ಬುಧವಾರ, ಏಪ್ರಿಲ್ 14, 2021
30 °C
ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನದ ಸ್ಪರ್ಧಿ ವ.ಚ.ಚನ್ನೇಗೌಡ ಹೇಳಿಕೆ

ಸಾಹಿತ್ಯ ಸಮ್ಮೇಳನ; ಮಹಿಳೆಯರಿಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ದೊರೆಯುತ್ತಿಲ್ಲ ಎನ್ನುವ ಆರೋಪವಿದೆ. ನಾನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾದರೆ ಅಧಿಕಾರದ ಅವಧಿಯಲ್ಲಿ ನಡೆಯುವ ಎರಡು ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಮಹಿಳೆಯರಿಗೆ ನೀಡಲಾಗುವುದು ಎಂದು ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನದ ಸ್ಪರ್ಧಿ ವ.ಚ.ಚನ್ನೇಗೌಡ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 3.10 ಲಕ್ಷ ಮತದಾರರು ಇದ್ದಾರೆ. ನಾನು 26ನೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ನಾಲ್ಕೂವರೆ ದಶಕಗಳ ಕಾಲ ಕನ್ನಡ ಸೇವೆಯಲ್ಲಿ ತೊಡಗಿದ್ದೇನೆ. ಪರಿಷತ್‌ನಲ್ಲಿ ಆಡಳಿತದ ಅನುಭವ ಇದೆ. ಅನೇಕ ಕನಸುಗಳೊಂದಿಗೆ ಸ್ಪರ್ಧೆಗೆ ಇಳಿದಿದ್ದೇನೆ ಎಂದು ಮಾಹಿತಿ ನೀಡಿದರು.

ಭಾಷೆ, ನೆಲ, ಜಲ ಸೇರಿದಂತೆ ಕನ್ನಡಿಗರಿಗೆ ಎದುರಾಗುವ ಯಾವುದೇ ಸಮಸ್ಯೆಗಳನ್ನು ಎದುರಿಸಲು ಪರಿಷತ್ ಮುಂದಾಳತ್ವವಹಿಸಬೇಕು ಎನ್ನುವುದು ನನ್ನ ಉದ್ದೇಶ. ಸರ್ಕಾರಗಳು ತಪ್ಪು ಮಾಡಿದಾಗ ಪರಿಷತ್ ಪ್ರಶ್ನೆ ಮಾಡಬೇಕು. ಈ ಎಲ್ಲ ದೃಷ್ಟಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಮತದಾರರು ನನ್ನ ಬೆಂಬಲಿಸಿ ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರದ ಉದ್ಯೋಗಗಳು ಕನ್ನಡದ ಮಕ್ಕಳಿಗೆ ದೊರೆಯುತ್ತಿಲ್ಲ. ಕೇಂದ್ರ ಸರ್ಕಾರ ಪ್ರಕಟಣೆಗಳು ಸಹ ಕನ್ನಡದಲ್ಲಿ ಇಲ್ಲ. ಈ ಕಾರಣದಿಂದ ಪರಿಷತ್‌ನಲ್ಲಿ ಉದ್ಯೋಗ ಮಾಹಿತಿ ವಿಭಾಗ ತೆರೆಯುವೆ. ಐಎಎಸ್‌, ಐಪಿಎಸ್‌ ಪರೀಕ್ಷೆಗಳನ್ನು ಕೆಲವರು ಮಾತ್ರ ಕನ್ನಡದಲ್ಲಿ ಬರೆದು ತೇರ್ಗಡೆ ಆಗುತ್ತಿದ್ದಾರೆ. ಹೆಚ್ಚು ಅಭ್ಯರ್ಥಿಗಳ ಉತ್ತೀರ್ಣಕ್ಕೆ ಪೂರಕವಾಗಿ ಪಠ್ಯ ಒದಗಿಸಬೇಕು ಎನ್ನುವುದು ನನ್ನ ಆಲೋಚನೆ ಎಂದು ಹೇಳಿದರು.

ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಮಾತನಾಡಿ, ‘ಚನ್ನೇಗೌಡ ನನ್ನ ಆತ್ಮೀಯ ಸ್ನೇಹಿತರು. ಪರಿಷತ್ ಗೌರವ ಕಾರ್ಯದರ್ಶಿಯಾಗಿದ್ದ ವೇಳೆ ಅವರು ಸಂಭಾವನೆ ಸಹ ಪಡೆಯಲಿಲ್ಲ. ಆ ಸಂಭಾವನೆಯನ್ನು ಪರಿಷತ್‌ಗೆ ನೀಡಿ ಕನ್ನಡ ಕಾಯಕ ದತ್ತಿ ಪ್ರಶಸ್ತಿ ಸ್ಥಾಪಿಸಿದ್ದಾರೆ’ ಎಂದು ಹೇಳಿದರು.

ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಸ್ಥಾಪಿಸಿ ನಾಡು, ನುಡಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಅಧ್ಯಕ್ಷರಾದರೆ ಸಾಹಿತಿ ಮತ್ತು ಹೋರಾಟಗಾರರ ನಡುವೆ ಸಮನ್ವಯ ಬೆಸೆಯುವರು. ಪರಿಷತ್ ಪ್ರಕಟಣೆಗಳನ್ನು ತಾಲ್ಲೂಕು ಮತ್ತು ಜಿಲ್ಲಾ ಮಟ್ಟಕ್ಕೆ ಕೊಂಡೊಯ್ಯುವರು ಎಂದು ಹೇಳಿದರು.

ರಫಾಯಲ್ ರಾಜ್ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು