ಶನಿವಾರ, ಜನವರಿ 28, 2023
20 °C
ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಾಗಣ್ಣಗೌಡ ಸಲಹೆ

‘ಮೊಬೈಲ್‌ನಿಂದ ಮಕ್ಕಳ ದೂರವಿಡಿ’: ನಾಗಣ್ಣಗೌಡ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ದುರಾಭ್ಯಾಸ ಕಲಿಸುವುದು ಸುಲಭ. ಅದನ್ನು ಬಿಡಿಸುವುದು ತುಂಬಾ ಕಷ್ಟ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆರ್‌ಟಿಇ, ಪೋಕ್ಸೊ ಮತ್ತು ಬಾಲನ್ಯಾಯ ಕಾಯಿದೆ-2015ರ ಅನುಷ್ಠಾನ ಹಾಗೂ ಜಿಲ್ಲೆಯಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಮಕ್ಕಳ ಕಲಿಕೆಯ ಉದ್ದೇಶಕ್ಕೆ, ಊಟ, ತಿಂಡಿ ತಿನ್ನಿಸಲು ಅಥವಾ ಮನರಂಜನೆಯ ಉದ್ದೇಶಕ್ಕೆ ಮೊಬೈಲ್ ಅಭ್ಯಾಸ ಮಾಡಿಸುವುದು ತೀರಾ ಸುಲಭ. ಆದರೆ ಮೊಬೈಲ್ ಗೀಳನ್ನು ಬಿಡಿಸುವುದು ಬಹಳ ಕಷ್ಟ. ಪೋಷಕರು ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಬೇಕು ಎಂದರು.

ಹಿಂದಿನ ಕಾಲದಲ್ಲಿ ಕುಂಟೆಬಿಲ್ಲೆ, ಲಗೋರಿ, ಚಿನ್ನಿದಾಂಡು, ಮರಕೋತಿ, ಕಣ್ಣಮುಚ್ಚಾಲೆ, ಚೌಕಮಣಿ ಮತ್ತಿತರ ಗ್ರಾಮೀಣ ಕ್ರೀಡೆಗಳ ಮೂಲಕ ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗುತ್ತಿದ್ದರು. ಇಂದು ಮಕ್ಕಳ ಕೈಗೆ ಮೊಬೈಲ್ ಗೇಮುಗಳು ಬಂದು ಜ್ಞಾಪಕ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ. ಸೃಜನಶೀಲತೆ ಕಣ್ಮರೆಯಾಗಿದೆ ಎಂದರು.

ಅಂಗನವಾಡಿಗಳು ಮತ್ತು ಶಾಲಾ ಕಾಲೇಜುಗಳಲ್ಲಿ ಮಕ್ಕಳ ಬೆಳೆವಣಿಗೆ ಪೂರಕವಾದ ಕ್ರೀಡೆಗಳನ್ನು ತಮ್ಮ ಪರಿಮಿತಿಯಲ್ಲಿ ಆಡಿಸಬೇಕು. ಮಕ್ಕಳು ಹಾಗೂ ಗರ್ಭಿಣಿಯರಿಗೆ ವಿತರಿಸುವ ಪೌಷ್ಟಿಕ ಆಹಾರ ಸಾಮಗ್ರಿಗಳು ಸಮರ್ಪಕವಾಗಿ ವಿತರಿಸಬೇಕು ಎಂದು ಸೂಚಿಸಿದರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮೊಳಕೆಕಾಳು, ಹಣ್ಣು, ಸೊಪ್ಪು, ತರಕಾರಿಯುಕ್ತ ಆಹಾರ ಉತ್ಪನ್ನಗಳನ್ನು ಬಳಸದೆ ಜಂಕ್ ಫುಡ್‌ಗೆ ಮಾರು ಹೋಗುತ್ತಿದ್ದಾರೆ. ಜೀವಸತ್ವವುಳ್ಳ ಆಹಾರ ಸೇವನೆಯಿಂದ ವಂಚಿತರಾಗುತ್ತಿದ್ದಾರೆ. ಕೆಲವು ಮಹಿಳೆಯರು ಬಡತನದ ಕಾರಣದಿಂದ ಪೌಷ್ಟಿಕ ಆಹಾರದಿಂದ ವಂಚಿತರಾದರೆ ಕೆಲವರು ತಮ್ಮ ಅನಾರೋಗ್ಯ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ 2022ರ ಏ.22 ರಿಂದ ನವೆಂಬರ್ ಅಂತ್ಯಕ್ಕೆ ಬಾಲ್ಯವಿವಾಹ ಬಗ್ಗೆ 77 ದೂರುಗಳು ಬಂದಿದಿವೆ. ಈ ಪೈಕಿ 73 ಬಾಲ್ಯವಿವಾಹಗಳನ್ನು ತಡೆಗಟ್ಟಲಾಗಿದೆ. 4 ಬಾಲ್ಯವಿವಾಹಗಳು ಜರುಗಿದ್ದು, ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬಾಲ್ಯವಿವಾಹ ಹಾಗೂ ಇನ್ನಿತರ ದೌಜರ್ನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಮತ್ತು ಪಂಚಾಯಿತಿ ಮಟ್ಟದ ಸಮಿತಿಗಳ ಕಾರ್ಯಗಳನ್ನು ಬಲವರ್ಧಿಸಬೇಕು. ಕಡ್ಡಾಯವಾಗಿ ಮಕ್ಕಳ ಗ್ರಾಮ ಸಭೆಗಳು ಜಿಲ್ಲೆಯಲ್ಲಿ ನಡೆಯಬೇಕು ಎಂದು ನಾಗಣ್ಣ ಗೌಡ ತಿಳಿಸಿದರು. 

‌ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರಾಮರಾಜ್ ಅರಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಶ್ವತ್ಥಮ್ಮ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

‘ಹಾಸ್ಟೆಲ್‌ಗಳಲ್ಲಿ ಉತ್ತಮ ವಾತಾವರಣ ಇರಲಿ’

ಜಿಲ್ಲೆಯಲ್ಲಿನ ವಿದ್ಯಾರ್ಥಿನಿಲಯಗಳಲ್ಲಿ ಮಕ್ಕಳಿಗೆ ಸ್ವಚ್ಛ ವಾತಾವರಣ ಕಲ್ಪಿಸಿ, ಪೌಷ್ಟಿಕ ಊಟ, ತಿಂಡಿ ನೀಡಬೇಕು. ಉತ್ತಮ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಮಕ್ಕಳಲ್ಲಿ ಪರಿಸರ ಪ್ರಜ್ಞೆ, ಶಿಸ್ತು, ಸ್ವಚ್ಛತೆ, ಸಂಸ್ಕಾರ, ಹಾಗೂ ಮೌಲ್ಯಯುತ ಜೀವನ ವಿಧಾನವನ್ನು ಹೇಳಿ ಕೊಡಬೇಕು. ಮಕ್ಕಳನ್ನು ಶಿಕ್ಷಿಸುವುದರ ಮೂಲಕ ಶಿಕ್ಷಣ ನೀಡುವುದಲ್ಲ ಮನವೊಲಿಸಿ ತಿದ್ದುವ ಕೆಲಸ ಆಗಬೇಕು ಎಂದು ನಾಗಣ್ಣಗೌಡ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.