ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈವಾರ: ಸಂಗೀತೋತ್ಸವ ಮುಕ್ತಾಯ

Last Updated 15 ಜುಲೈ 2022, 8:11 IST
ಅಕ್ಷರ ಗಾತ್ರ

ಚಿಂತಾಮಣಿ: ಕೈವಾರದ ಯೋಗಿನಾರೇಯಣ ಮಠದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಗುರುಪೂಜಾ ಸಂಗೀತ ಮಹೋತ್ಸವ ಗುರುವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್. ಜಯರಾಂ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಂಕೀರ್ತನೆಯೊಂದಿಗೆ ವಿಧ್ಯುಕ್ತವಾಗಿ ಮುಕ್ತಾಯಗೊಂಡಿತು.

ಬುಧವಾರ ರಾತ್ರಿ ಅನೇಕ ಹರಿಕಥೆ ದಾಸರು ಹರಿಕಥೆಗಳನ್ನು ನಡೆಸಿಕೊಟ್ಟರು. ಪ್ರತಿನಿತ್ಯದಂತೆ ಶಾಸ್ತ್ರೀಯ ಸಂಗೀತ, ಭರತನಾಟ್ಯ, ವೀಣಾವಾದನ, ನಾದಸ್ವರ, ಹರಿಕಥೆ, ಬುರ್ರಕಥೆ ಮತ್ತು ಭಜನಾ ತಂಡಗಳ ಕಲಾವಿದರು ತಮ್ಮ ಕಲೆಯನ್ನು ಗುರುವಿಗೆ ಸಮರ್ಪಿಸಿದರು. ಬೆಳಿಗ್ಗೆ ಮಂಗಳ ಹಾಡಿ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸದ್ಗುರು ತಾತಯ್ಯನವರ ಉತ್ಸವ ಮೂರ್ತಿ ಹಾಗೂ ಪಾದುಕೆಗಳಿಗೆ ಆರತಿ ಮಾಡಿ ಶಾಸ್ತ್ರೋಕ್ತವಾಗಿ ಮಂಗಳವಾದ್ಯಗಳೊಂದಿಗೆ ಮಠದ ಮೂಲ ಸ್ಥಾನಕ್ಕೆ ಕರೆದೊಯ್ಯಲಾಯಿತು.

ಮೂರ್ನಾಲ್ಕು ದಿನಗಳಿಂದ ಜನಸಾಗರದಿಂದ ಕಂಗೊಳಿಸಿದ್ದ ಕೈವಾರ ಬಿಕೋ ಎನ್ನುತ್ತಿತ್ತು. ಗ್ರಾಮದ ರಸ್ತೆಗಳಲ್ಲಿ ಸಂಚಾರವೂ ವಿರಳವಾಗಿತ್ತು. ಸಂಗೀತೋತ್ಸವದ ಯಶಸ್ವಿಗಾಗಿ ಅಹರ್ನಿಶಿ ದುಡಿದ ಶ್ರಮಜೀವಿಗಳು, ಸಂಘಟಕರಿಗೆ ಭಕ್ತರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿ ಸ್ವಸ್ಥಾನಗಳಿಗೆ ತೆರಳಿದರು.

‘ಹಗಲು–ರಾತ್ರಿ ಎನ್ನದೆ 72 ಗಂಟೆಗಳ ಕಾಲ ಅಚ್ಚುಕಟ್ಟಾಗಿ ನಡೆದ ಸಂಗೀತೋತ್ಸವದ ನೆನಪು ಸದಾ ಸಂಗೀತ ಪ್ರಿಯರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಸಂಗೀತದ ಗುಂಗಿನಲ್ಲೇ ತಮ್ಮ ಊರುಗಳ ಕಡೆಗೆ ಹೆಜ್ಜೆ ಹಾಕಿದರು. ಮುಂದಿನ ವರ್ಷಕ್ಕೆ ಮತ್ತೆ ಕಾದಿರುತ್ತೇವೆ’ ಎಂದು ಭಕ್ತೆ ಮುನಿಯಮ್ಮ ತಿಳಿಸಿದರು.

ನಿತ್ಯವೂ ಅಪಾರ ಜನಸ್ತೋಮದಿಂದ ಕಂಗೊಳಿಸಿದ್ದ ಸಭಾಂಗಣ ಬಿಕೋ ಎನ್ನಿಸುತ್ತಿತ್ತು. ಮಠದ ಸುತ್ತಮುತ್ತ ಸೇರಿದಂತೆ ಇಡೀ ಗ್ರಾಮದಲ್ಲಿ ಜನ ಜಾತ್ರೆಯೇ ನಡೆದಿತ್ತು. ಎತ್ತ ನೋಡಿದರೂ ಕಲರವ ಮೇಳೈಸಿತ್ತು. ನಿತ್ಯವೂ ಜನಸ್ತೋಮದ ಹಸಿವು ತಣಿಸಿದ್ದ ದಾಸೋಹದ ಮನೆ ಉಳಿದವರಿಗೆ ಹಾಗೂ ಭಕ್ತರಿಗೆ ಅನ್ನ ಸಾಂಬಾರಿನ ಊಟ ಬಡಿಸಿತು. ಕಟ್ಟಡದ ಮಗ್ಗಲಲ್ಲಿ ಸ್ವಚ್ಛತೆಯವರು ಬೃಹತ್ ಗಾತ್ರ ಪಾತ್ರೆಗಳನ್ನು ತೊಳೆಯುತ್ತಿದ್ದ ಚಿತ್ರಣ ಗೋಚರಿಸಿತು.

ಸಂಗೀತೋತ್ಸವದ ಸ್ಥಳ ಹಾಗೂ ಮಾಮೂಲಿ ಭಕ್ತರು ಎಂದಿನಂತೆ ಸಂಚರಿಸುತ್ತಿದ್ದರು. ಸಭಾಂಗಣದಲ್ಲಿ ನಿರ್ಮಾಣವಾಗಿರುವ ವೇದಿಕೆಗಳು ಹಾಗೂ ಮುಂದೆ ನಿರ್ಮಿಸಿರುವ ಬೃಹತ್ ಪೆಂಡಾಲ್ ತೆರವಿನಲ್ಲಿ ಶ್ರಮಿಕ ವರ್ಗ ನಿರತವಾಗಿತ್ತು. ಬೆಂಗಳೂರಿನ ಕೆಲಸಗಾರರೇ ಇದನ್ನು ನಿರ್ಮಾಣ ಮಾಡಿದ್ದಾರೆ. ತೆರವಿಗೆ ಕನಿಷ್ಠ 3-4 ದಿನಗಳು ಹಿಡಿಯುತ್ತವೆ ಎಂದು ಕೆಲಸಗಾರರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT