ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕರ ತತ್ವ: ಜೀವನ ಹಸನು

ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿಯ‌ ಕನಕದಾಸರ ಜಯಂತಿ; ಬಸವರಾಜ ಬೊಮ್ಮಾಯಿ ಅಭಿಮತ
Last Updated 12 ಮಾರ್ಚ್ 2022, 15:17 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿಯು ಅದ್ಧೂರಿಯಾಗಿ ನಡೆಯಿತು. ಪ್ರಮುಖ ರಸ್ತೆಗಳಲ್ಲಿ ಕನಕದಾಸರ ಭಾವಚಿತ್ರವುಳ್ಳ ಪಲ್ಲಕ್ಕಿಯ ಮೆರವಣಿಗೆ ನಡೆಯಿತು. ಈ ವೇಳೆ ಕುರುಬ ಸಮುದಾಯದವರು ಕನಕದಾಸರ ಪರವಾಗಿ ಘೋಷಣೆಗಳನ್ನು ಮೊಳಗಿಸಿದರು. ಮೆರವಣಿಗೆಗೆ ವಿವಿಧ ಕಲಾ ತಂಡಗಳು ಮೆರುಗು ತುಂಬಿದ್ದವು.

ನಂತರ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ‘ಜೀವನದಲ್ಲಿ ಕನಕದಾಸರ ತತ್ವಗಳನ್ನು ಶೇ 1ರಷ್ಟು ಅಳವಡಿಸಿಕೊಂಡರೂ ಬದುಕು ಹಸನಾಗುತ್ತದೆ.ಕನಕದಾಸರ ಜೀವನಚರಿತ್ರೆ ಮತ್ತು ಅವರ ಸಾಹಿತ್ಯ ಓದಿದರೆ ನಮಗೆ ಬದುಕುವ ದಾರಿ ತಿಳಿಯುತ್ತದೆ’ ಎಂದು ಹೇಳಿದರು.

ರಾಜ್ಯಾಡಳಿತವನ್ನು ಮಾಡಿದ ಕನಕದಾಸರು ವೈರಾಗ್ಯಕ್ಕೆ ಸಿಲುಕಿದರು. ನಂತರ ತ್ರಿಪದಿ, ತತ್ವಪದಗಳು ಮತ್ತು ಸಾಹಿತ್ಯದ ಮೂಲಕ ಸಮಾನತೆಯನ್ನು ಸಾರಿದರು.ಕನಕದಾಸರು ನಮ್ಮ ಆತ್ಮದ ಒಳಗೆ ಇದ್ದಾರೆ. ಅವರ ವಿಚಾರಗಳು ನಮ್ಮ ಆತ್ಮದ ಒಳಗಿವೆ. ಕರ್ನಾಟಕ ದಾಸ ಪರಂಪರೆಯಲ್ಲಿ ಕನಕದಾಸರು ಮತ್ತು ಪುರಂದರ ದಾಸರು ಪ್ರಮುಖರು ಎಂದು ಹೇಳಿದರು.

‘ನಮ್ಮ ಕ್ಷೇತ್ರದಲ್ಲಿ ನಾನು ಕನಕದಾಸರ ಅರಮನೆ ಮತ್ತು ಕೋಟೆಯನ್ನು ಕಟ್ಟಿಸಿದ್ದೇನೆ. ಆ ಅರಮನೆಯ ಒಳಗೆ ಕನಕದಾಸರ ಪದಗಳಿಗೆ. ಅವರ ಬದುಕನ್ನು ತೋರುವ ಚಿತ್ರಗಳಿವೆ. ನಿತ್ಯಸಾವಿರಾರು ಜನರು, ಶಾಲಾ ಮಕ್ಕಳು ಅರಮನೆ ಮತ್ತು ಕೋಟೆಯನ್ನು ಕಣ್ತುಂಬಿಕೊಳ್ಳುವರು’ ಎಂದು ಹೇಳಿದರು.

ಚಿಕ್ಕಬಳ್ಳಾಪುರದ ಹಾಲುಮತ ಸಮಾಜದವರಿಗೆ ಅರಮನೆ ಮತ್ತು ಕೋಟೆ ನೋಡುವಂತೆ ಆಹ್ವಾನ ನೀಡುತ್ತಿದ್ದೇನೆ. ಸುಧಾಕರ್ ಅವರು ಬಸ್‌ಗಳಲ್ಲಿ ಜನರನ್ನು ಕಳುಹಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜು ಮಾತನಾಡಿ, ಕನಕದಾಸರು ಸಮಾಜಕ್ಕೆ ಆದರ್ಶಪ್ರಾಯ. ಸಾಹಿತ್ಯ ಮತ್ತು ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದಿದರು. ಕೀರ್ತನೆಗಳ ಮೂಲಕ ಸತ್ಯ ಸಂಗತಿಗಳನ್ನು ಸಮಾಜಕ್ಕೆ ಸಾರಿದರು ಎಂದು ಹೇಳಿದರು.

ಜಾತಿ ವ್ಯವಸ್ಥೆಯನ್ನು ಮಾಡಿಕೊಂಡಿರುವವರು ನಾವು. ಇಂತಹ ಜಾತಿ ವ್ಯವಸ್ಥೆಯನ್ನು ಅಂದು ಕಟುವಾಗಿ ಟೀಕಿಸಿದರು. ಕನಕದಾಸರು ಸತ್ಯದ ಯುಗದಲ್ಲಿ ಹುಟ್ಟಿದರು. ನಾವು ಸತ್ಯ ಮತ್ತು ನ್ಯಾಯದ ಹಾದಿಯಲ್ಲಿ ನಡೆಯಬೇಕು ಎಂದು ಹೇಳಿದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ,ಹಾಲುಮತ ಸಮುದಾಯದ ಜತೆ ನನಗೆ ಬಾಂಧವ್ಯವಿದೆ. ಹಾಲಿಗಿಂತ ಅಮೃತಬೇರೆ ಇಲ್ಲ ಎನ್ನುವ ಮಾತಿದೆ. ಆ ರೀತಿಯಲ್ಲಿ ನಂಬಿಕೆಗೆ ಮತ್ತು ವಿಶ್ವಾಸಕ್ಕೆ ಹಾಲುಮತ ಸಮುದಾಯ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಹೇಳಿದರು.

ಸಮುದಾಯದಲ್ಲಿ ಒಗ್ಗಟ್ಟು ಅಗತ್ಯ. ಸಮುದಾಯ ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಮುಂದೆ ಬರಬೇಕು. ನಿಮ್ಮ ಜತೆ ನಾವು ಇರುತ್ತೇವೆ. ನಿಮ್ಮ ಯುವಪೀಳಿಗೆಯ ಭವಿಷ್ಯವನ್ನು ಕಟ್ಟಬೇಕು ಎಂದರು.

ಕುರುಬ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಚಿವ ಆರ್.ಅಶೋಕ,ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಸಮುದಾಯದ ಮುಖಂಡರಾದ ವರ್ತೂರು ಪ್ರಕಾಶ್, ಶ್ರೀನಿವಾಸ್, ರಂಗಪ್ಪ, ಶಂಕರಪ್ಪ, ಎಲೆಮರಿ, ನರೇಂದ್ರ ಬಾಬು, ಡೇರಿ ಗೋಪಿ ಹಾಗೂ ಕುರುಬರ ಸಂಘದ ಪದಾಧಿಕಾರಿಗಳು ಇದ್ದರು.

***

ಕನಕ ಭವನಕ್ಕೆ 20 ಗುಂಟೆ ಜಮೀನು

ಈ ವೇಳೆ ಜಿಲ್ಲಾ ಕನಕ ಭವನ ನಿರ್ಮಾಣಕ್ಕೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಹೊನ್ನೇನಹಳ್ಳಿ ಬಳಿ 20 ಗುಂಟೆ ಜಮೀನನ್ನು ನೀಡಲಾಯಿತು. ಮುಖ್ಯಮಂತ್ರಿ ಈ ಮಂಜೂರಾತಿ ಪತ್ರವನ್ನು ಸಮುದಾಯದ ಮುಖಂಡರಿಗೆ ನೀಡಿದರು.

‘ಕನಕ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ ಮತ್ತು ಸಹಾಯ ನೀಡುತ್ತೇವೆ. ಭವನದ ಉದ್ಘಾಟನೆಗೆ ನಾನೇ ಬರಬೇಕು ಎನ್ನುವ ಆಸೆ ಇದೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

***

ಸುಧಾಕರ್ ಕೈ ಬಲಪಡಿಸಿ

ಮಾಜಿ ಸಚಿವ ಹಾಗೂ ಕುರುಬ ಸಮುದಾಯದ ಮುಖಂಡವರ್ತೂರು ಪ್ರಕಾಶ್ ಮಾತನಾಡಿ, ಕನಕದಾಸರ ಜಯಂತಿ ಮಾಡಿ ಜನ ಸೇರಿಸುವುದಲ್ಲ. ಆರ್ಥಿಕ, ಶೈಕ್ಷಣಿಕ, ರಾಜಕೀಯ ಹೀಗೆ ಎಲ್ಲ ವಿಚಾರದಲ್ಲಿ ಸಮಾಜಕ್ಕೆ ಶಕ್ತಿ ಕೊಡಬೇಕು ಎಂದರು.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಮುದಾಯದ ಆರ್ಥಿಕ ವ್ಯವಸ್ಥೆ ಉತ್ತಮವಾಗಿಲ್ಲ. ಒಗ್ಗಟ್ಟು ಚೆನ್ನಾಗಿದೆ.ನಮ್ಮ ಸಮಾಜ ಭೂಮಿ ಕಚ್ಚಿಕೊಂಡಿದೆ. ನಾವು ಯಾವ ಪಕ್ಷಕ್ಕೂ ನಮ್ಮನ್ನು ಮಾರಿಕೊಂಡಿಲ್ಲ ಎಂದರು.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಕ್ಕಲಿಗ ಸಮಾಜದ 50 ಸಾವಿರ ಮತದಾರರು ಇದ್ದಾರೆ. ನಾವು 27 ಸಾವಿರ ಇದ್ದೇನೆ. ನೀವು ಸಚಿವ ಸುಧಾಕರ್ ಜತೆ ಇರಬೇಕು. ಸುಧಾಕರ್ ಕೈ ಬಲಪಡಿಸೋಣ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT