ಶುಕ್ರವಾರ, ಡಿಸೆಂಬರ್ 13, 2019
26 °C
ಸುಪ್ರೀಂ ಕೋರ್ಟ್‌ನ ತೀರ್ಪಿನ ಬೆನ್ನಲ್ಲೇ ಕೇಸರಿ ಪಾಳೆಯ ಸೇರಲು ಉತ್ಸುಕರಾದ ಅನರ್ಹ ಶಾಸಕ, ಗುರುವಾರ ಬಿಜೆಪಿ ಸೇರುವ ಸಾಧ್ಯತೆ

ಉಪಚುನಾವಣೆ: ಸುಧಾಕರ್ ಬಿಜೆಪಿಯಿಂದಲೇ ಸ್ಪರ್ಧೆ?

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

ನಗರದ ತುಂಬೆಲ್ಲ ಇತ್ತೀಚೆಗೆ ರಾರಾಜಿಸಿದ ಫ್ಲೆಕ್ಸ್‌ಗಳು

ಚಿಕ್ಕಬಳ್ಳಾಪುರ: ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಸುಪ್ರೀಂ ಕೋರ್ಟ್‌ನ ತೀರ್ಪಿನ ಬೆನ್ನಲ್ಲೇ, ನಿರಾಳಗೊಂಡಿರುವ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರು ಶೀಘ್ರದಲ್ಲಿಯೇ ಬಿಜೆಪಿ ಸೇರಿ, ಕೇಸರಿ ಪಾಳೆಯದಿಂದಲೇ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸಮ್ಮಿಶ್ರ ಸರ್ಕಾರದ ಆರಂಭದಿಂದಲೂ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರನ್ನು, ಸರ್ಕಾರವನ್ನು ಟೀಕಿಸುತ್ತಲೇ ಸುದ್ದಿಯಲ್ಲಿದ್ದ ಸುಧಾಕರ್ ಅವರು, ಕಳೆದ ಜುಲೈನಲ್ಲಿ ರಾಜ್ಯದಲ್ಲಿ ತಲೆದೋರಿಸುವ ರಾಜಕೀಯ ಅನಿಶ್ಚಿತತೆಯ ನಡುವೆ ಜುಲೈ 10 ರಂದು ವಿಧಾನಸಭೆಯಲ್ಲಿ ಸ್ಪೀಕರ್ ಅವರನ್ನು ಭೇಟಿ ಮಾಡಿದ ಶಾಸಕರು ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದಾರೆ ಎಂಬ ಆಪಾದನೆ ಮೇಲೆ ಅಂದಿನ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್, 17 ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಅನರ್ಹಗೊಳಿಸಿದ್ದರು. ಈ ಕ್ರಮ ಪ್ರಶ್ನಿಸಿ ಸುಧಾಕರ್ ಅವರು ಸೇರಿದಂತೆ ಅನರ್ಹರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.

ಇದನ್ನೂ ಓದಿ: 

ರಾಜೀನಾಮೆ ಬಳಿಕ ಕ್ಷೇತ್ರದತ್ತಲೇ ತಲೆ ಹಾಕದ ಸುಧಾಕರ್ ಅವರು, ಬಿಜೆಪಿಯ ‘ಆಪರೇಷನ್ ಕಮಲ’ದ ಸುಳಿಗೆ ಸಿಲುಕಿದ್ದಾರೆ, ಬಿಜೆಪಿ ಸೇರುತ್ತಾರೆ ಎಂಬ ವದಂತಿ ಹರಡಿತ್ತು. ಅದು ಅಂದಿನಿಂದಲೇ ಕ್ಷೇತ್ರದಲ್ಲಿ ಮನೆ ಮಾಡಿ, ದಿನೇ ದಿನೇ ದಟ್ಟವಾಗುತ್ತ ಬಂದಿತ್ತು. ಆ ವಿಚಾರವಾಗಿ ಮೌನ ಮುರಿಯದ ಸುಧಾಕರ್‌ ಅವರು ಒಂದೇ ಒಂದು ದಿನವೂ ಅದನ್ನು ತಳ್ಳಿ ಹಾಕುವ ಮಾತನಾಡಲಿಲ್ಲ.

ಕಳೆದ ಮೂರು ತಿಂಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರ ತೆರದಿ ಕ್ಷೇತ್ರ ಸುತ್ತಿ ಪ್ರಚಾರ ಮಾಡಿದ ಸುಧಾಕರ್ ಅವರು ಎಲ್ಲಿಯೂ ಅಪ್ಪಿತಪ್ಪಿಯೂ ಬಿಜೆಪಿ ಸೇರುವುದಾಗಲಿ, ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ ಎನ್ನುವಂತಹ ಒಂದೇ ಒಂದು ಹೇಳಿಕೆ ನೀಡಲಿಲ್ಲ. ಬದಲು, ಸಮ್ಮಿಶ್ರ ಸರ್ಕಾರದಲ್ಲಿನ ಅಸಹಕಾರಕ್ಕೆ ಬೇಸತ್ತು ರಾಜೀನಾಮೆ ಕೊಟ್ಟಿರುವೆ ಎನ್ನುತ್ತ ಬಂದಿದ್ದರು.

ಒಂದೊಮ್ಮೆ ಬಹಿರಂಗವಾಗಿಯೇ ಬಿಜೆಪಿ ಸೇರುವೆ ಎಂದು ಹೇಳಿದರೆ ಎಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅದು ತಮಗೆ ಉರುಳಾಗುವುದೋ ಎಂಬ ಭಯಕ್ಕೆ ಸುಧಾಕರ್ ಅವರು ಈ ಚಾಣಾಕ್ಷ ನಡೆ ಕಾಯ್ದುಕೊಂಡಿದ್ದರು ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರ ವಿಶ್ಲೇಷಣೆ.

ಇದನ್ನೂ ಓದಿ: ಬಿ ಫಾರಂ ಕೊಟ್ಟ ತಕ್ಷಣ ಅನರ್ಹ ಶಾಸಕರು ಬಿಜೆಪಿಗೆ: ಸಚಿವ ಜೆ.ಸಿ.ಮಾಧುಸ್ವಾಮಿ

ರಾಜ್ಯದಲ್ಲಿ ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನಗೊಂಡು, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಏಕಾಏಕಿ ಕ್ರಿಯಾಶೀಲವಾದ ಸುಧಾಕರ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಿ ಆದ್ಯತೆ ಮೆರೆಗೆ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಿಕೊಳ್ಳುವ ಜತೆಗೆ ಬಹುದಿನದ ಬೇಡಿಕೆಯಾಗಿದ್ದ ಮಂಚೇನಹಳ್ಳಿ ತಾಲ್ಲೂಕು ರಚನೆ ಮಾಡಿಸುವಲ್ಲೂ ಮೇಲುಗೈ ಸಾಧಿಸಿದ್ದರು.

ಇತ್ತೀಚೆಗೆ ನಗರದಲ್ಲಿ ಅದ್ಧೂರಿಯಾಗಿ ನಡೆದ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು ಬರೋಬರಿ ₹710 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ವೇದಿಕೆಯಲ್ಲಿಯೇ ತಮ್ಮ ಸಂಪುಟದ ಸಹದ್ಯೋಗಿಗಳ ಜತೆ ಹಾಡಿ ಹೊಗಳಿದಾಗಲೇ ಕ್ಷೇತ್ರದ ಮತದಾರರಿಗೆ ಸುಧಾಕರ್ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸಂದೇಶ ಸದ್ದಿಲ್ಲದೆ ರವಾನೆಯಾಗಿತ್ತು.

ಇದನ್ನೂ ಓದಿ: ಸುಪ್ರೀಂಕೋರ್ಟ್ ತೀರ್ಪು: ಅನರ್ಹರು ಹೀಗೆ ಹೇಳ್ತಾರೆ...

ಹೆಸರಿಗೆ ಅದೊಂದು ಶಂಕುಸ್ಥಾಪನೆ ಸಮಾರಂಭವಾಗಿದ್ದರೂ, ಸುಧಾಕರ್ ಅವರು ಪರೋಕ್ಷವಾಗಿ ಬಿಜೆಪಿ ಭಾಗವಾಗಿ ಪಾಲ್ಗೊಳ್ಳುವ ಕಾರ್ಯಕ್ರಮದಂತಿತ್ತು. ನಗರದ ತುಂಬೆಲ್ಲ ರಾರಾಜಿಸಿದ ಕೇಸರಿ ಬಣ್ಣದ ಫ್ಲೆಕ್ಸ್, ಬ್ಯಾನರ್‌ಗಳಲ್ಲಿ ಸುಧಾಕರ್ ಅವರ ಜತೆ ಕಂಡ ಬಿಜೆಪಿಯ ಅಧಿನಾಯಕರ ಚಿತ್ರಗಳು ಅನರ್ಹ ಶಾಸಕರ ಮುಂದಿನ ನಡೆ ಬಿಚ್ಚಿಟ್ಟಿದ್ದವು. ಇಷ್ಟಾದರೂ ಸುಧಾಕರ್ ಅವರು ಈವರೆಗೆ ಬಿಜೆಪಿ ಸೇರುವೆ ಎಂದು ಎಲ್ಲಿಯೂ ಹೇಳದಿರುವುದು ಸಾರ್ವಜನಿಕ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.

ಇದೀಗ ಸುಪ್ರೀಂ ತೀರ್ಪಿನಿಂದಾಗಿ ಆತಂಕ ದೂರವಾಗಿದ್ದು, ಬಿಜೆಪಿ ಸೇರುವ ನಿಟ್ಟಿನಲ್ಲಿ ಸುಧಾಕರ್ ಅವರು ಸಿದ್ಧರಾಗಿದ್ದು, ಗುರುವಾರ ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಶೀಘ್ರದಲ್ಲಿಯೇ ಬಿಜೆಪಿ ಹುರಿಯಾಳಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಸುಪ್ರೀಂಕೋರ್ಟ್‌ ತೀರ್ಪು: ಅನರ್ಹಗೊಳಿಸಿದ್ದು ಸರಿ, ಅವಧಿ ನಿರ್ಧರಿಸಿದ್ದು ತಪ್ಪು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು