ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯಾಸಕ್ತರ ಕೆರಳಿಸಿದ ಕಸಾಪ ವೈಖರಿ

‘ಶಾಸ್ತ್ರ’ಕ್ಕೆ ಸೀಮಿತವಾದ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಧೋರಣೆಗೆ ಎಲ್ಲೆಡೆ ಅಸಮಾಧಾನ
Last Updated 5 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ ಸ್ಥಾಪನೆಯಾದ ಕನ್ನಡಿಗರ ಸಾಂಸ್ಕೃತಿಕ ಮೇರು ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಚಟುವಟಿಕೆಗಳು, ಗಡಿಭಾಗದ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಿಷ್ಕ್ರೀಯಗೊಳ್ಳುತ್ತಿವೆ ಎಂಬ ಆಕ್ರೋಶ ಸಾಹಿತ್ಯ ವಲಯದಲ್ಲಿ ವ್ಯಕ್ತವಾಗುತ್ತಿದೆ.

ನೆರೆಯ ಆಂಧ್ರಪ್ರದೇಶಕ್ಕೆ ಗಡಿ ಹಂಚಿಕೊಂಡಿರುವ ಜಿಲ್ಲೆಯ ಮೇಲೆ ತೆಲುಗು ಭಾಷೆಯ ದಟ್ಟ ಛಾಯೆ ಬಹು ಹಿಂದಿನಿಂದಲೂ ಇದೆ. ಇಂತಹ ನೆಲದಲ್ಲಿ ಕಸಾಪದ ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಘಟಕಗಳು ಕ್ರಿಯಾಶೀಲವಾಗಿ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಜನಮಾನಸದ ನಾಲಿಗೆಯಲ್ಲಿ ಕನ್ನಡ ನಲಿದಾಡುವಂತಹ ವಾತಾವರಣ ನಿರ್ಮಿಸುವಲ್ಲಿ ಕಸಾಪ ವಿವಿಧ ಘಟಕಗಳ ಚುಕ್ಕಾಣಿ ಹಿಡಿದವರು ವಿಫಲರಾಗುತ್ತಿದ್ದಾರೆ ಎನ್ನುವುದು ಸಾರ್ವತ್ರಿಕ ಟೀಕೆ.

ರಾಜ್ಯದಲ್ಲೆಡೆ ನಡೆಯುವಂತೆ ಜಿಲ್ಲೆಯಲ್ಲೂ ಪರಿಷತ್ತಿನ ವಿವಿಧ ಘಟಕಗಳ ವತಿಯಿಂದ ಸಮ್ಮೇಳನ, ಗೋಷ್ಠಿ, ಸ್ಪರ್ಧೆ, ಉಪನ್ಯಾಸ, ವಸಂತ ಸಾಹಿತ್ಯೋತ್ಸವ, ಸಾಹಿತ್ಯ ರಚನಾ ತರಬೇತಿ ಶಿಬಿರಗಳು, ಪರಿಷತ್ತಿನ ಸ್ಥಾಪನಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ರಾಜ್ಯೋತ್ಸವ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಯಬೇಕು. ಆದರೆ ಇಲ್ಲಿ ಕಾಟಾಚಾರಕ್ಕೆ ಯಾವಾಗಲೋ ಒಮ್ಮೆ ‘ಶಾಸ್ತ್ರ’ಕ್ಕೆ ಎಂಬಂತೆ ಮುಗಿಸಿ, ಕೈತೊಳೆದುಕೊಳ್ಳುವ ಧೋರಣೆ ಕಾಣುತ್ತಿದೆ ಎನ್ನುವುದು ಹಿರಿಯ ಸದಸ್ಯರ ಆರೋಪ.

ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಎರಡು ಜಿಲ್ಲಾ ಸಮ್ಮೇಳನಗಳು ಸೇರಿದಂತೆ 12 ಸಮ್ಮೇಳನಗಳು ನಡೆಯಬೇಕಿತ್ತು. ಈ ಪೈಕಿ ಐದು ಸಮ್ಮೇಳನಗಳು ಮಾತ್ರ ನಡೆದಿವೆ. ಕಳೆದ ವರ್ಷ ಚಿಕ್ಕಬಳ್ಳಾಪುರ, ಗೌರಿಬಿದನೂರು, ಶಿಡ್ಲಘಟ್ಟ ತಾಲ್ಲೂಕುಗಳಲ್ಲಿ, ಪ್ರಸಕ್ತ ಸಾಲಿನಲ್ಲಿ ಗೌರಿಬಿದನೂರು, ಶಿಡ್ಲಘಟ್ಟ ತಾಲ್ಲೂಕುಗಳಲ್ಲಿ ಮಾತ್ರ ಸಮ್ಮೇಳನಗಳು ನಡೆದವು. ಜಿಲ್ಲಾ ಸಮ್ಮೇಳನಗಳಂತೂ ನಡೆಯಲೇ ಇಲ್ಲ. ಹೋಬಳಿ ಮಟ್ಟದ ಸಮ್ಮೇಳನಗಳಂತೂ ಎಂದೋ ಮರೆತು ಹೋಗಿವೆ!

‘ಜಿಲ್ಲೆಯಲ್ಲಿ ಕಸಾಪ ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕಗಳ ಅಧ್ಯಕ್ಷರ ನಡುವೆ ಹೊಂದಾಣಿಕೆ ಕಂಡುಬರುತ್ತಿಲ್ಲ. ಹೀಗಾಗಿ, ಕಸಾಪ ಚಟುವಟಿಕೆಗಳು ಕನಿಷ್ಠ ಮಟ್ಟಕ್ಕೆ ಸೀಮಿತಗೊಳ್ಳುತ್ತಿವೆ. ಈ ಬಗ್ಗೆ ರಾಜ್ಯ ಘಟಕದ ಅಧ್ಯಕ್ಷ ಮನು ಬಳಿಗಾರ ಅವರಿಗೂ ಪತ್ರ ಬರೆದಿರುವೆ. ಆದರೆ, ಏನೂ ಪ್ರಯೋಜನವಾಗಿಲ್ಲ. ಯಾರಿಗೂ ಕನ್ನಡದ ಚಟುವಟಿಕೆಗಳು ಬೇಕಾಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಕಸಾಪ ಅನಾಥವಾಗಿದೆ’ ಎನ್ನುತ್ತಾರೆ ಕಸಾಪ ಹಿರಿಯ ಸದಸ್ಯ ಶಿವರಾಂ.

‘ನಾನು ನಾಲ್ಕು ದಶಕಗಳಿಂದ ಕಸಾಪ ಸದಸ್ಯನಾಗಿರುವೆ. ನಾನು ಹಿಂದೆ ತಾಲ್ಲೂಕು ಘಟಕದ ಅಧ್ಯಕ್ಷನಾಗಿದ್ದಾಗ ಮೂರು ವರ್ಷಗಳಲ್ಲಿ 72 ಕಾರ್ಯಕ್ರಮಗಳನ್ನು ನಡೆಸಿದ್ದೆ. ಹೋಬಳಿ ಮಟ್ಟಗಳಲ್ಲಿ ಕೂಡ ಸಮ್ಮೇಳನ ನಡೆಸಿದ್ದೆ. ದುರ್ದೈವ, ಇತ್ತೀಚಿನ ವರ್ಷಗಳಲ್ಲಿ ಜಿಲ್ಲಾ ಮಟ್ಟದ ಸಮ್ಮೇಳನಗಳು ನಡೆಯುತ್ತಿಲ್ಲ. ತಾಲ್ಲೂಕು ಮಟ್ಟದ ಸಮ್ಮೇಳನಗಳಂತೂ ಮರೆತೇ ಹೋಗುತ್ತಿವೆ. ನಿಯಮಿತವಾಗಿ ಯಾವ ಚಟುವಟಿಕೆಗಳೂ ನಡೆಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಕಸಾಪ ಕ್ರಿಯಾಶೀಲವಾಗಿ, ರಚನಾತ್ಮಕವಾಗಿ ಕೆಲಸ ಮಾಡುತ್ತಿಲ್ಲ. ಬಲವಾದ ಸಂಘಟನೆಯಂತೂ ಆಗಲೇ ಇಲ್ಲ. ಪದೇ ಪದೇ ತಾಲ್ಲೂಕು ಘಟಕಗಳ ಅಧ್ಯಕ್ಷರನ್ನು ಬದಲಾವಣೆ ಮಾಡುತ್ತಿರುವುದರಿಂದ ಕಸಾಪ ದುರ್ಬಲವಾಗುತ್ತಿದೆ. ಯಜಮಾನ ಸರಿ ಇಲ್ಲದ ಮೇಲೆ ಮನೆ ಹೇಗೆ ಚೆನ್ನಾಗಿದ್ದೀತು’ ಎಂದು ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಪ್ರಶ್ನಿಸಿದರು.

‘ಇವತ್ತು ಕೆಲವರು ವೈಯಕ್ತಿಕ ಪ್ರತಿಷ್ಠೆಗಾಗಿ ಕಸಾಪ ಹುದ್ದೆ ಇಟ್ಟುಕೊಂಡಿದ್ದಾರೆ. ಹೀಗಾಗಿ, ಗಡಿ ಪ್ರದೇಶದ ಜಿಲ್ಲೆಯಲ್ಲಿ ಕನ್ನಡಕ್ಕೆ ಬಹಳಷ್ಟು ಹಿನ್ನಡೆಯಾಗಿದೆ. ಕನ್ನಡದ ಅಭಿವೃದ್ಧಿಗೆ ಸರ್ಕಾರ ಅನುದಾನ ಕೊಟ್ಟರೂ ಕೆಲಸ ಮಾಡದ ಮೇಲೆ ಕಸಾಪ ಪದಾಧಿಕಾರಿಗಳಾಗಿ ಇರುವ ಬದಲು ರಾಜೀನಾಮೆ ಕೊಟ್ಟು ತಮ್ಮ ಕೆಲಸ ನೋಡಿಕೊಂಡಿರುವುದು ಉತ್ತಮ’ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಯಲುವಳ್ಳಿ ಸೊಣ್ಣೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT