ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗೇಪಲ್ಲಿ | ಕೈ ಕೊಟ್ಟ ಮಳೆ: ಬಾಡಿದ ಬೆಳೆ

Published : 23 ಸೆಪ್ಟೆಂಬರ್ 2024, 6:24 IST
Last Updated : 23 ಸೆಪ್ಟೆಂಬರ್ 2024, 6:24 IST
ಫಾಲೋ ಮಾಡಿ
Comments

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಮಳೆ ಕೈ ಕೊಟ್ಟಿರುವ ಕಾರಣ ಮುಸುಕಿನ ಜೋಳ, ನೆಲಗಡಲೆ, ರಾಗಿ, ಭತ್ತ ಸೇರಿದಂತೆ ಕೃಷಿ ಹಾಗೂ ತರಕಾರಿ ಬೆಳೆ ಒಣಗಿವೆ.

ತಾಲ್ಲೂಕಿನಲ್ಲಿ ಇದೀಗ ರೈತರು ಹೊಲ ಗದ್ದೆಗಳಲ್ಲಿ ಬಿತ್ತನೆ ಮಾಡಿದ ಕೃಷಿ ಹಾಗೂ ತರಕಾರಿಗಳು ಒಣಗಿ ಬೆಂಡಾಗಿವೆ. ತಾಲ್ಲೂಕಿನಲ್ಲಿ ಜೂನ್ ತಿಂಗಳಿನಲ್ಲಿ ಮಳೆ ಆಗಿತ್ತು. ರೈತರು ಹೊಲ ಗದ್ದೆಗಳಲ್ಲಿ ನೆಲಗಡಲೆ, ಮುಸುಕಿನಜೋಳ, ರಾಗಿ, ಭತ್ತ, ಹುರುಳಿ ಸೇರಿದಂತೆ ಕೃಷಿ ಬೆಳೆಗಳ ಬಿತ್ತನೆ ಬೀಜ ಹಾಕಿದ್ದಾರೆ. ನಂತರ ಜುಲೈ, ಆಗಸ್ಟ್ ತಿಂಗಳಲ್ಲಿ ಮಳೆ ಕೈ ಕೊಟ್ಟಿರುವುದರಿಂದ ಬಿತ್ತನೆ ಮಾಡಿದ ಬೆಳೆಗೆ ನೀರು ಸಿಗದೇ ಇದೀಗ ಒಣಗಿದೆ.

ತಾಲ್ಲೂಕಿನಲ್ಲಿ ಸೆಪ್ಟೆಂಬರ್ 22ರ ಅಂಕಿ ಅಂಶಗಳಂತೆ 391 ಮಿ.ಮೀ ಸಾಮಾನ್ಯ ಮಳೆ ಆಗಿದೆ. ಆದರೆ ವಾಸ್ತವವಾಗಿ 464 ಮಿ.ಮೀ ಮಳೆ ಆಗಬೇಕಾಗಿತ್ತು.

ತಾಲ್ಲೂಕಿನ ಪರಗೋಡು ಚಿತ್ರಾವತಿ ಬ್ಯಾರೇಜು ಹಾಗೂ ಬಿಳ್ಳೂರಿನ ವಂಡಮಾನ್ ಬ್ಯಾರೇಜಿನಲ್ಲಿ, ಪಾತಪಾಳ್ಯದ ಬಳಿ ಇರುವ ಗಂಟ್ಲಮಲ್ಲಮ್ಮ ಕಣಿವೆಯಲ್ಲಿ ನೀರಿನ ಮಟ್ಟ ಕುಸಿತ ಕಂಡಿದೆ. ತಾಲ್ಲೂಕಿನಲ್ಲಿ 27,864 ಹೆಕ್ಟೇರ್ ಗುರಿಯ ಪೈಕಿ 25,297 ರಷ್ಟು ಸಾಧನೆ ಆಗಿದೆ.

ತಾಲ್ಲೂಕಿನ ಯಲ್ಲಂಪಲ್ಲಿ, ಆಚೇಪಲ್ಲಿ, ಲಘುಮದ್ದೇಪಲ್ಲಿ, ಶಂಖಂವಾರಿಪಲ್ಲಿ, ಪಾತಪಾಳ್ಯದ ಬಳಿಯ ಗುಜ್ಜೇಪಲ್ಲಿ, ಗೊಂದಿಪಲ್ಲಿ, ತಿಮ್ಮಂಪಲ್ಲಿ, ಮಾರ್ಗಾನುಕುಂಟೆ, ಗೂಳೂರು, ಕೊತ್ತಕೋಟೆ, ಪರಗೋಡು ಸೇರಿದಂತೆ ವಿವಿಧ ಕಡೆಗಳಲ್ಲಿ ಬೆಳೆ ಬೆಳೆದಿದ್ದಾರೆ.

ಕೃಷಿ, ತರಕಾರಿ ಬೆಳೆ ಒಣಗಿದರೂ, ಕೃಷಿ, ತೋಟಗಾರಿಕೆ, ಕಂದಾಯ, ಗ್ರಾಮ ಪಂಚಾಯಿತಿ ಅಧಿಕಾರಿಗಳ ತಂಡ ಭೇಟಿ ಮಾಡಿ ಜಂಟಿ ಸರ್ವೆ ಮಾಡಿಲ್ಲ. ಬೆಳೆಗಳ ನಷ್ಟದ ಬಗ್ಗೆ ಸರ್ಕಾರ ಜಂಟಿ ಸರ್ವೆ ಮಾಡಿ, ವರದಿ ನೀಡುವಂತೆ ಆದೇಶ ಮಾಡಿಲ್ಲ ಎಂದು ಪ್ರಾಂತ ರೈತ ಸಂಘದ ತಾಲ್ಲೂಕು ಮುಖಂಡ ಲಕ್ಷ್ಮಣರೆಡ್ಡಿ ತಿಳಿಸಿದರು.

ಜೂನ್‌ನಲ್ಲಿ ಬಿದ್ದ ಮಳೆಗೆ ಬಿತ್ತನೆ ಮಾಡಿದ್ದಾರೆ. ಬೀಜ ಮೊಳಕೆಯೊಡೆಯುವ ಸಂದರ್ಭದಲ್ಲಿ ಮಳೆ ಕೈ ಕೊಟ್ಟಿದೆ. ಬೆಳೆ ನಷ್ಟದ ಬಗ್ಗೆ ಜಂಟಿ ಸರ್ವೆ ಮಾಡಲು ಆದೇಶ ನೀಡಿದ ಬಳಿಕ ಸರ್ವೆ ಮಾಡಿ ಸರ್ಕಾರಕ್ಕೆ ವರದಿ ನೀಡಲಾಗುವುದು’ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕಿ ಜಿ.ಲಕ್ಷ್ಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT