ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಚೇನಹಳ್ಳಿಯಲ್ಲಿ ಕಸಾಪ ಸಮ್ಮೇಳನ ಇಂದು

Last Updated 26 ಫೆಬ್ರುವರಿ 2021, 2:59 IST
ಅಕ್ಷರ ಗಾತ್ರ

ಗೌರಿಬಿದನೂರು: ಮಂಚೇನಹಳ್ಳಿ ನೂತನ ತಾಲ್ಲೂಕು ಘೋಷಣೆಯಾದ ಬಳಿಕ ಪ್ರಥಮ ಬಾರಿಗೆ ಫೆ.26ರಂದು ನಡೆಯುತ್ತಿರುವ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸುಸಜ್ಜಿತ ವೇದಿಕೆ ಸಿದ್ಧಗೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆರ್.ಜಿ. ಜನಾರ್ಧನಮೂರ್ತಿ ಮಾತನಾಡಿ, ‘ಕನ್ನಡ ನಾಡು ನುಡಿ ಬೆಳೆಸುವಲ್ಲಿ ಸಾಹಿತ್ಯ ಸಮ್ಮೇಳನಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಮಂಚೇನಹಳ್ಳಿ ತಾಲ್ಲೂಕು ಘೋಷಣೆಯಾದ ಬಳಿಕ ನಡೆಯುತ್ತಿರುವ ಮೊದಲ ಐತಿಹಾಸಿಕ ಸಮ್ಮೇಳನ ಇದಾಗಿದೆ. ಮಂಚೇನ
ಹಳ್ಳಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಮಂಚೇನ
ಹಳ್ಳಿ ಇತಿಹಾಸ, ಸಂಸ್ಕೃತಿ, ಜನಜೀವನ, ಪರಂಪರೆ, ನೈಸರ್ಗಿಕ ಸಂಪನ್ಮೂಲಗಳನ್ನು ಪರಿಚಯಿಸುವ ಕೆಲಸವನ್ನು ಸಮ್ಮೇಳನದ ಮೂಲಕ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ನಮಗೆ ಬೆನ್ನೆಲುಬಾಗಿ ನಿಂತಿದ್ದು, ಕಾರ್ಯಕ್ರಮದ ಉದ್ಘಾಟನೆಗೆ ಸಾಕ್ಷಿಯಾಗಲಿದ್ದಾರೆ’ ಎಂದು ಹೇಳಿದರು.

ಮೆರವಣಿಗೆ: ಬೆಳಗ್ಗೆ ಧ್ವಜಾರೋಹಣದ ಮೂಲಕ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ ನೀಡಲಾಗುವುದು. ತಹಸೀಲ್ದಾರ್‌ ಎಚ್.ಶ್ರೀನಿವಾಸ್‌ ರಾಷ್ಟ್ರಧ್ವಜ, ಕಸಾಪ ಜಿಲ್ಲಾಧ್ಯಕ್ಷ ಕೈವಾರ ಎನ್.ಶ್ರೀನಿವಾಸ್‌ ನಾಡಧ್ವಜ ಹಾಗೂ ತಾಲ್ಲೂಕು ಅಧ್ಯಕ್ಷ ಆರ್‌.ಜಿ.ಜನಾರ್ಧನ ಮೂರ್ತಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಬೆಳಗ್ಗೆ 9.30 ಕ್ಕೆ ಭುವನೇಶ್ವರಿದೇವಿ ಭಾವಚಿತ್ರ ಹಾಗೂ ಜಾನಪದ ಕಲಾತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಮ್ಮೇಳಾನಾಧ್ಯಕ್ಷರಾದ ವಿ.ವಿ.ಗೋಪಾಲ್ ರವರ ಭವ್ಯ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಚಾಲನೆ ನೀಡಲಿದ್ದಾರೆ.

ಸಮ್ಮೇಳನ ಉದ್ಘಾಟನೆ: ಸಮ್ಮೇಳಾನಾಧ್ಯಕ್ಷರಾದ ಲೇಖಕ ಉಪ್ಪರಹಳ್ಳಿ ವಿ.ವಿ.ಗೋಪಾಲ್ ಸರ್ವಾಧ್ಯಕ್ಷತೆಯಲ್ಲಿ
ಬೆಳಗ್ಗೆ 10ಕ್ಕೆ ತಲ್ಲಂ ನಂಜುಂಡಯ್ಯ ಶೆಟ್ಟಿ ವೇದಿಕೆಯಲ್ಲಿ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ವೇದಿಕೆಯಲ್ಲಿ ಸಾಧಕರಿಗೆ ಸನ್ಮಾನ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅಧ್ಯಕ್ಷತೆ ವಹಿಸಲಿದ್ದು, ಖ್ಯಾತವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಸಂಸದ ಬಿ.ಎನ್.ಬಚ್ಚೇಗೌಡ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.

ಮಧ್ಯಾಹ್ನ 1.30ಕ್ಕೆ ಆಡಳಿತದಲ್ಲಿ ಕನ್ನಡ, ಗಡಿ ಸಮಸ್ಯೆಗಳು ಅಂದು ಇಂದು ಹಾಗೂ ಅವಿಭಜಿತ ಗೌರಿಬಿದನೂರು ತಾಲ್ಲೂಕಿನಲ್ಲಿ ರೈತ ಹೋರಾಟಗಳು ಎಂಬ ವಿಷಯಗಳ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಲೇಖಕಿ ಡಾ.ಪ್ರಭಾನಾರಾಯಣಗೌಡ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.

ಸಮಾರೋಪ ಸಮಾರಂಭ

ಸಂಜೆ 4.45 ಕ್ಕೆ ಹಾಸ್ಯ ನಟ ದೊಡ್ಡಣ್ಣ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ಸಮಾರೋಪ ಭಾಷಣ ಮಾಡಲಿದ್ದಾರೆ. ಸಂಜೆ 7ಕ್ಕೆ ಕನ್ನಡ ಗಾನ ಗಂಗೋತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ 'ಶರಣ ಜೀವನ ವಚನ ಹೂರಣ'ಅಂತರರಾಷ್ಟ್ರೀಯ ಮಟ್ಟದ ನಾಟಕ ಪ್ರದರ್ಶನ ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT