ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್ ಪ್ರಯೋಗಶಾಲೆಯಾದ ಕರ್ನಾಟಕ: ಪಿಣರಾಯಿ ವಿಜಯನ್

ಸಿಪಿಎಂ ಸಮಾವೇಶದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಮತ
Last Updated 18 ಸೆಪ್ಟೆಂಬರ್ 2022, 15:27 IST
ಅಕ್ಷರ ಗಾತ್ರ

ಬಾಗೇಪಲ್ಲಿ: ‘ಕರ್ನಾಟಕವು ಆರ್‌ಎಸ್‌ಎಸ್‌ನ ಪ್ರಯೋಗಶಾಲೆ ಆಗಿದೆ. ರಾಜ್ಯದಲ್ಲಿ ಶಾಂತಿ, ಸೌಹಾರ್ದಕ್ಕೆ ಧಕ್ಕೆ ತರುವ ಕೆಲಸವನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ಮಾಡುತ್ತಿದೆ’ ಎಂದು ಕೇರಳ ಮುಖ್ಯಮಂತ್ರಿ ಪಿರಣರಾಯ್ ವಿಜಯ್ ದೂರಿದರು.

ಪಟ್ಟಣದಲ್ಲಿ ನಡೆದ ಸಿಪಿಎಂ ರಾಜಕೀಯ ಸಮಾವೇಶದಲ್ಲಿ ಅವರು ಮಾತನಾಡಿದರು.

ಆರ್‌ಎಸ್‌ಎಸ್ ಸ್ಥಾಪಕ ಬಲಿರಾಮ ಹೆಡಗೇವಾರ್‌ ಅವರ ಭಾಷಣವನ್ನು ಕರ್ನಾಟಕದಲ್ಲಿ ಪಠ್ಯ ಪುಸ್ತಕದಲ್ಲಿ ಸೇರಿಸಲಾಗಿದೆ. ನಾರಾಯಣಗುರು, ಪೆರಿಯಾರ್ ರಾಮಸ್ವಾಮಿ ಅವರ ವಿಚಾರಗಳನ್ನು ಅಪ್ರಸ್ತುತಗೊಳಿಸಲಾಗಿದೆ.ಪ್ರಗತಿಪರ ವಿಚಾರಗಳನ್ನು ಪಠ್ಯ ಪುಸ್ತಕಗಳಿಂದ ಹೊರಗಿಟ್ಟು ಕೇಸರೀಕರಣಗೊಳಿಸಲಾಗಿದೆ ಎಂದು ಹೇಳಿದರು.

ಮುಸ್ಲಿಮರ ವಿರುದ್ಧ ಅನಗತ್ಯವಾದ ಪದೇ ಪದೇ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ. ಲವ್ ಜಿಹಾದ್ ಸೇರಿದಂತೆ ಹಲವು ಸುಳ್ಳುಗಳು ಆರ್‌ಎಸ್‌ಎಸ್ ಕಾರ್ಖಾನೆಯಿಂದ ಉತ್ಪಾದನೆ ಆಗುತ್ತಲೇ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋಮುವಾದಿ, ಜಾತಿವಾದಿಗಳಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಸ್ಥಾನ ಇರಲಿಲ್ಲ. ಆದರೆ ಈಗ ಸ್ವಾತಂತ್ರ್ಯದ ಚರಿತ್ರೆಯನ್ನು ಬುಡಮೇಲು ಮಾಡುವ ಕೆಲಸವನ್ನು ಆರ್‌ಎಸ್‌ಎಸ್ ಮಾಡುತ್ತಿದೆ ಎಂದು ದೂರಿದರು.

ದಲಿತರು, ಆದಿವಾಸಿಗಳು, ಮಹಿಳೆಯರು, ಅಲ್ಪಸಂಖ್ಯಾತರು ಭಯಮುಕ್ತವಾಗಿ ಬದುಕು ಸಾಧ್ಯವಾಗುತ್ತಿಲ್ಲ. ಆರ್‌ಎಸ್‌ಎಸ್ ವಿರುದ್ಧ ಹೋರಾಡುತ್ತಿರುವವರು ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರಗತಿಪರರನ್ನು, ಹೋರಾಟಗಾರರನ್ನು ಬಂಧಿಸಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ. ಬಿಜೆಪಿಯವರದ್ದು ಕಪಟ ರಾಷ್ಟ್ರಪ್ರೇಮ ಎಂದು ಹೇಳಿದರು.

1986ರಲ್ಲಿ ಕೋಲಾರದಲ್ಲಿ ಸಿಪಿಎಂ ಶಾಸಕರು ಇದ್ದರು. ಬಾಗೇಪಲ್ಲಿಯಲ್ಲಿಯೂ ಪಕ್ಷದ ಶಾಸಕರು ಆಯ್ಕೆ ಆಗಿದ್ದರು. ಈಗ ಬಾಗೇಪಲ್ಲಿ ಕ್ಷೇತ್ರದ ಮೂರು ಗ್ರಾಮ ಪಂಚಾಯಿತಿಗಳಲ್ಲಿ ಸಿಪಿಎಂ ಅಧಿಕಾರವಿದೆ. ಎರಡು ಪಂಚಾಯಿತಿಗಳಲ್ಲಿ ಜಾತ್ಯತೀತ ಪಕ್ಷಗಳ ಜತೆ ಅಧಿಕಾರವನ್ನು ಪಡೆದಿದೆ. ಮುಂದಿನ ದಿನಗಳಲ್ಲಿ ಪಕ್ಷವು ಮತ್ತಷ್ಟು ಬೆಳವಣಿಗೆ ಕಾಣಬೇಕು ಎಂದರು.

ದೇಶದಲ್ಲಿ ಕಾಂಗ್ರೆಸ್ ಪಕ್ಷವು ಖಾಸಗೀಕರಣ ಮತ್ತು ನವಉದಾರೀಕರಣ ಜಾರಿಗೊಳಿಸಿತು. ಅದನ್ನು ಶರವೇಗದಲ್ಲಿ ಬಿಜೆಪಿ ಜಾರಿಗೊಳಿಸುತ್ತಿದೆ. ಬಂಡವಾಶಾಹಿಗಳ ಪರವಾಗಿ ಬಿಜೆಪಿ ಆಡಳಿತ ನೀತಿಗಳು ಇವೆ ಎಂದು ಟೀಕಿಸಿದರು.

ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಸೌಹಾರ್ದಕ್ಕೆ ಧಕ್ಕೆ ಬರುತ್ತಿದೆ. ರಾಜ್ಯದಲ್ಲಿಕೋಮುಗಲಭೆಗೆ ಮೃತಪಟ್ಟ ಹಿಂದೂಗಳ ಮನೆಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಪರಿಹಾರಧನ ನೀಡಿದರು. ಆದರೆ ಕೋಮುಗಲಭೆಯಿಂದ ಮೃತರಾದ ಮುಸ್ಲಿಮರ ಮನೆಗಳಿಗೆ ಮುಖ್ಯಮಂತ್ರಿ ಭೇಟಿಯನ್ನೇ ನೀಡಿಲ್ಲ. ಮುಖ್ಯಮಂತ್ರಿಯೇ ಈ ರೀತಿ ತಾರತಮ್ಯ ಮಾಡಿದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಜನರ ರಕ್ಷಣೆಗೆ ನಿಲ್ಲುತ್ತಿಲ್ಲ. ರೈತರು, ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಹಕ್ಕುಗಳನ್ನು ರಕ್ಷಿಸಬೇಕಾಗಿದೆ. ಇದಕ್ಕಾಗಿ ಸಿಪಿಎಂ ಗೆಲುವು ಅಗತ್ಯ ಎಂದು ಪ್ರತಿಪಾದಿಸಿದರು.

ಮುಖಂಡ ಡಾ.ಅನಿಲ್ ಕುಮಾರ್ ಆವುಲಪ್ಪ ಮಾತನಾಡಿ, ಬಾಗೇಪಲ್ಲಿಯಲ್ಲಿ 60 ವರ್ಷಗಳಿಂದ ಕೆಂಬಾವುಟವನ್ನು ಕಷ್ಟಪಟ್ಟು ಬೆಳೆಸಿದ್ದೀರಿ. ಈ ಸಮಾವೇಶದ ಮೂಲಕ ಪರ್ಯಾಯ ರಾಜಕಾರಣ ಸೃಷಿಯಾಗಬೇಕು ಎಂದು ಆಶಿಸಿದರು.

ಸಿಪಿಎಂ ಪಾಲಿಟಿ ಬ್ಯೂರೊ ಸದಸ್ಯರಾದ ಬಿ.ವಿ.ರಾಘವುಲು, ಎಂ.ಎ.ಬೇಬಿ,ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಜಿ.ಸಿ.ಬೈಯ್ಯಾರೆಡ್ಡಿ,ಕೆ.ನೀಳಾ, ಎಸ್.ವರಲಕ್ಷ್ಮಿ, ಯಾದವ ಶೆಟ್ಟಿ, ವಿ.ಜಿ.ಕೆ.ನಾಯರ್, ಜಿ.ಎನ್.ನಾಗರಾಜ್, ಕೆ.ಪ್ರಕಾಶ್, ಸೈಯದ್ ಮುಜೀಬ್, ಜಯರಾಮರೆಡ್ಡಿ, ಮಂಜುನಾಥರೆಡ್ಡಿ, ರಘುರಾಮರೆಡ್ಡಿ, ನಿತ್ಯಾನಂದ ಸ್ವಾಮಿ ಮತ್ತಿತರರು ವೇದಿಕೆಯಲ್ಲಿ ಇದ್ದರು.

**

ಶ್ರೀರಾಮರೆಡ್ಡಿ ಹೆಸರು; ಜೋರು ಶಿಳ್ಳೆ

ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ತಮ್ಮ ಭಾಷಣದಲ್ಲಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರ ಹೆಸರು ಪ್ರಸ್ತಾಪಿಸಿದರು. ಆಗ ನೆರೆದಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು ಶ್ರೀರಾಮರೆಡ್ಡಿ ಅವರ ಘೋಷಣೆಗಳನ್ನು ಕೂಗಿ ಶಿಳ್ಳೆ ಹಾಕಿದರು.

‘ವಿಧಾನಸಭೆಯಲ್ಲಿ ಜನರ ಪರವಾಗಿ ಧ್ವನಿ ಎತ್ತುವ ಶಾಸಕರು ಇಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಸಿಪಿಎಂ ಅಭ್ಯರ್ಥಿಯನ್ನು ಗೆಲ್ಲಿಸಿ’ ಎಂದು ಬಸವರಾಜು ಕೋರಿದರು.

***

ಸುಡುವ ಬಿಸಿಲಿನಲ್ಲಿ ಭಾಷಣ ಕೇಳಿದ ಕಾರ್ಯಕರ್ತರು

ಪಟ್ಟಣದ ಗೂಳೂರು ವೃತ್ತದಿಂದ ಬೆಳಿಗ್ಗೆ 11.30ರ ವೇಳೆಗೆ ಪಕ್ಷದ ಕಾರ್ಯಕರ್ತರ ರ‍್ಯಾಲಿ ಆರಂಭವಾಯಿತು. ವೇದಿಕೆಗೆ ಪಿಣರಾಯ್ ವಿಜಯನ್ ಬರುವ ವೇಳೆಗೆ ಮಧ್ಯಾಹ್ನ 1 ಗಂಟೆ ಆಗಿತ್ತು. ಬಿಸಿಲು ತೀವ್ರವಾಗಿತ್ತು. ಭಾಷಣಕ್ಕೆ ನಿಂತರ ಪಿಣರಾಯ್ ವಿಜಯನ್ ಸುದೀರ್ಘವಾಗಿ ಒಂದೂಕಾಲು ಗಂಟೆಗೂ ಮೀರಿ ಮಾತನಾಡಿದರು. ಅವರು ಮಲೆಯಾಳಂನಲ್ಲಿ ಮಾಡಿದ ಭಾಷಣವನ್ನು ಮಂಜೇಶ್ವರದ ಶ್ಯಾಂ ಭಟ್ ಕನ್ನಡಕ್ಕೆ ತರ್ಜುಮೆ ಮಾಡಿದರು.

ಬಿಸಿಲು ಹೆಚ್ಚುತ್ತಿದ್ದರೂ ಕಾರ್ಯಕರ್ತರು ಮಾತ್ರ ಕದಲಲಿಲ್ಲ. ‘ಸುಡು ಬಿಸಿಲಿನಲ್ಲಿಯೂ ಬಹಳ ಹೊತ್ತು ಭಾಷಣ ಕೇಳಿದ್ದೀರಿ’ ಎಂದು ಪಿಣರಾಯ್ ವಿಜಯನ್ ತಮ್ಮ ಭಾಷಣದಲ್ಲಿ ಕಾರ್ಯಕರ್ತರನ್ನು ಪ್ರಶಂಸಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT