ಗುರುವಾರ , ಮಾರ್ಚ್ 23, 2023
21 °C
ಪರಿಶಿಷ್ಟರ ಕಾಲೋನಿಯಲ್ಲಿನ ಮೂಲ ಸೌಕರ್ಯಗಳ ಪರಿಶೀಲನೆ

ಸಚಿ ಡಾ.ಕೆ.ಸುಧಾಕರ್, ಜಿಲ್ಲಾಧಿಕಾರಿ ಆರ್.ಲತಾ ಗ್ರಾಮ ವಾಸ್ತವ್ಯ

ಪ್ರಜಾವಾಣಿ ‌ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ತಾಲ್ಲೂಕು ‌ಮಂಚೇನಹಳ್ಳಿ‌ ಹೋಬಳಿಯ ಪುರ ಗ್ರಾಮದಲ್ಲಿ ಶನಿವಾರ ರಾತ್ರಿ ಜಿಲ್ಲಾ ಉಸ್ತುವಾರಿ ‌ಸಚಿವ ಡಾ.ಕೆ.ಸುಧಾಕರ್, ಜಿಲ್ಲಾಧಿಕಾರಿ ಆರ್.ಲತಾ, ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್, ಜಿ.ಪಂ ಸಿಇಒ ಪಿ.ಶಿವಶಂಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ವಾಸ್ತವ್ಯ ಹೂಡಿ‌ ಸ್ಥಳೀಯರ ಅಹವಾಲು ಸ್ವೀಕರಿಸಿದರು.

ಶನಿವಾರ ಪುರ ಗ್ರಾಮದ ಸರ್ಕಾರಿ‌ ಶಾಲಾ ಆವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ‌ ಭಾಗವಹಿಸಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದರು.

‌ಬಳಿಕ ಪುರ ಪರಿಶಿಷ್ಟರ ಕಾಲೋನಿಗೆ ತೆರಳಿ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾಧಿಕಾರಿ ‌ಆರ್.ಲತಾ, ಸಿಇಒ ಪಿ.ಶಿವಶಂಕರ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಸಿ ರಘುನಂಧನ್ ಪರಿಶಿಷ್ಟರ ಮನೆಯಲ್ಲಿ ಊಟ ಸವಿದರು. ಬಳಿಕ ಅಲ್ಲಿಂದ ಗ್ರಾಮದಲ್ಲಿನ ಅರಳಿಕಟ್ಟೆ ಬಳಿ‌ ಕುಳಿತು ಸ್ಥಳೀಯರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸಚಿವರು ಗ್ರಾ.ಪಂ ಅಧ್ಯಕ್ಷರ ಮನೆಯಲ್ಲಿ, ಜಿಲ್ಲಾಧಿಕಾರಿ ‌ಗ್ರಾ.ಪಂ ಕಾರ್ಯಾಲಯದಲ್ಲಿ ಹಾಗೂ ಎಸ್‌ಪಿ, ಎಸಿ, ಸಿಇಒ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದರು.

ಭಾನುವಾರ ಬೆಳಿಗ್ಗೆ ಗ್ರಾಮದಲ್ಲಿ ‌ಮತ್ತು ಪರಿಶಿಷ್ಟರ ಕಾಲೋನಿಯಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲಿಸಿ, ಜನರಿಂದ ಅಭಿಪ್ರಾಯ‌ ಸಂಗ್ರಹಿಸಿದರು.

ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಜನಪ್ರತಿನಿಧಿಗಳು‌ ಹಾಗೂ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಲ್ಲಿ ವಾಸ್ತವ್ಯ ಹೂಡುವುದರಿಂದ ಸ್ಥಳೀಯ ‌ಸಮಸ್ಯೆಗಳ ಬಗ್ಗೆ ಅರಿತು ಅವುಗಳಿಗೆ ಪರಿಹಾರ ಕಲ್ಪಿಸಲು ಸಾಧ್ಯವಾಗುತ್ತದೆ. ಜತೆಗೆ ‌ಅವಶ್ಯಕ‌ ಅಭಿವೃದ್ಧಿ ‌ಕಾರ್ಯಗಳನ್ನು ಕೈಗೊಳ್ಳಲು‌ ಸಹಕಾರಿಯಾಗುತ್ತದೆ. ಈ‌ ನಿಟ್ಟಿನಲ್ಲಿ ಜಿಲ್ಲಾಡಳಿತದ ಪ್ರಯತ್ನದಿಂದ ನಡೆಸಿದ ಜಿಲ್ಲಾಧಿಕಾರಿಗಳ‌ ನಡೆ ಹಳ್ಳಿ ಕಡೆ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳು ಯಶಸ್ವಿಯಾಗಿದೆ. ಜನರಿಂದ ಪಡೆದಿರುವ ಅಹವಾಲುಗಳಿಗೆ ಮುಂದಿನ 15 ದಿನಗಳ ಒಳಗಾಗಿ ಪರಿಹಾರ ಕಲ್ಪಿಸಲಾಗುವುದು ಎಂದರು.

ಸಚಿವರಿಗೆ ಸ್ವಾಗತ ಕೋರಿದ ಭರ್ಜರಿ ಬ್ಯಾನರ್‌ಗಳು: ಶನಿವಾರ ಪುರ ಗ್ರಾಮದಲ್ಲಿ‌ ಜಿಲ್ಲಾಡಳಿತದ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಹಾಗೂ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಬರುವ ಉಸ್ತುವಾರಿ ಸಚಿವರಿಗೆ ಸ್ವಾಗತ ಕೋರಲು‌ ಅವರ ಅಭಿಮಾನಿಗಳು‌ ಹಾಗೂ ಸ್ಥಳೀಯ ‌ಜನಪ್ರತಿನಿಧಿಗಳು ಪುರ ಗ್ರಾಮದ ಪ್ರಮುಖ‌ ಬೀದಿಗಳಲ್ಲಿ ಭರ್ಜರಿಯಾಗಿ ಪ್ಲೆಕ್ಸ್, ಬ್ಯಾನರ್ ಅಳವಡಿಸಿದ್ದರು. ಸ್ಥಳೀಯ ಗ್ರಾ.ಪಂ ಯಿಂದ ಅನುಮತಿ ಪಡೆಯಬೇಕಾಗಿದ್ದು, ಈ ನಿಯಮವನ್ನು ಗಾಳಿಗೆ ತೂರಿದ್ದ ನಾಯಕರ ಪ್ರಚಾರದ ವೈಖರಿ ಕಂಡು ಗ್ರಾ.ಪಂ ಅಧಿಕಾರಿಗಳು ಜಾಣ ಕುರುಡನ್ನು ಪ್ರದರ್ಶಿಸಿದಂತಿತ್ತು.

ಗ್ರಾಮ ವಾಸ್ತವ್ಯದಲ್ಲಿ ಡಿಡಿಪಿಐ‌ ಜಯರಾಮರೆಡ್ಡಿ, ಡಿಎಚ್‌ಒ ಡಾ.ಇಂದಿರಾ ಆರ್.ಕಬಾಡೆ, ಡಿವೈಎಸ್ಪಿ ವಾಸುದೇವ್, ತಹಶೀಲ್ದಾರ್ ‌ಎಚ್.ಶ್ರೀನಿವಾಸ್, ಉಪತಹಶೀಲ್ದಾರ್ ಮಂಜುನಾಥ್, ಕಂದಾಯ‌ ನಿರೀಕ್ಷಕ ನಾಗೇಶ್, ಮುಖಂಡ ಪಿ.ವಿ.ವಿರೂಪಾಕ್ಷಗೌಡ, ಜಗನ್ನಾಥ್, ಜಿ.ಆರ್.ರಾಜಶೇಖರ್, ನಾರಾಯಣಸ್ವಾಮಿ, ಯತೀಶ್,‌ ಶ್ರೀನಾಥ್, ಗಂಗಾಧರ್, ನರಸಿಂಹ, ನಾರಾಯಣರೆಡ್ಡಿ
ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು