ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ‘ಕಲಾಭವನ’ ಪೂರ್ಣಕ್ಕೆ ಕೂಡಿಲ್ಲ ಕಾಲ!

ಕರ್ನಾಟಕ ಗೃಹ ಮಂಡಳಿಗೆ ಕಾಮಗಾರಿ ಜವಾಬ್ದಾರಿ; ಸಾಂಸ್ಕೃತಿಕ ವಲಯದ ಅಸಮಾಧಾನ
Last Updated 9 ಜೂನ್ 2022, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬರೋಬರಿ ಎಂಟು ವರ್ಷಗಳು ಪೂರ್ಣವಾಯಿತು. ಆದರೂ ಕಾಮಗಾರಿ ಮಾತ್ರ ಮುಗಿದಿಲ್ಲ. ಹೀಗೆ ಅರೆ ಬರೆಯಾಗಿ ನಿರ್ಮಾಣವಾಗಿರುವ ಕಟ್ಟಡ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ರಾತ್ರಿ ವೇಳೆ ಪುಂಡರ ಅಡ್ಡೆ ಆಗುತ್ತದೆ. ಕಟ್ಟಡ ಕಾಮಗಾರಿ ವೇಳೆ ಸುತ್ತಲು ಅಳವಡಿಸಿದ್ದ ತಗಡಿನ ಶೀಟ್‌ಗಳು ರವಾಗಿವೆ. ಬಿಬಿ ರಸ್ತೆಯಲ್ಲಿ ಸಾಗುವ ಜನರಿಗೆ ಇದು ಭೂತ ಬಂಗಲೆಯಂತೆ ಭಾಸವಾಗುತ್ತದೆ!

ಇದುಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಬೇಕು ಎನ್ನುವ ಉದ್ದೇಶದಿಂದ ನಗರದ ಬಿಬಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಕಲಾಭವನದ ಸ್ಥಿತಿ. ಭವನದ ಕಾಮಗಾರಿ ಎಂಟುವರ್ಷವಾದರೂ ಪೂರ್ಣವಾಗಿಲ್ಲ! ಕಾಮಗಾರಿಯ ಆಮೆನಡಿಗೆ ಜಿಲ್ಲೆಯ ಸಾಂಸ್ಕೃತಿಕ ಮತ್ತು ಕಲಾಪ್ರಿಯರಲ್ಲಿ ಬೇಸರಕ್ಕೆ ಕಾರಣವಾಗಿದೆ.

ಬಿಬಿ ರಸ್ತೆಯಲ್ಲಿ 2.4 ಎಕರೆ ವಿಸ್ತೀರ್ಣದಲ್ಲಿ ಕಲಾಭವನ ಕಾಮಗಾರಿ 2014ರಲ್ಲಿ ಆರಂಭವಾಯಿತು. ಒಂದು ಸಾವಿರ ಮಂದಿಗೆ ಆಸನಗಳ ವ್ಯವಸ್ಥೆ ಸೇರಿದಂತೆ ಸುಸಜ್ಜಿತ ಕಲಾಭವನ ಮತ್ತು ರಂಗಮಂದಿರ ನಿರ್ಮಿಸಬೇಕು ಎನ್ನುವ ಸದಾಶಯದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಒಟ್ಟು ₹ 12.5 ಕೋಟಿ ಕಾಮಗಾರಿಗೆ ಮಂಜೂರಾಯಿತು.

ಮೊದಲ ಹಂತದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹ 1ಕೋಟಿ ಮತ್ತು ಜಿಲ್ಲಾ ವಿಶೇಷ ಅಭಿವೃದ್ಧಿ ಯೋಜನೆಯಿಂದ ₹ 5 ಕೋಟಿ ಬಿಡುಗಡೆ ಮತ್ತು 2021ರ ಮಾರ್ಚ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮತ್ತೆ ₹ 1 ಕೋಟಿ ಬಿಡುಗಡೆ ಆಗಿದೆ. ಸದ್ಯ ಸಿವಿಲ್ ಕಾಮಗಾರಿಗಳು ಪೂರ್ಣವಾಗಿವೆ. ಹವಾನಿಯಂತ್ರಕ ವ್ಯವಸ್ಥೆ, ವಿದ್ಯುತ್, ಧ್ವನಿ ಮತ್ತು ಬೆಳಕು, ವೇದಿಕೆ ಇತ್ಯಾದಿ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆ. ಕರ್ನಾಟಕ ಗೃಹಮಂಡಳಿಗೆ ಕಾಮಗಾರಿಯ ಜವಾಬ್ದಾರಿವಹಿಸಲಾಗಿದೆ. ಆದರೆ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾ ವಿಶೇಷ ಅಭಿವೃದ್ಧಿ ಯೋಜನೆಯಿಂದ ಹಣ ಪೂರ್ಣವಾಗಿ ಬಿಡುಗಡೆಯೇ ಆಗಿಲ್ಲ. ಈ ಕಾರಣದಿಂದ ಕಲಾಭವನ ಅನಾಥವಾಗಿದೆ.

ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ₹ 6.5 ಕೋಟಿ ಅಗತ್ಯವಿದೆ. 2ನೇ ಹಂತದ ಕಾಮಗಾರಿಯಲ್ಲಿ ಕಲ್ಯಾಣಿ ಅಭಿವೃದ್ಧಿ, ಕಾಂಪೌಂಡ್ ಕಾಮಗಾರಿಗೆ ₹ 3.05 ಕೋಟಿ ಸೇರಿದಂತೆ ಒಟ್ಟು ₹ 9.55 ಕೋಟಿ ಅನುದಾನ ಅವಶ್ಯವಾಗಿದೆ ಎಂದು ಷರಾ ಬರೆಯಲಾಗಿದೆ. ಈ ಷರಾ ಬರೆದೇ ವರ್ಷಗಳು ದಾಟಿವೆ.

ಕಟ್ಟಡದೊಳಗೆ ಪ್ರವೇಶಿಸಿದರೆ ಮಳೆಗಾಳಿಗೆ ಕಸಕಡ್ಡಿಗಳು ತುಂಬಿವೆ. ಇಡೀ ಆವರಣದಲ್ಲಿ ಆಳೆತ್ತರದಗಿಡಗಂಟಿಗಳು ಬೆಳೆದಿವೆ. ಕಾಮಗಾರಿ ನಡೆಯುವಾಗ ಸುತ್ತಲೂ ಅಳವಡಿಸಿದ್ದ ಶೀಟ್‌ಗಳು ತೆರವಾಗಿವೆ. ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಬೇಕಾಗಿದ್ದ ಮತ್ತು ಈಗಾಗಲೇ ಚಟುವಟಿಕೆಗಳಿಂದ ಕೂಡಿರಬೇಕಾಗಿದ್ದ ಕಲಾಭವನ ಅನಾಥ ಕಟ್ಟಡವಾಗಿದೆ. ಕಟ್ಟಡದಲ್ಲಿ ಮದ್ಯದ ಬಾಟಲಿಗಳು, ಬಟ್ಟೆಗಳು, ಚಾಪೆಗಳು ಕಾಣುತ್ತವೆ. ಕಲಾಭವನ ಅನೈತಿಕ ಚಟುವಟಿಕೆಗಳ ತಾಣ ಎನ್ನುವುದನ್ನು ಈ ಚಿತ್ರಣ ಸಾಬೀತುಪಡಿಸುತ್ತದೆ.

8 ವರ್ಷವಾದರೂ ಕಟ್ಟಡ ಕಾಮಗಾರಿ ಪೂರ್ಣವಾಗಿ ಸಾಂಸ್ಕೃತಿಕ ಕಲರವ ಆರಂಭವಾಗದಿರುವುದು ರಂಗಪ್ರೇಮಿಗಳಲ್ಲಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದವರಲ್ಲಿ ಬೇಸರ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.

ಹೆಚ್ಚುವರಿ ಹಣದ ಅಗತ್ಯ?
2014ರಲ್ಲಿ ಕಾಮಗಾರಿ ಆರಂಭವಾದಾಗ ₹ 12.5 ಕೋಟಿಯ ಯೋಜನೆ ಇದಾಗಿತ್ತು. ಆದರೆ ಈ ಎಂಟು ವರ್ಷಗಳಾದರೂ ಕಾಮಗಾರಿ ಪೂರ್ಣವಾಗದ ಕಾರಣ ಯೋಜನೆಯ ವೆಚ್ಚ ಸಹಜವಾಗಿ ಹೆಚ್ಚಾಗುವ ಸಾಧ್ಯತೆ ಸಹ ಇದೆ. ಬಾಕಿ ಇರುವ ಹಣ ಬಿಡುಗಡೆಯಾದರೂ ಕಾಮಗಾರಿ ಪೂರ್ಣವಾಗುವ ಲಕ್ಷಣಗಳು ಇಲ್ಲ.

ಮತ್ತೆ ಹೆಚ್ಚುವರಿಯಾಗಿ ಹಣದ ಅಗತ್ಯವಿದೆ ಎನ್ನುವ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಕೆ ಆಗಬೇಕಾಗಿದೆ. ಈ ಎಲ್ಲ ದೃಷ್ಟಿಯಿಂದ ನೋಡುವುದಾದರೆ 2022ರಲ್ಲಿಯೂ ಕಲಾಭವನ ಬಳಕೆಗೆ ಮುಕ್ತವಾಗುವ ಲಕ್ಷಣಗಳು ಇಲ್ಲ ಎನ್ನುತ್ತವೆ ಮೂಲಗಳು.

ರಾಜಕೀಯ ಇಚ್ಚಾಶಕ್ತಿ ಕೊರತೆ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಲೆಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಲೇ ಇಲ್ಲ. ಕಲಾ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ರಾಜಕೀಯ ಇಚ್ಚಾಶಕ್ತಿ ಕೊರತೆ ಇದೆ. ಶಿವಮೊಗ್ಗ ರಂಗಾಯಣವು ಈ ಬಾರಿ ಐದು ಜಿಲ್ಲೆಗಳಲ್ಲಿ ಕಾಲೇಜು ರಂಗೋತ್ಸವ ಆಯೋಜಿಸಿತ್ತು. ನಾನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಂಗೋತ್ಸವದ ಸಂಚಾಲಕನಾಗಿದ್ದೆ. ಆದರೆ ನಮಗೆ ಜಿಲ್ಲಾ ಕೇಂದ್ರದಲ್ಲಿಯೇ ನಾಟಕ ಮಾಡಲು ಸೂಕ್ತವಾದ ಸ್ಥಳ ದೊರೆಯಲಿಲ್ಲ. ಕಲಾಭವನ ನಿರ್ಮಾಣವಾಗಿದ್ದರೆ ಸಾಂಸ್ಕೃತಿಕ ಮತ್ತು ರಂಗ ಚಟುವಟಿಕೆಗಳಿಗೆ ಉತ್ತಮ ಸ್ಥಳ ಆಗುತ್ತಿತ್ತು. ಎಲ್ಲ ಜಿಲ್ಲೆಗಳಲ್ಲಿಯೂ ಕಲಾ ಭವನ ಇದೆ. ಆದರೆ ನಮ್ಮಲ್ಲಿ ಮಾತ್ರ ಕಲಾಭವನವಿಲ್ಲ.
-ದಿಲೀಪ್,ರಂಗಕರ್ಮಿ, ಚಿಕ್ಕಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT