ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರದಲ್ಲಿ ಮಹಿಳೆಯರ ಮತಕ್ಕಾಗಿ ಸರ್ಕಸ್ : ಸ್ಟೌ, ಮಿಕ್ಸಿ ಹಂಚಿಕೆ

ಜಿಲ್ಲೆಯಲ್ಲಿ ಹೆಚ್ಚಿದ್ದಾರೆ ಮಹಿಳಾ ಮತದಾರರು; ಹೆಣ್ಣು ಮಕ್ಕಳಿಗೆ ಸ್ಟೌ, ಮಿಕ್ಸಿ, ಕುಕ್ಕರ್, ಸೀರೆ;
Last Updated 6 ಫೆಬ್ರುವರಿ 2023, 8:52 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಮಹಿಳೆಯರ ಮತಗಳ ಮೇಲೆ ಕಣ್ಣಿಟ್ಟಿರುವ ರಾಜಕೀಯ ‍ಪಕ್ಷಗಳು ಮಹಿಳೆಯರ ಮತಬೇಟೆಗಾಗಿ ಕಾರ್ಯಾಚರಣೆ ನಡೆಸಿವೆ. ಕುಕ್ಕರ್, ಸ್ಟೌ, ಫ್ಯಾನ್, ಸೀರೆ ವಿತರಣೆ, ಓಂಶಕ್ತಿ ಶಕ್ತಿ, ಧರ್ಮಸ್ಥಳ ಪ್ರವಾಸಕ್ಕೆ ಕರೆದೊಯ್ಯುವುದು ಇದರ ಭಾಗವಾಗಿವೆ.

2018ರ ಮತ್ತು 2023ರ ಮತದಾರರ ಪಟ್ಟಿಯನ್ನು ತುಲನೆ ಮಾಡಿದರೆ ಜಿಲ್ಲೆಯಲ್ಲಿ 18,993 ಮಹಿಳಾ ಮತದಾರರು ಈ ಬಾರಿ ಹೆಚ್ಚಿದ್ದಾರೆ. ಪುರುಷರಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಮಹಿಳಾ ಮತದಾರರದ್ದೇ ಪ್ರಾಬಲ್ಯ. ಐದೂ ವಿಧಾನಸಭಾ ಕ್ಷೇತ್ರದಲ್ಲಿ 5,08,550 ಪುರುಷ ಮತದಾರರು, 5,17,098 ಮಹಿಳಾ ಮತದಾರರು ಇದ್ದಾರೆ. ಈ ಎಲ್ಲ ದೃಷ್ಟಿಯಿಂದ ಮಹಿಳಾ ಮತದಾರರ ಮನ ಗೆಲ್ಲುವುದು ಎಲ್ಲ ಪಕ್ಷಗಳಿಗೂ ಪ್ರಮುಖವಾಗಿದೆ. ಸ್ಪರ್ಧೆಗೆ ಟಿಕೆಟ್ ಘೋಷಣೆ ಆಗಿರುವವರು ಮತ್ತು ಆಕಾಂಕ್ಷಿಗಳು ಮಹಿಳಾ ಮತದಾರರ ಮೇಲೆ ದೃಷ್ಟಿ ನೆಟ್ಟಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಮನೆಯ ಯಜಮಾನಿಗೆ ₹ 2 ಸಾವಿರ ನೀಡಲಾಗುವುದು ಎಂದು ಘೋಷಿಸಿದೆ. ಇದೇ ವಿಷಯವನ್ನು ಪ್ರಮುಖವಾಗಿ ಇಟ್ಟುಕೊಂಡು ಸ್ಥಳೀಯವಾಗಿ ಕಾಂಗ್ರೆಸ್ ನಾಯಕರು ಮತ ಕೇಳುತ್ತಿದ್ದಾರೆ. ಮತ್ತೊಂದು ಕಡೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ‌ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಎಚ್‌.ಡಿ.ಕುಮಾರಸ್ವಾಮಿ ಪ್ರಕಟಿಸಿದ್ದಾರೆ. ಜೆಡಿಎಸ್ ನಾಯಕರು ಮತಕೇಳುವ ಸಮಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ. ಬಿಜೆಪಿ ಸ್ತ್ರೀಸಾಮರ್ಥ್ಯ ಯೋಜನೆಯ ವಿಷಯಗಳ ಬಗ್ಗೆ ಹೇಳುತ್ತಿದೆ.

ತಮ್ಮ ‍ಪಕ್ಷವು ಮಹಿಳೆಯರಿಗೆ ರೂಪಿಸಿದ್ದ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಮತ್ತು ಮುಂದಿನ ದಿನಗಳಲ್ಲಿ ಘೋಷಿಸಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮಹಿಳಾ ಮತದಾರರ ಮನ ಗೆಲ್ಲಲು ಮುಂದಾಗಿವೆ. ಇದಕ್ಕಾಗಿ ಸಮಾವೇಶಗಳನ್ನೂ ನಡೆಸುತ್ತಿವೆ.

ಸಾಲ ವಿತರಣೆ, ಸಮಾವೇಶ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಡಾ.ಕೆ.ಸುಧಾಕರ್ ಮಹಿಳಾ ಮತದಾರರ ಮನಗೆಲ್ಲಲು ದೊಡ್ಡ ಮಟ್ಟದಲ್ಲಿಯೇ ಕಸರತ್ತು ನಡೆಸಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ‘ಚಿಕ್ಕಬಳ್ಳಾಪುರ ಉತ್ಸವ’ ನಡೆಯಿತು. ಈ ಭಾಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ 55 ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಿದ್ದರು. ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಡಾ.ಕೆ.ಸುಧಾಕರ್ ಫೌಂಡೇಶನ್‌ನಿಂದ ಸ್ಟೌಗಳನ್ನು ವಿತರಿಸಲಾಗುತ್ತಿದೆ. ಸ್ಥಳೀಯ ಬಿಜೆಪಿ ಮುಖಂಡರು ಮನೆ ಮನೆಗೆ ತೆರಳಿ ಸ್ಟೌ ನೀಡುತ್ತಿದ್ದಾರೆ. ಹೀಗೆ ಸ್ಟೌ ಪಡೆದವರು ತಮ್ಮ ಬೆಂಬಲಕ್ಕೆ ನಿಲ್ಲುವರು ಎನ್ನುವ ವಿಶ್ವಾಸ ಬಿಜೆಪಿಯಲ್ಲಿದೆ. ಮತ್ತೊಂದು ಕಡೆ ಓಂಶಕ್ತಿ ಪ್ರವಾಸಕ್ಕೂ ಮಹಿಳೆಯರನ್ನು ಕರೆದೊಯ್ಯಲಾಗುತ್ತಿದೆ.

ಅಲ್ಲದೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲ ವಿತರಣೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಸರ್ಕಾರಿ ಕಾರ್ಯಕ್ರಮಗಳು ಮಹಿಳಾ ಮತದಾರರನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸುವ ಕಾರ್ಯಕ್ರಮಗಳಾಗಿವೆ. ಸಾಲದ ಜತೆಗೆ ಸೀರೆ ಉಚಿತ. ಇತ್ತೀಚೆಗೆ ನಗರದಲ್ಲಿ ಸ್ತ್ರೀ ಶಕ್ತಿ ಸಮಾವೇಶವನ್ನೂ ಸಚಿವರು ನಡೆಸಿದ್ದರು.

ಈ ರಂಗೋಲಿ ಸ್ಪರ್ಧೆ, ಸ್ಟೌ ವಿತರಣೆಗೆ ಪ್ರತಿ ತಂತ್ರ ಎನ್ನುವಂತೆ ಜೆಡಿಎಸ್ ನಾಯಕರು ಕುಟುಂಬ ಸಮಾವೇಶ ನಡೆಸಿದ್ದರು. ಇಲ್ಲಿಯೂ ಮಹಿಳಾ ಮತದಾರರೇ ಪ್ರಮುಖ ಗುರಿಯಾಗಿದ್ದರು. ಇನ್ನೂ ಅಭ್ಯರ್ಥಿಯ ಗೊಂದಲವಿರುವ ಕಾಂಗ್ರೆಸ್‌ನಲ್ಲಿ ಮಹಿಳಾ ಮತದಾರರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಮಾವೇಶಗಳೇನು ನಡೆದಿಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಯಜಮಾನಿಗೆ ₹ 2 ಸಾವಿರ ನೀಡುವುದಾಗಿ ರಾಜ್ಯ ನಾಯಕರು ಪ್ರಕಟಿಸಿರುವುದನ್ನೇ ಸ್ಥಳೀಯವಾಗಿ ಮಹಿಳೆಯರಿಗೆ ತಿಳಿಸಲಾಗುತ್ತಿದೆ.

ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಕೆ.ಎಚ್‌.ಪಿ ಫೌಂಡೇಶನ್‌ನ ಪುಟ್ಟಸ್ವಾಮಿ ಗೌಡ ಅವರು ಗೌರಿ ಬಾಗಿನದ ಹೆಸರಿನಲ್ಲಿ ಮಹಿಳೆಯರಿಗೆ ಸೀರೆಗಳನ್ನು ವಿತರಿಸಿದ್ದಾರೆ. ಹೊಲಿಗೆ ತರಬೇತಿ ನೀಡಿ ಹೊಲಿಗೆ ಯಂತ್ರಗಳನ್ನು ಕೊಟ್ಟಿದ್ದಾರೆ. ಇದೇ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆಂಪರಾಜು ಸಹ ರಂಗೋಲಿ ಸ್ಪರ್ಧೆ ನಡೆಸಿ ಫ್ಯಾನ್, ಕುಕ್ಕರ್ ವಿತರಿಸುತ್ತಿದ್ದಾರೆ. ‌ಗೌರಿಬಿದನೂರು ಕ್ಷೇತ್ರದಲ್ಲಿ ಮಹಿಳಾ ಮತದಾರರ ಮನಗೆಲ್ಲಲು ನಾಯಕರು ಕಸರತ್ತು ನಡೆಸಿದ್ದಾರೆ.

ಬಾಗೇಪಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ಸಿ.ಮುನಿರಾಜು ಈಗಾಗಲೇ ಸೀರೆ ವಿತರಿಸಿದ್ದಾರೆ. ಎಲ್ಲ ಪಕ್ಷಗಳ ನಾಯಕರು ಮಹಿಳೆಯರನ್ನು ಓಂಶಕ್ತಿ ಪ್ರವಾಸಕ್ಕೆ ಕಳುಹಿಸುತ್ತಿದ್ದಾರೆ. ಶಿಡ್ಲಘಟ್ಟ ಕ್ಷೇತ್ರದಲ್ಲಿಯೂ ಮಹಿಳೆಯರನ್ನು ಪ್ರವಾಸಕ್ಕೆ ಕಳುಹಿಸುವ ಕಾರ್ಯಕ್ರಮಗಳು ಜಾರಿಯಲ್ಲಿವೆ.

ದೇವಾಲಯಗಳಿಗೆ ಪ್ರವಾಸ ಕರೆದುಕೊಂಡು ಹೋದ ಸಮಯದಲ್ಲಿ ಮಹಿಳೆಯರಿಂದ ಆಣೆ ಪ್ರಮಾಣ ಸಹ ಮಾಡಿಸಿಕೊಳ್ಳಲಾಗುತ್ತಿದೆ. ಹೀಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಹಿಳಾ ಮತದಾರರನ್ನು ಗುರಿಯಾಗಿಸಿಕೊಂಡು ಆಸೆ ಆಮಿಷಗಳನ್ನು ವೊಡ್ಡಲಾಗುತ್ತಿದೆ. ಪ‍ತಿಯೊಂದ ಪಕ್ಷವಾದರೆ ಪತ್ನಿ ಮತ್ತೊಂದು ಪಕ್ಷ ಎನ್ನುವ ಮಟ್ಟಕ್ಕೆ ರಾಜಕೀಯ ಕುಟುಂಬಗಳನ್ನು ವಿಭಾಗಿಸಿದೆ ಎನ್ನುತ್ತಾರೆ ಪ್ರಜ್ಞಾವಂತರು.

***

ಪಟ್ಟಿಗೆ

ಕ್ಷೇತ್ರ;ಮಹಿಳಾ ಮತದಾರರ ಸಂಖ್ಯೆ

‌‌ಗೌರಿಬಿದನೂರು;;1,04,171
ಬಾಗೇಪಲ್ಲಿ99,131
ಚಿಕ್ಕಬಳ್ಳಾಪುರ;1,03,321
ಶಿಡ್ಲಘಟ್ಟ;99,386
ಚಿಂತಾಮಣಿ;1,11,086
ಒಟ್ಟು;5,17,098

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT