ಶನಿವಾರ, ನವೆಂಬರ್ 16, 2019
22 °C
ಜಿಲ್ಲೆಯಾದ್ಯಂತ ಸಂಭ್ರಮದಿಂದ ‘ಕನ್ನಡ ರಾಜ್ಯೋತ್ಸವ’ ಆಚರಣೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಸಡಗರದ ನಡುವೆ ಕನ್ನಡಮ್ಮನ ಉತ್ಸವ

Published:
Updated:
Prajavani

ಚಿಕ್ಕಬಳ್ಳಾಪುರ: ಅಲ್ಲಿ ಎಲ್ಲೆಡೆ ಕನ್ನಡದ ಕಲರವ ಮನೆ ಮಾಡಿತ್ತು. ಕನ್ನಡಮ್ಮನ ಉತ್ಸವಕ್ಕೆ ಸಜ್ಜುಗೊಂಡು ಬಂದವರ ಸಡಗರದ ಮೇರೆ ಮೀರಿತ್ತು. ತಾಯ್ನುಡಿಯ ವೈಭೋಗ ಸಾರುವ ಗೀತೆಗಳು ಮನದಾಳದ ಅಭಿಮಾನವನ್ನು ಬಡಿದ್ದೆಬ್ಬಿಸಿ ಪದೇ ಪದೇ ಕರತಾಡನ ಅನುರಣಿಸುವಂತೆ ಮಾಡಿದ್ದವು.

– ಇದು ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಜರುಗಿದ ಕನ್ನಡ ರಾಜ್ಯೋತ್ಸವದ ದಿನಾಚರಣೆ ಕಾರ್ಯಕ್ರಮದ ಝಲಕ್.

ಜಿಲ್ಲಾಧಿಕಾರಿ ಆರ್.ಲತಾ ಅವರು ಬೆಳಿಗ್ಗೆ 9 ಗಂಟೆ ಸುಮಾರಿಗೆ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪಥ ಪರಿವೀಕ್ಷಣೆ ನಡೆಸಿದರು.

ಬಳಿಕ ಪರೇಡ್‌ ಕಮಾಂಡರ್‌ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್ಸ್‌ಪೆಕ್ಟರ್‌ ಎನ್‌.ಎಲ್‌.ನಾಗೇಂದ್ರಪ್ರಸಾದ್‌ ಅವರ ನೇತೃತ್ವದಲ್ಲಿ 16 ತಂಡಗಳು ಪಥ ಸಂಚಲನ ನಡೆಸಿದವು. ಜತೆಗೆ ಪೊಲೀಸ್‌ ಬ್ಯಾಂಡ್‌, ವಿವಿಧ ಕಲಾತಂಡಗಳು ಕಾರ್ಯಕ್ರಮಕ್ಕೆ ಹುರುಪು ತುಂಬಿದವು.

ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್‌ ತುಕಡಿ, ಜಿಲ್ಲಾ ನಾಗರಿಕ ಪೊಲೀಸ್ ತುಕಡಿ, ಗೃಹ ರಕ್ಷಕ ದಳ, ಸರ್‌ ಎಂ.ವಿ.ಪ್ರೌಢಶಾಲೆಯ ಭಾರತ ಸೇವಾ ದಳ, ವಾಪಸಂದ್ರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಭಾರತಿ ಪ್ರೌಢಶಾಲೆ, ಪೂರ್ಣ ಪ್ರಜ್ಞಾ ಪ್ರೌಢಶಾಲೆ, ಸರ್‌.ಎಂ.ವಿ.ಸ್ಮಾರಕ ಪ್ರೌಢಶಾಲೆ, ಬ್ರೈಟ್ ಪ್ರೌಢಶಾಲೆ, ಪಂಚಗಿರಿ ಬೋಧನಾ ಶಾಲೆ, ಗುಡ್ ಶಫರ್ಡ್ ಪ್ರೌಢಶಾಲೆ, ನ್ಯೂಟನ್ ಗ್ರಾಮರ್ ಪ್ರೌಢಶಾಲೆ, ಕ್ವಟ್‌ ಕಾರ್ನರ್ ಪ್ರೌಢಶಾಲೆ ವಿದ್ಯಾರ್ಥಿಗಳು ನಡೆಸಿದ ಕವಾಯತು ನೋಡುಗರ ಮನಸೆಳೆಯಿತು.

ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ನಗರದ ಪ್ರಕಾಶ್‌ (ನ್ಯಾಯಾಂಗ ಸೇವೆ), ಬಿ.ಸುಭಾನ್ (ಪರಿಸರ), ಚಿಂತಾಮಣಿ ತಾಲ್ಲೂಕಿನ ಎಸ್‌.ಸಿ.ನರಸಿಂಹಪ್ಪ (ಜಾನಪದ ಕಲೆ), ಎಂ.ಎಸ್.ನಾಗೇಂದ್ರ ಪ್ರಸಾದ್ (ಪತ್ರಿಕೋದ್ಯಮ), ರಾಮಣ್ಣ (ಕಲೆ ಮತ್ತು ಸಂಸ್ಕೃತಿ), ಗೌರಿಬಿದನೂರು ತಾಲ್ಲೂಕಿನ ಎನ್.ವೆಂಕಟೇಶ್‌ ಬಾಬು (ಕ್ರೀಡೆ), ಪ್ರಭಾ ನಾರಾಯಣಗೌಡ (ಸಾಹಿತ್ಯ), ಶಿಡ್ಲಘಟ್ಟ ತಾಲ್ಲೂಕಿನ ಎಚ್.ಕೆ.ಸುರೇಶ್‌ (ಕೃಷಿ), ಬಿ.ಆರ್.ಅನಂತಕೃಷ್ಣ (ಸಮಾಜಸೇವೆ) ಮತ್ತು ಬಾಗೇಪಲ್ಲಿ ತಾಲ್ಲೂಕಿನ ವಲಿಬಾಷಾ (ಸಾಹಿತ್ಯ) ಅವರಿಗೆ 2019ನೇ ಸಾಲಿನ ‘ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಭಾಜನರಾಗಿದ್ದಾರೆ.

ರಾಜ್ಯೋತ್ಸವದ ಸಂದೇಶದ ತರುವಾಯ ಪ್ರೌಢಶಾಲೆಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಇಡೀ ಮೈದಾನಕ್ಕೆ ರಂಗು ತುಂಬಿದವು.

ಸಾಂಸ್ಕೃತಿಕ ಕಾರ್ಯಕ್ರಮಗಳ ಆರಂಭದಲ್ಲಿ ನ್ಯೂಹೊರೈಜೆನ್ ಶಾಲೆಯ ವಿದ್ಯಾರ್ಥಿಗಳು ‘ಕನ್ನಡದ ಮಾತು ಚೆಂದ, ಕನ್ನಡದ ನುಡಿಯು ಚೆಂದ’ ಹಾಡಿಗೆ ಮಾಡಿದ ನೃತ್ಯ ನೆರೆದವರಲ್ಲಿ ಭಾಷಾಭಿಮಾನ ಉದ್ದೀಪಿಸಿತು. ಇಂಡಿಯನ್ ಪಬ್ಲಿಕ್ ಶಾಲೆಯ ಮಕ್ಕಳು ‘ಬಾರಿಸು ಕನ್ನಡ ಡಿಂಡಿಮವ’ ಗೀತೆಗೆ ಹೆಜ್ಜೆ ಹಾಕಿ ಗಮನ ಸೆಳೆದರು. ಗೌರಿಬಿದನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ‘ಜೀವ ಕನ್ನಡ’ ನೃತ ರೂಪಕದ ಮೂಲಕ ಚಪ್ಪಾಳೆ ಗಿಟ್ಟಿಸಿದರು.

ಬಳಿಕ ಪೂರ್ಣ ಪ್ರಜ್ಞಾ ಪ್ರೌಢಶಾಲೆ ವಿದ್ಯಾರ್ಥಿಗಳು ‘ಕನ್ನಡಕ್ಕಾಗಿ ಜನನ, ಕನ್ನಡಕ್ಕಾಗಿ ಮರಣ’, ಶಿಡ್ಲಘಟ್ಟ ತಾಲ್ಲೂಕಿನ ಸುಂಡ್ರಹಳ್ಳಿಯ ಇಂದಿರಾ ಗಾಂಧಿ ವಸತಿ ಶಾಲೆಯ ಮಕ್ಕಳು ‘ಅವ್ವ ಕಣೋ’ ನೃತ್ಯ ಪ್ರದರ್ಶಿಸುವ ಮೂಲಕ ನೆರೆದವರ ಮೆಚ್ಚುಗೆಗೆ ಪಾತ್ರರಾದರು.

ಸಂಸದ ಬಿ.ಎನ್.ಬಚ್ಚೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್, ಎಸ್‌ಪಿ ಅಭಿನವ್ ಖರೆ, ಉಪವಿಭಾಗಾಧಿಕಾರಿ ರಘುನಂದನ್ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)