಕು. ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಮುಂದೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಚಿಂತಾಮಣಿ ಶಾಸಕ ಎಂ. ಕೃಷ್ಣಾರೆಡ್ಡಿ ಮಾತನಾಡಿ, ಹಾಸಿಗೆಗಳು, ವೆಂಟಿಲೇಟರ್‌ಗಳು, ಔಷಧಿಗಳು ದೊರೆಯದೆ ಅಮಾಯಕ ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಸಾಯಲು ರಾಜ್ಯ ಸರ್ಕಾರವೇ ಕಾರಣ. ₹ 3 ಸಾವಿರ ಬೆಲೆಯ ಔಷಧಿ ₹ 30 ಸಾವಿರಕ್ಕೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಇದಕ್ಕೆಲ್ಲ ಸರ್ಕಾರವೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್ ಬೆಲೆ ₹ 101 ಆಗಿದೆ. ಡೀಸೆಲ್, ಅಡುಗೆ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಿದೆ. ರೈತರಿಗೆ ನೆರವಾಗುತ್ತೇವೆ ಎನ್ನುತ್ತಿದ್ದ ಕೇಂದ್ರ ಸರ್ಕಾರ ರಸಗೊಬ್ಬರದ ಬೆಲೆಯನ್ನು ₹ 1,200ಕ್ಕೆ ಹೆಚ್ಚಿಸಿದೆ. ಇದರಿಂದ ರೈತರಿಗೂ ಬರೆ ಎಳೆದಿದ್ದಾರೆ. ನವದೆಹಲಿಯ ಸರ್ಕಾರ ಜನರಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದೆ. ಆದರೆ, ನಮ್ಮಲ್ಲಿ ಬೆಲೆ ಹೆಚ್ಚಿಸಲಾಗಿದೆ. ಇದು ಲೂಟಿ ಸರ್ಕಾರ ಎಂದು ಕಿಡಿಕಾಡಿದರು.

ಕೋವಿಡ್ ನಿಯಮಗಳನ್ನು ಪಾಲಿಸಬೇಕಾಗಿದೆ. ಆದ ಕಾರಣ ಕಡಿಮೆ ಸಂಖ್ಯೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಸೇರಿ ಪ್ರತಿಭಟಿಸುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರದಿದ್ದರೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಲೆ ಇಳಿಕೆಗೆ ಕ್ರಮವಹಿಸದಿದ್ದರೆ ಕೋವಿಡ್ ಪೂರ್ಣವಾದ ನಂತರ ಜಿಲ್ಲಾ ಕೇಂದ್ರದಲ್ಲಿ 10 ಸಾವಿರ ಜನರನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ. ಮುನೇಗೌಡ, ನಗರಸಭೆ ಉಪಾಧ್ಯಕ್ಷೆ ವೀಣಾ ರಾಮು, ನಗರಸಭೆ ಸದಸ್ಯ ಮಟಮಪ್ಪ, ಗೌರಿಬಿದನೂರು ಜೆಡಿಎಸ್ ಮುಖಂಡ ನರಸಿಂಹಮೂರ್ತಿ, ನಗರಸಭೆ ಮಾಜಿ ಸದಸ್ಯ ಶ್ರೀನಿವಾಸ್, ಕೊಂಡೇನಹಳ್ಳಿ ಶ್ರೀಧರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT