ಗುರುವಾರ , ಫೆಬ್ರವರಿ 25, 2021
29 °C
ಬಚ್ಚೇನಹಳ್ಳಿ ಗ್ರಾಮದಲ್ಲಿ 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಮತ್ತು ಟೀಮ್ ಯೋಧ ನಮನ ಕಾರ್ಯಕ್ರಮ

ಸೇನೆಗೆ ಹಳ್ಳಿಗರ ಕೊಡುಗೆ ಅಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಮಂಡಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಚ್ಚೇನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಮತ್ತು ಟೀಮ್ ಯೋಧ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಲೆಪ್ಟಿನೆಂಟ್ ಕರ್ನಲ್ ರಾಮದಾಸ್, ‘ದೇಶದಲ್ಲಿ ಸೇನೆ ಇದೆ ಎಂದರೆ ಅದಕ್ಕೆ ಹಳ್ಳಿ ಜನರ ಕೊಡುಗೆ ದೊಡ್ಡದು. ಏಕೆಂದರೆ ಸೇನೆಯಲ್ಲಿರುವ ಬಹುಪಾಲು ಯೋಧರು ಹಳ್ಳಿಗಳಿಂದ ಬಂದವರಾಗಿದ್ದಾರೆ. ಜೈ ಜವಾನ್ ಜೈ ಕಿಸಾನ್ ಎಂಬ ಘೋಷವಾಕ್ಯದಂತೆ ರೈತಾಪಿ ಜನರು ಮಕ್ಕಳನ್ನು ಯಾವುದೇ ಭಯವಿಲ್ಲದೆ ಸೇನೆಗೆ ಸೇರಿಸಿ’ ಎಂದು ಹೇಳಿದರು.

‘ಜೀವನ ಕಲೆಯನ್ನು ಸೇನೆಗೆ ಸೇರಿದ ಯೋಧ ಮಾತ್ರ ಬಲ್ಲರು. ಕಠಿಣ ತರಬೇತಿಯಿಂದ ತನ್ನ ಪ್ರಾಣವನ್ನು ಉಳಿಸಿಕೊಳ್ಳುವ ಕಲೆಯ ಜತೆಗೆ ದೇಶದ ರಕ್ಷಕರಾಗಿ ಬದಲಾಗುತ್ತಾರೆ. ಸೈನಿಕರಿಗೆ ತಂದೆ–ತಾಯಿ ಬಳಗದ ಯೋಗಕ್ಷೇಮಕ್ಕಿಂತ ದೇಶದ ಯೋಗಕ್ಷೇಮವೇ ಮುಖ್ಯವಾಗಿರುತ್ತದೆ’ ಎಂದು ತಿಳಿಸಿದರು.

‘ದೇಶದಲ್ಲಿ ಪ್ರಸ್ತುತ ಭೂಸೇನೆಯಲ್ಲಿ 13.50 ಲಕ್ಷ, ವಾಯು ಮತ್ತು ನೌಕಾಸೇನೆಗಳಲ್ಲಿ 6.5 ಲಕ್ಷ ಹಾಗೂ ಗೃಹರಕ್ಷಕ ಪಡೆಗಳಲ್ಲಿ 8 ಲಕ್ಷ ಯೋಧರಿದ್ದಾರೆ. ನಾವು ಯಾವುದೇ ರೀತಿಯಲ್ಲೂ ಶತ್ರು ದೇಶಗಳಿಗೆ ಹೆದರುವ ಪ್ರಮೇಯವಿಲ್ಲ. 24 ಗಂಟೆಗಳಲ್ಲಿ ಶತ್ರು ದೇಶವನ್ನು ನಾಶಪಡಿಸುವ ಶಕ್ತಿ ನಮ್ಮ ಸೇನೆಗಿದೆ’ ಎಂದರು.

‘ಮೈನಸ್ 26 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ನಮ್ಮ ಸೈನಿಕರು ದೇಶದ ಗಡಿ ಕಾಯುತ್ತಿದ್ದಾರೆ. ಆದ್ದರಿಂದ ಅವರನ್ನು ತಾತ್ಸಾರ ಮನೋಭಾವದಿಂದ ನೋಡಬೇಡಿ. ಪ್ರತಿ ಹಳ್ಳಿಯಲ್ಲಿ ಮಕ್ಕಳನ್ನು ಸೇನೆಗೆ ಸೇರುವಂತೆ ಪ್ರೋತ್ಸಾಹಿಸಿ’ ಎಂದು ಹೇಳಿದರು.

ಯೋಧ ಜಯರಾಂ ಮಾತನಾಡಿ, ‘ಇಂದು ನಮ್ಮದೇ ದೇಶದಲ್ಲಿ ಶತ್ರು ರಾಷ್ಟ್ರದ ಧ್ವಜವನ್ನು ಹಾರಿಸಿದವರಿಗೆ ಶಿಕ್ಷೆ ಇಲ್ಲ. ಆದರೆ ಭಾರತ ಮಾತೆಗೆ ಜೈ ಎಂದು ಘೋಷಣೆ ಕೂಗಿದರೆ ಅವರ ಮೇಲೆ ಮೊಕದ್ದಮೆ ದಾಖಲಿಸಿ ಜೈಲಿಗೆ ಅಟ್ಟುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ ನಾವು ಭಾರತ ಮಾತೆಗೆ ಜೈಕಾರ ಹಾಕಲು ಯಾರದೇ ಅನುಮತಿ ಬೇಕಿಲ್ಲ, ಧೈರ್ಯದಿಂದಿರಿ, ನಮ್ಮ ಯೋಧರು ನಿಮ್ಮ ರಕ್ಷಣೆಗೆ ಇದ್ದಾರೆ’ ಎಂದು ತಿಳಿಸಿದರು.

ಯೋಧರಾದ ಬಸಣ್ಣ, ಆನಂದರಾಜ್, ಭೈರರೆಡ್ಡಿ, ಜಗನ್ ರೆಡ್ಡಿ, ಚಂದ್ರು, ವೆಂಕಟೇಶ್, ರವಿ, ಅಶ್ವತ್ಥನಾರಾಯಣ, ವೆಂಕಟರಮಣ, ರವೀಂದ್ರ, ಮುನಿಕೃಷ್ಣ, ಶ್ರೀನಿವಾಸ್, ಚಂದ್ರಶೇಖರ್, ನರಸಿಂಹಮೂರ್ತಿ, ಯೋಧ ಪೋತಲರೆಡ್ಡಿ ಪತ್ನಿ ಸುಮಿತ್ರಾ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಟೀಮ್ ಯೋಧ ನಮನ ಅಧ್ಯಕ್ಷ ವೆಂಕಟೇಗೌಡ,ಉಪಾಧ್ಯಕ್ಷ ಅಂಬರೀಷ್, ಬಚ್ಚೇನಹಳ್ಳಿ ಗ್ರಾಮಸ್ಥರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು