ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಗೆಲ್ಲಿಸಿ ಯಾತ್ರೆ ಯಶಸ್ವಿಗೊಳಿಸಿ: ಎಚ್.ಡಿ.ಕುಮಾರಸ್ವಾಮಿ

ಚೇಳೂರುನಲ್ಲಿ ರೋಡ್ ಶೋ
Last Updated 26 ನವೆಂಬರ್ 2022, 4:21 IST
ಅಕ್ಷರ ಗಾತ್ರ

ಚೇಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪಣತೊಟ್ಟು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆಯು ಶುಕ್ರವಾರ ನೂತನ ತಾಲ್ಲೂಕು ಚೇಳೂರಿಗೆ ಆಗಮಿಸಿದೆ.

ರ‍್ಯಾಲಿಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಎಚ್‌ಡಿಕೆ ಅವರು, ‘ಅಧಿಕಾರಕ್ಕೆ ಬಂದರೆ ಶಿಕ್ಷಣ, ಉದ್ಯೋಗ, ರೈತರ ಸಾಲಮನ್ನಾ ಸೇರಿ ಹಲವು ಯೋಜನೆಗಳನ್ನು ಜಾರಿ ಮಾಡಲಾಗುತ್ತದೆ’ ಎಂದು ಭರವಸೆ ನೀಡಿದರು.

‘ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ. ಹೀಗಾಗಿ ಹಲವು ಪೋಷಕರು ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತೇವೆ. ಶ್ರೀಮಂತ, ಬಡವ ಎಂಬ ತಾರತಮ್ಯ ಇಲ್ಲದೆ ಶಿಕ್ಷಣ ನೀಡಲಾಗುತ್ತದೆ’ ಎಂದು ಹೇಳಿದರು.

ಎಚ್.ಡಿ.ಕುಮಾರಸ್ವಾಮಿ ಅವರ ಪಂಚರತ್ನ ರಥಯಾತ್ರೆ ಶಿಡ್ಲಘಟ್ಟ ತಾಲ್ಲೂಕಿನಿಂದ ಬಾಗೇಪಲ್ಲಿವಿಧಾನಸಭೆ ಕ್ಷೇತ್ರದ ನೂತನ ತಾಲ್ಲೂಕು ಚೇಳೂರಿಗೆ ಶುಕ್ರವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಆಗಮಿಸಿತು. ಈ ವೇಳೆ ಚೇಳೂರು ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿದರು.

ಚಿಂತಾಮಣಿ ಕ್ಷೇತ್ರದ ಶಾಸಕ ಕೃಷ್ಣಾರೆಡ್ಡಿ ಮಾತನಾಡಿದರು. ಚೇಳೂರಿನ ಜೆಡಿಎಸ್ ಪಕ್ಷದ ಮುಖಂಡರು ಸೇರಿದಂತೆ ಹಲವಾರು ಚುನಾಯಿತ ಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತಿತರರು ಭಾಗವಹಿಸಿದ್ದರು.

ಚೇಳೂರು-ಚಿಂತಾಮಣಿ ರಸ್ತೆಯ ಗಡಿಯಲ್ಲಿ ಮಾವಿನ ತೋರಣ ಕಟ್ಟಿ, ಬಾಳೆ ಗಿಡ ಇಟ್ಟು ಎಚ್‌‍ಡಿಕೆ ಅವರಿಗೆ ಹೂವಿನ ಹಾರ ಹಾಕಿ ಶಾಲು ಹೊದಿಸಿ ಬರಮಾಡಿಕೊಳ್ಳಲಾಯಿತು.

ಚೇಳೂರು ಅಭಿವೃದ್ಧಿಗೆ ಕ್ರಮ: ಭರವಸೆ
‘ಚೇಳೂರು ಅನ್ನು ತಾಲ್ಲೂಕು ಮಾಡಿದ್ದೇ ನಾನು. ಆದರೆ, ಯಾವುದೇ ಸರ್ಕಾರ ಈವರೆಗೆ ಈ ತಾಲ್ಲೂಕು ಅಭಿವೃದ್ಧಿಗೆ ಕ್ರಮ ವಹಿಸಲಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ, ಚೇಳೂರು ಅಭಿವೃದ್ಧಿಗೆ ಕ್ರಮ ವಹಿಸಲಾಗುತ್ತದೆ’ ಎಂದು ಎಚ್‌ಡಿಕೆ ಭರವಸೆ ನೀಡಿದರು.

‘ಬಿಪಿಎಲ್ ಕಾರ್ಡ್ ಇರುವ ಕುಟುಂಬಕ್ಕೆ ಸರ್ಕಾರವು ವಿಮೆ ಮಾಡಿಸಲಿದೆ. ಅಧಿಕಾರ ಹಿಡಿದ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಂಘದ ಸಾಲ ಮನ್ನಾ ಮಾಡುವ ಜೊತೆಗೆ ವಿಧವೆಯರ ಮತ್ತು ಅಂಗವಿಕಲರಿಗೆ ವೃದ್ಧರಿಗೆ ₹5,000 ಏರಿಕೆ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT