ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಬ್ಬೂರಹಳ್ಳಿ ಠಾಣೆಗೆ ನ್ಯಾಯಾಧೀಶರ ಭೇಟಿ

ಜಡ್ಜ್‌ ಪ್ರಶ್ನೆಗೆ ಪಿಎಸ್‌ಐ ನಿರುತ್ತರ l ಅಧಿಕಾರಿ ವಿರುದ್ಧ ನಾಗರಿಕರಿಂದ ದೂರುಗಳ ಸುರಿಮಳೆ
Last Updated 12 ಜೂನ್ 2022, 6:00 IST
ಅಕ್ಷರ ಗಾತ್ರ

ಸಾದಲಿ: ಸಾರ್ವಜನಿಕರಿಂದ ಬಂದ ವ್ಯಾಪಕ ದೂರುಗಳ ಬಗ್ಗೆ ಪರಿಶೀಲಿಸಲು ಶನಿವಾರ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಲಕ್ಷ್ಮಿಕಾಂತ್ ಮಸ್ಕಿನ್ ಹಾಗೂ ಶಿಡ್ಲಘಟ್ಟದ ಹಿರಿಯ ಸಿವಿಲ್ ನ್ಯಾಯಾಧೀಶ ಯಮನಪ್ಪ ಕರೆ ಹನುಮಂತಪ್ಪ ಅವರು ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.

ಟ್ರ್ಯಾಕ್ಟರ್ ವಶಪಡಿಸಿಕೊಂಡು ಆರು ತಿಂಗಳಾದರೂ ಏಕೆ ಎಫ್‌ಐಆರ್ ಹಾಕಿಲ್ಲ ಎಂಬ ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಲಾಗದೆ ತಬ್ಬಿಬ್ಬಾದ ಪಿಎಸ್‌ಐ ಪಾಪಣ್ಣ ಅವರು, ತಾವು ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಗಮನಕ್ಕೆ ತಂದಿರುವುದಾಗಿ
ತಿಳಿಸಿದರು.

ಅವರ ಸೂಚನೆಯಂತೆ ₹ 2.45 ಸಾವಿರ ಜುಲ್ಮಾನೆ ಕಟ್ಟಿ ವಾಹನ ತೆಗೆದುಕೊಂಡು ಹೋಗಲು ತಾವೇ ಜಯರಾಮಪ್ಪ ಅವರಿಗೆ ಮೌಖಿಕವಾಗಿ ತಿಳಿಸಿದ್ದರೂ ಅವರು ಬರಲೇ ಇಲ್ಲವೆಂದು ಹೇಳಿದರು. ಲಿಖಿತವಾಗಿ ಏಕೆ ನೋಟಿಸ್ ನೀಡಿಲ್ಲ ಎಂಬ ನ್ಯಾಯಾಧೀಶರ ಪ್ರಶ್ನೆಗೆ ಪಾಪಣ್ಣ ನಿರುತ್ತರರಾದರು.

ನ್ಯಾಯಾಧೀಶರು ಸ್ಥಳದಲ್ಲಿದ್ದ ವಶಪಡಿಸಿಕೊಂಡಿರುವ ಎಲ್ಲಾ ವಾಹನಗಳ ದಾಖಲೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಸಾರ್ವಜನಿಕರು ದೂರುಗಳ ಸುರಿಮಳೆಯನ್ನೇ ಸುರಿಸಿದರು. ವಕೀಲ ಶ್ರೀನಾಥ್ ಅವರು ತಮ್ಮ ಕಕ್ಷಿದಾರ ಜಯರಾಮಪ್ಪ ಹಾಗೂ ಸಾರ್ವಜನಿಕರಿಗೆ ಕಾನೂನುಬಾಹಿರವಾಗಿ ನೀಡುತ್ತಿರುವ ಕಿರುಕುಳದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

‘ತಾಲ್ಲೂಕಿನ ದಿಬ್ಬೂರಹಳ್ಳಿ ಠಾಣೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಾನೂನುಬಾಹಿರವಾಗಿ ರೈತರ ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಂಡು ಕಳೆದ ಆರು ತಿಂಗಳಿನಿಂದ ಸಬ್ ಇನ್‌ಸ್ಪೆಕ್ಟರ್‌ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ತಾವು ಜಿಲ್ಲಾ ಕಾನೂನು ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದೇನೆ’ ಎಂದು ಜಯರಾಮಪ್ಪ ತಿಳಿಸಿದರು.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಟ್ರ್ಯಾಕ್ಟರ್‌ನಲ್ಲಿ ಸುಮಾರು 14 ಪಾಯದ ಕಲ್ಲುಗಳನ್ನು ಸಾಗಿಸುತ್ತಿದ್ದಾಗ ವಶಪಡಿಸಿಕೊಂಡರು. ಯಾವುದೇ ಮೊಕದ್ದಮೆ ಹೂಡದೆ ಟ್ರ್ಯಾಕ್ಟರ್ ಬಿಡುಗಡೆ ಮಾಡಲು ₹ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಇದೇ ರೀತಿ ಬಹಳಷ್ಟು ರೈತರ ವಾಹನಗಳನ್ನು ವಶಪಡಿಸಿಕೊಂಡು ಲಂಚದ ಬೇಡಿಕೆ ಇಟ್ಟಿದ್ದಾರೆ. ಕಳೆದ ವಾರದಿಂದ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಂಡು ಮೊಕದ್ದಮೆ ಹೂಡದೆ ಲಂಚ ಪಡೆದು ಬಿಡುಗಡೆ ಮಾಡಿದ್ದಾರೆ ಎಂದು ಜಯರಾಮಪ್ಪ
ಆರೋಪಿಸಿದರು.

ಠಾಣೆಯಲ್ಲಿ ದಲ್ಲಾಳಿಗಳ ವ್ಯವಹಾರ ವ್ಯಾಪಕವಾಗಿದೆ. ಲಂಚದ ಹಣ ಸಂದಾಯ ಮಾಡಿದರೆ ಮಾತ್ರ ಯಾವುದೇ ತೊಂದರೆ ಇಲ್ಲದೆ ವಾಹನಗಳನ್ನು ಬಿಡುಗಡೆ ಮಾಡುತ್ತಾರೆ. ಠಾಣೆಯಲ್ಲಿನ ಸಿ.ಸಿ ಕ್ಯಾಮೆರಾ ಪರಿಶೀಲಿಸಿದರೆ ದಲ್ಲಾಳಿಗಳ ಹಾವಳಿ ಬಗ್ಗೆ ಸತ್ಯಾಂಶ ಬಯಲಾಗಲಿದೆ ಎಂದು ದೂರುದಾರ ಜಯರಾಮಪ್ಪ ಹೇಳಿದರು.

ಈ ಬಗ್ಗೆ ಜಿಲ್ಲಾ ಕಾನೂನು ಪ್ರಾಧಿಕಾರದ ಕಾರ್ಯದರ್ಶಿಗಳಿಗೆ ವಕೀಲರಾದ ಶ್ರೀನಾಥ್ ಮತ್ತು ಮಂಜುನಾಥ್ ಮೂಲಕ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT