ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಕೆಂಪೇಗೌಡರ ಕಂಚಿನ ಪುತ್ಥಳಿ ಸ್ಥಾಪನೆ

ಚಿಕ್ಕಬಳ್ಳಾಪುರದ ಬಿ.ಬಿ ರಸ್ತೆಯಿಂದ ಬಜಾರ್ ರಸ್ತೆಗೆ ಸಾಗುವ ವೃತ್ತ; ಸಚಿವ ಡಾ.ಕೆ.ಸುಧಾಕರ್ ಘೋಷಣೆ
Last Updated 27 ಜೂನ್ 2021, 14:12 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಭಾನುವಾರ ನಾಡಪ್ರಭು ಕೆಂಪೇಗೌಡರ ಜಯಂತಿ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ನಡೆಯಿತು. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆದ ಕೆಂಪೇಗೌಡರ ಜಯಂತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಬಿ.ಬಿ ರಸ್ತೆಯಿಂದ ಬಜಾರ್ ರಸ್ತೆಗೆ ಸಾಗುವ ವೃತ್ತದಲ್ಲಿ ಕೆಂಪೇಗೌಡರ ಕಂಚಿನ ಪುತ್ಥಳಿ ಸ್ಥಾಪಿಸಲಾಗುವುದು. ಮುಂದಿನ ವರ್ಷದ ಕೆಂಪೇಗೌಡರ ಜಯಂತಿಯ ದಿನ ಪುತ್ಥಳಿ ಅನಾವರಣಗೊಳಿಸಲಾಗುವುದು.ನಗರದಲ್ಲಿ ಕನಿಷ್ಠ 8ರಿಂದ 10 ವೃತ್ತಗಳಲ್ಲಿ ಸಮಾಜ ಸುಧಾರಕರ ಪ್ರತಿಮೆಗಳ ಅನಾವರಣಕ್ಕೆ ಕ್ರಮವಹಿಸಲಾಗುವುದು ಎಂದು ಹೇಳಿದರು.

ಬೆಂಗಳೂರಿಗೆ ಪರ್ಯಾಯವಾಗಿ ಚಿಕ್ಕಬಳ್ಳಾಪುರವನ್ನು ಬೆಳೆಸಬೇಕು. ಕೆಲವು ಪ್ರಮುಖ ಕೈಗಾರಿಕೆಗಳನ್ನು ಇಲ್ಲಿಗೆ ತರಲಾಗುತ್ತಿದೆ. ಸರ್ಕಾರಿ ವೈದ್ಯಕೀಯ ಶಿಕ್ಷಣ ಕಾಲೇಜು ಮುಂದಿನ ವರ್ಷ ಉದ್ಘಾಟನೆಯಾಗಲಿದೆ. ಮಂಡಿಕಲ್, ದಿಬ್ಬರು ಮತ್ತು ಪೆರೇಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ₹ 28 ಕೋಟಿ ಖರ್ಚು ಮಾಡಿ ಅಂತರರಾಷ್ಟ್ರೀಯ ದರ್ಜೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕಾ ಕ್ಷೇತ್ರವನ್ನು ವಿಶೇಷವಾಗಿ ಆದ್ಯತೆಯಾಗಿ ತೆಗೆದುಕೊಂಡಿದ್ದೇನೆ. ಮುಂದಿನ ಒಂದೂವರೆ ವರ್ಷದಲ್ಲಿ ಮತ್ತಷ್ಟು ಅಭಿವೃದ್ಧಿಯ ಯೋಜನೆಗಳು ಇವೆ.ದೇವನಹಳ್ಳಿಯವರೆ ಮೆಟ್ರೊ ಮತ್ತು ಸರ್ಬನ್ ರೈಲು ಓಡುತ್ತವೆ. ಅವುಗಳನ್ನು ಚಿಕ್ಕಬಳ್ಳಾಪುರಕ್ಕೆ ತರಬೇಕು ಎಂದುಕೊಂಡಿದ್ದೇನೆ ಎಂದರು.

15ನೇ ಶತಮಾನದ ಕೆಂಪೇಗೌಡರನ್ನು 21ನೇ ಶತಮಾನದಲ್ಲಿಯೂ ನೆನಪಿಸಿಕೊಳ್ಳುತ್ತೇವೆ. ‌ಅವರ ಕೆಲಸಗಳು ಒಂದು ಸಮುದಾಯಕ್ಕೆ ಸೀಮಿತವಾದುದಲ್ಲ. ಕೆಂಪೇಗೌಡರ ಆದರ್ಶಗಳಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ಅವರ ಆದರ್ಶಗಳ ಪ್ರಕಾರ ರಾಜ್ಯಕ್ಕೆ ಮತ್ತು ನನ್ನ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡುವೆ ಎಂದರು.

ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಮಾತನಾಡಿ, ‌ಕೋವಿಡ್‌ನಿಂದ ಸಂಕಟ ಎದುರಾಗಿದೆ. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಮಾಡಲು ಸಾಧ್ಯವಿಲ್ಲ. ಮನೆಗಳಲ್ಲಿಯೇ ಕಾರ್ಯಕ್ರಮಗಳನ್ನು ಮಾಡಬಹುದಾದ ಸಂದರ್ಭ ಬರಬಹುದು ಎಂದುಕೊಂಡಿದ್ದೆವು. ಆದರೆ ಇಲ್ಲಿ ಕಾರ್ಯಕ್ರಮವನ್ನು ಚೆನ್ನಾಗಿ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಎಲ್ಲ ಜನಾಂಗಗಳನ್ನು ಸಮಾನ ಭಾವದಿಂದ ಕೆಂಪೇಗೌಡರು ಕಂಡಿದ್ದಾರೆ. ಆದ ಕಾರಣ ಅವರು ನಾಡಪ್ರಭುವಾದರು. ಆಯಾ ವೃತ್ತಿಗೆ ಅನುಸಾರವಾಗಿ ಪೇಟೆಗಳನ್ನು ನಿರ್ಮಿಸಿದರು. ಈಗ ಬೆಂಗಳೂರು ಎಂದರೆ ವಿದೇಶಗಳ ಜನರಿಗೂ ಗೊತ್ತಾಗುತ್ತದೆ. ಬೆಂಗಳೂರು ಬೆಳೆಯಲು 500 ವರ್ಷಗಳ ಹಿಂದೆಯೇ ಕೆಂಪೇಗೌಡರು ಯೋಜನೆ ರೂಪಿಸಿದ್ದರು ಎಂದರು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಒಕ್ಕಲಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಸಾಯಿ ಕೃಷ್ಣ ಚಾರಿಟಬಲ್ ಟ್ರಸ್ಟ್‌ನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.

ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿ.ಪಂ.ಸಿಇಒ ಪಿ.ಶಿವಶಂಕರ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗದ ಮಧ್ಯಕ್ಷ ಕೆ.ವಿ.ನಾಗರಾಜ್, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ, ಜಿ.ಪಂ.ಸದಸ್ಯ ಕೇಶವರೆಡ್ಡಿ, ತಾಲ್ಲೂಕು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ನಪ್ಪರೆಡ್ಡಿ, ರಾಜ್ಯ ಸಂಘದ ನಿರ್ದೇಶಕ ಯಲುವಳ್ಳಿ ರಮೇಶ್ ಹಾಗೂ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಾತ್ಯತೀತ ದೃಷ್ಟಿಯ ಕೆಂಪೇಗೌಡರು
ಕೆಂಪೇಗೌಡರ ಕುರಿತು ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ಕೆಂಪೇಗೌಡರಲ್ಲಿದ್ದ ಜಾತ್ಯತೀತ ದೃಷ್ಟಿ, ಅಭಿವೃದ್ಧಿಯ ಮುನ್ನೋಟಗಳ ಕಾರಣದಿಂದ ಅವರ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಅವರು ಸ್ಥಾಪಿಸಿದ ನವಬೆಂಗಳೂರು ಇಂದು ಬೃಹತ್ ಬೆಂಗಳೂರಾಗಿದೆ ಎಂದರು.

ಚಿಕ್ಕಬಳ್ಳಾಪುರಕ್ಕೆ ಈ ಹಿಂದೆ ಕೋಡಿ ಮಂಚೆಪಲ್ಲಿ ಎಂಬ ಹೆಸರಿತ್ತು. ಅವರ ಮೂಲ ಪುರುಷರು ಊರನ್ನು ಅಭಿವೃದ್ಧಿಪಡಿಸಿ ಬಳ್ಳಾಪುರ ಎಂದು ಹೆಸರಿಟ್ಟರು. ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರವನ್ನೂ ಸ್ಥಾಪಿಸಿದರು ಎಂದು ಸ್ಮರಿಸಿದರು.

ಕೆಂಪೇಗೌಡರು ಬೆಂಗಳೂರು ಅಭಿವೃದ್ಧಿಗೆ ಮುನ್ನುಡಿ ಬರೆದರು. ಅವರ ಕಾಲದಲ್ಲಿ ದೇಗುಲಗಳು, ಕೆರೆಕಟ್ಟೆಗಳು ಹೇರಳ ನಿರ್ಮಾಣವಾದವು. ಅವರ ದೂರದೃಷ್ಟಿಯ ಫಲವಾಗಿ ಬೆಂಗಳೂರು ಇಂದು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ಜಟಾಪಟಿ ಹೊಸದಲ್ಲ
ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಜಟಾಪಟಿ ಹೊಸದಲ್ಲ. ಅದು ಹುಟ್ಟಿದಾಗಿನಿಂದಲೂ ಇದೆ. ದಲಿತ ಸಿ.ಎಂ ಬಗ್ಗೆ ಅವರು ಹೇಳುತ್ತಾರೆಯೇ ಹೊರತು ಮಾಡುವುದಿಲ್ಲ ಎಂದು ಡಾ.ಕೆ.ಸುಧಾಕರ್ ಹೇಳಿದರು.

ಕಾಂಗ್ರೆಸ್‌ನವರು ಪ್ರಧಾನಿ, ಮುಖ್ಯಮಂತ್ರಿ ಸ್ಥಾನಕ್ಕೆ ದಲಿತರನ್ನು ಆಯ್ಕೆ ಮಾಡುವುದಿಲ್ಲ. ಅಲ್ಪಸಂಖ್ಯಾತರ ಶೈಕ್ಷಣಿಕ ಆರ್ಥಿಕ, ಸಾಮಾಜಿಕ ಉದ್ದಾರಕ್ಕೂ ಶ್ರಮಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಶಿಸ್ತುಬದ್ಧವಾಗಿ ಪ್ರತಿ ಸಮುದಾಯಕ್ಕೆ ಕಾರ್ಯಕ್ರಮ ನೀಡಿ ಬದಲಾವಣೆ ತರುವ ಪ್ರಯತ್ನ ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT