ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು ವಿಧಾನಸಭಾ ಕ್ಷೇತ್ರ: ಶಿವಶಂಕರರೆಡ್ಡಿ ಓಟಕ್ಕೆ ಬೀಳುವುದೇ ತಡೆ?

ಕ್ಷೇತ್ರದಲ್ಲಿ ಎರಡೂವರೆ ದಶಕಗಳಿಂದ ಕಾಂಗ್ರೆಸ್‌ ಗೆಲುವು
Last Updated 26 ಜನವರಿ 2023, 5:20 IST
ಅಕ್ಷರ ಗಾತ್ರ

ಗೌರಿಬಿದನೂರು: ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ 1999ರ ಚುನಾವಣೆಯಿಂದ 2018ರ ಚುನಾವಣೆಯವರೆಗೂ ಸತತ ಐದು ಬಾರಿ ಗೆಲುವಿನ ನಗೆ ಬೀರಿದ್ದಾರೆ ಕಾಂಗ್ರೆಸ್‌ನ ಎನ್.ಎಚ್.ಶಿವಶಂಕರರೆಡ್ಡಿ.

ಈ ಬಾರಿ ಮತ್ತೆ ಅವರೇ ಕಾಂಗ್ರೆಸ್‌ನಿಂದ ಅಖಾಡಕ್ಕೆ ಇಳಿಯುವರು. ಸತತ ಎರಡೂವರೆ ದಶಕಗಳಿಂದ ಶಿವಶಂಕರ ರೆಡ್ಡಿ ಅವರ ಗೆಲುವಿನ ಓಟಕ್ಕೆ ತಡೆ ಬಿದ್ದಿಲ್ಲ. 2023ರಲ್ಲಿಯೂ ರೆಡ್ಡಿ ಅವರ ಓಟ ಮುಂದುವರಿಯುವುದೇ ಅಥವಾ ತಡೆ ಬೀಳುವುದೇ ಎನ್ನುವ ಕುತೂಹಲ, ಚರ್ಚೆಯುಳ್ಳ ಕ್ಷೇತ್ರ ಗೌರಿಬಿದನೂರು. ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರ ಕೋಟೆ. ಮತ್ತೊಂದು ಕಡೆ ಗೌರಿಬಿದನೂರು ಕ್ಷೇತ್ರದಲ್ಲಿ ಈ ಹಿಂದಿನ ಚುನಾವಣೆಗಳನ್ನು ನೋಡಿದರೆ ಇಲ್ಲಿ ಪಕ್ಷೇತರ ಅಭ್ಯರ್ಥಿಗಳು ಶಿವಶಂಕರ ರೆಡ್ಡಿ ಅವರಿಗೆ ಸಮರ್ಥ ಸ್ಪರ್ಧೆಯೊಡ್ಡಿದ್ದಾರೆ.

2023ರ ಚುನಾವಣೆ ಹಿನ್ನೆಲೆಯಲ್ಲಿ ಶಿವಶಂಕರ ರೆಡ್ಡಿ ಓಡಾಟ ನಡೆಸಿದ್ದಾರೆ. ಮತ್ತೊಂದು ಕಡೆ ಶಿವಶಂಕರ ರೆಡ್ಡಿ ಅವರ ಜತೆ ಗುರುತಿಸಿಕೊಂಡಿದ್ದ ಕೆಲವು ಮುಖಂಡರು ಸಮಾಜ ಸೇವಕ ಹಾಗೂ ಉದ್ಯಮಿ ಕೆ.ಎಚ್‌.ಪುಟ್ಟಸ್ವಾಮಿ ಗೌಡ ಅವರನ್ನು ಹಿಂಬಾಲಿಸಿದ್ದಾರೆ.

ಚುನಾವಣೆಯ ಸ್ಪರ್ಧೆಯ ಕಾರಣದಿಂದಲೇ ಪುಟ್ಟಸ್ವಾಮಿ ಗೌಡರು ವರ್ಷಗಳಿಂದಲೇ ಕ್ಷೇತ್ರದಲ್ಲಿ ಕೊಡುಗೈ ದಾನಿ ಎನಿಸಿದ್ದಾರೆ. ಗೌರಿಬಿದನೂರು ನಗರಸಭೆಯಲ್ಲಿ ತಮ್ಮ ಬೆಂಬಲಿಗರಿಗೆ ಅಧಿಕಾರ ದೊರಕಿಸಿಕೊಟ್ಟಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲಿ ದೊಡ್ಡ ಮಟ್ಟದಲ್ಲಿಯೇ ಬೆಂಬಲಿಗ ಸದಸ್ಯರನ್ನು ಹೊಂದಿದ್ದಾರೆ. ಕ್ಷೇತ್ರದಲ್ಲಿ ಭರ್ಜರಿ ಹೂಡಿಕೆ ಸಹ ಮಾಡಿದ್ದಾರೆ.

2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಸಿ.ಆರ್.ನರಸಿಂಹಮೂರ್ತಿ 59,832 ಮತಗಳನ್ನು ಪಡೆಯುವ ಮೂಲಕ ಗೆಲುವಿನ ಸಮೀಪ ಧಾವಿಸಿ ಪರಾಜಿತಗೊಂಡಿದ್ದರು. 2023ರ ಚುನಾವಣೆಯಲ್ಲಿಯೂ ಅವರೇ ಜೆಡಿಎಸ್ ಅಭ್ಯರ್ಥಿ. ಕಳೆದ ಬಾರಿಯಂತೆ ಈ ಬಾರಿಯೂ ಅವರು ಹುಮ್ಮಸ್ಸಿನಿಂದ ಸಂಘಟನೆಯಲ್ಲಿ ತೊಡಗಿದ್ದಾರೆ.

2008 ಮತ್ತು 2013ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎನ್.ಎಂ.ರವಿನಾರಾಯಣರೆಡ್ಡಿ ಈಗ ದ್ರಾಕ್ಷಾ ಮಂಡಳಿ ಅಧ್ಯಕ್ಷರಾಗಿದ್ದಾರೆ. ಮಾನಸ ಆಸ್ಪತ್ರೆಗಳ ಮುಖ್ಯಸ್ಥ ಡಾ.ಎಚ್.ಎಸ್.ಶಶಿಧರ್ ಅವರಿಗೆ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿ ಅವರ ಪರವಾಗಿ ಓಡಾಡುತ್ತಿದ್ದಾರೆ. ಬಿಜೆಪಿ ಟಿಕೆಟ್ ಯಾರಿಗೆ ಎನ್ನುವುದು ಇನ್ನೂ ಘೋಷಣೆ ಆಗಿಲ್ಲ. ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಒಳ್ಳೆಯ ಮತಗಳನ್ನು ಪಡೆದ ಕ್ಷೇತ್ರಗಳಲ್ಲಿ ಗೌರಿಬಿದನೂರು ಪ್ರಮುಖವಾಗಿದೆ.

ಕ್ಷೇತ್ರದ ಕೈ ಪಾಳಯದಲ್ಲಿನ ಪ್ರಮುಖ ಮುಖಂಡರಾದ ಎಚ್.ವಿ.ಮಂಜುನಾಥ್, ಜೆ.ಕಾಂತರಾಜು, ಪಿ.ವಿ.ರಾಘವೇಂದ್ರ ಹನುಮಾನ್, ಎಂ.ನರಸಿಂಹಮೂರ್ತಿ, ಅಬ್ದುಲ್ಲಾ, ಜಿ.ಕೆ.ಸತೀಶ್, ಕೆ.ಎನ್.ವೆಂಕಟರಾಮರೆಡ್ಡಿ ಸೇರಿದಂತೆ ದಶಕಗಳ ಕಾಲ ಕಾಂಗ್ರೆಸ್ ಪಕ್ಷ ನಿಷ್ಠರು ಎನಿಸಿದ್ದವರು 2018ರ ಚುನಾವಣೆಯ ಬಳಿಕ ಶಾಸಕರ ವಿರುದ್ಧ ಮುನಿಸಿಕೊಂಡು ಕೆ.ಎಚ್‌.ಪುಟ್ಟಸ್ವಾಮಿ ಗೌಡರ ಬಣ ಸೇರಿದ್ದಾರೆ.

ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಅವರ ಬೀಗರಾದ ಹಾಗೂ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ಅವರ ಮಾವ ಪುಟ್ಟಸ್ವಾಮಿ ಗೌಡ ಮೂರು ಪಕ್ಷಗಳ ರಾಜ್ಯ ನಾಯಕರ ಜತೆ ಉತ್ತಮ ಸ್ನೇಹ ಹೊಂದಿದ್ದಾರೆ. ಗೌಡರು ಕ್ಷೇತ್ರದಲ್ಲಿ ಪಕ್ಷೇತರರಾಗಿಯೇ ಕಣಕ್ಕಿಳಿಯುವುದಾಗಿ ಪ್ರಕಟಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ವರಿಷ್ಠರು ಗೌಡರನ್ನು ಪಕ್ಷ ಸೇರುವಂತೆ ಆಹ್ವಾನಿಸಿದ್ದರೂ ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ.

ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತದಾರರು ಹೆಚ್ಚಾಗಿದ್ದಾರೆ. ಹಿಂದೂ ಸಾದರು, ಒಕ್ಕಲಿಗರು, ಕುರುಬ ಸಮುದಾಯದ ಮತಗಳು ಪ್ರಮುಖವಾಗಿವೆ. 2023ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕೈ ಪಾಳಯಕ್ಕೆ ಅಧಿಕಾರ ತಪ್ಪಿಸಲು ಅತೃಪ್ತ ನಾಯಕರು ಮತ್ತು ಶಾಸಕರ ವಿರೋಧಿ ಬಣವು ಗೌಡರ ಬೆನ್ನಿಗೆ ನಿಂತಿದೆ.

ಪ್ರತಿ ಚುನಾವಣೆಯ ‘ಅಂತಿಮ ಆಟ’ದಲ್ಲಿ ಸಮರ್ಥ ಪಟ್ಟುಗಳನ್ನು ಹಾಕುವುದನ್ನು ಕರಗತ ಮಾಡಿಕೊಂಡಿರುವ ಹಿರಿಯ ರಾಜಕಾರಣಿ ಶಿವಶಂಕರರೆಡ್ಡಿ ಅವರು ಈ ಬಾರಿ ಎದುರಾಳಿಗಳ ವಿರುದ್ಧ ಯಾವ ಪಟ್ಟುಗಳನ್ನು ಬಳಸುತ್ತಾರೆ ಎನ್ನುವ ಕುತೂಹಲ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಇದೆ.

ಗೌಡರಿಗೆ ದೊಡ್ಡ ಪಡೆ ಕಾಯ್ದುಕೊಳ್ಳುವ ಸವಾಲು
ಕೆ.ಎಚ್.ಪುಟ್ಟಸ್ವಾಮಿಗೌಡ 4 ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಲ್ಲಿನ ಅತೃಪ್ತ ನಾಯಕರಿಗೆ ಆಸರೆಯಾಗಿದ್ದಾರೆ. ನಿರಂತರವಾಗಿ ಮುಖಂಡರು ‌ಮತ್ತು ಕಾರ್ಯಕರ್ತರನ್ನು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಳ್ಳುವ ತಂತ್ರಗಾರಿಕೆ ಮಾಡುತ್ತಿದ್ದಾರೆ. ದಿನೇ ದಿನೇ ಗೌಡರ ಸುತ್ತ ಮುಖಂಡರ ಮತ್ತು ಕಾರ್ಯಕರ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ ಆರಂಭದಲ್ಲಿ ಸೇರ್ಪಡೆಗೊಂಡಿರುವ ಕೆಲವು ಮುಖಂಡರು ‌ಮತ್ತು ಕಾರ್ಯಕರ್ತರು ಅತೃಪ್ತಗೊಂಡು ಈಗ ಅಲ್ಲಿಂದ ಹೆಜ್ಜೆ ಹೊರಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT