ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಕೋಚಿಮುಲ್ ವಿಭಜನೆ, ಸಹಿ ಸಂಗ್ರಹ ಪರ್ವ

27ರ ಒಕ್ಕೂಟದ ಸಾಮಾನ್ಯ ಸಭೆಯಲ್ಲಿ ಬಲಾಬಲ ಪ್ರದರ್ಶನಕ್ಕೆ ಬಣಗಳು ಸಜ್ಜು
Last Updated 24 ಅಕ್ಟೋಬರ್ 2021, 4:22 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಹಾಲು ಉತ್ಪಾದಕರ ಸಹಕಾರ ಸಂಘ (ಡೇರಿ)ಗಳ ಚುನಾವಣೆಗಳು ಜಿಲ್ಲೆಯಲ್ಲಿ ಪೈಪೋಟಿಯಿಂದಲೇ ನಡೆಯುತ್ತವೆ. ಸಹಕಾರ ವಲಯ ಎನಿಸಿದರೂ ಸಂಘದ ಚುನಾವಣೆಗಳು ರಾಜಕಾರಣದಿಂದ ಹೊರತಲ್ಲ. ಆದರೆ, ಈಗ ಕೋಚಿಮುಲ್ ವಿಭಜನೆಯ ಪರ ವಿರೋಧಗಳು ತಾರಕಕ್ಕೆ ಏರಿದಂತೆ ಡೇರಿಗಳಲ್ಲಿ ರಾಜಕಾರಣ ಪ್ರಬಲವಾಗಿಯೇ ಪ್ರವಹಿಸಿದೆ.

ಜಿಲ್ಲೆಯಲ್ಲಿ ಕೋಚಿಮುಲ್ ವಿಭಜನೆಯ ವಿಚಾರವಾಗಿ ಡೇರಿ ಕಾರ್ಯದರ್ಶಿಗಳಿಂದ ಸಹಿ ಸಂಗ್ರಹ ಪರ್ವ ಅಭಿಯಾನದ ರೀತಿಯಲ್ಲಿ ನಡೆಯುತ್ತಿದೆ. ಅ. 27ರಂದು ನಡೆಯುವ ಕೋಚಿಮುಲ್ ಸಾಮಾನ್ಯ ಸಭೆಯಲ್ಲಿ ಬಲಾ ಬಲ ಪ್ರದರ್ಶನಕ್ಕೆ ಈ ಸಹಿ ಸಂಗ್ರಹ ಅಭಿಯಾನ ಕಾರಣವಾಗಿದೆ.

ಸಹಿ ಸಂಗ್ರಹದ ವಿಚಾರವಾಗಿ ಗೌರಿಬಿದನೂರು ಶಾಸಕ ಎನ್‌.ಎಚ್. ಶಿವಶಂಕರರೆಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯೊಬ್ಬರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಇತ್ತೀಚೆಗೆ ವೈರಲ್ ಆಗಿತ್ತು. ಡೇರಿ ಕಾರ್ಯದರ್ಶಿಯೊಬ್ಬರು ಶಾಸಕರ ಸೂಚನೆಯಂತೆ ಕೋಚಿಮುಲ್ ‌ಪ್ರತ್ಯೇಕಕ್ಕೆ ಸಹಮತವಿಲ್ಲ ಎಂಬ ಒಪ್ಪಿಗೆ ಪತ್ರವನ್ನು ಸಿದ್ದಗೊಳಿಸಿ ತಾಲ್ಲೂಕಿನ ಎಲ್ಲ ಸಂಘಗಳ ಕಾರ್ಯದರ್ಶಿಗಳಿಂದ ಸಹಿ ಮಾಡಿಸುತ್ತಿದ್ದಾರೆ ಎನ್ನುವ ದೂರು ಕೇಳಿ ಬಂದಿತ್ತು.

ಕಾರ್ಯದರ್ಶಿಯೊಬ್ಬರು ಸಹಿ ಮಾಡಲು ನಿರಾಕರಿಸಿದ್ದು, ಶಾಸಕ ಶಿವಶಂಕರರೆಡ್ಡಿ ಆ ಕಾರ್ಯದರ್ಶಿ ಕರೆ ಮಾಡಿ ಸಹಿ‌ ಮಾಡುವಂತೆ ತಿಳಿಸಿದ್ದರು. ಕಾರ್ಯದರ್ಶಿ ಮತ್ತು ಶಾಸಕರ ನಡುವಿನ ಸಂಭಾಷಣೆಯ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಮರುದಿನವೇ ಬಿಜೆಪಿ ಮುಖಂಡರು ಚಿಕ್ಕಬಳ್ಳಾಪುರದಲ್ಲಿ ಜಿಲ್ಲೆಯ ವಿವಿಧ ಡೇರಿಗಳ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರ ಸಭೆ ನಡೆಸಿದರು. ಅಲ್ಲಿಯೂ ಒಂದು ಪತ್ರ ಸಿದ್ಧಗೊಳಿಸಿ ಸಹಿ ಪಡೆದಿದ್ದಾರೆ.

‘2015–16 ಮತ್ತು 2016–17ನೇ ಸಾಮಾನ್ಯ ಸಭೆಯಲ್ಲಿ ಕೋಚಿಮುಲ್ ವಿಭಜಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿತ್ತು. ಈ ಬಗ್ಗೆ ಸಹಕಾರ ತತ್ವ ಹಾಗೂ ನಿಯಮಗಳ ಅನ್ವಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ಒಕ್ಕೂಟವನ್ನು ವಿಭಜಿಸಲು ತೀರ್ಮಾನಿಸಿದೆ. ಆದ್ದರಿಂದ ಈ ಸಾಮಾನ್ಯ ಸಭೆಯಲ್ಲಿ (ಅ. 27ರ ಸಾಮಾನ್ಯ ಸಭೆ) ಈ ವಿಷಯವನ್ನು ಚರ್ಚಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸುತ್ತೇವೆ. ಪ್ರತ್ಯೇಕ ಒಕ್ಕೂಟ ರಚನೆಗೆ ಆಗ್ರಹಿಸುತ್ತೇವೆ. ವಿಭಜನೆ ಬೇಡ ಎಂದು ನಿರ್ಣಯ ಮಂಡಿಸಿದರೆ ಇದಕ್ಕೆ ನಮ್ಮ ವಿರೋಧ ದಾಖಲಿಸಲು ಮನವಿ ಮಾಡುತ್ತೇವೆ’ ಎಂದು ಡೇರಿ ಕಾರ್ಯದರ್ಶಿಗಳಿಂದ ಬಿಜೆಪಿ ಮುಖಂಡರು ಸಹಿ
ಪಡೆದಿದ್ದರು.

ಸಚಿವರು, ಶಾಸಕರು, ಸಹಕಾರಿ ಧುರೀಣರು, ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದ್ದ ವಿಭಜನೆಯ ವಿಚಾರ ಈಗ ಡೇರಿ ಅಂಗಳಕ್ಕೆ ಕಾಲಿಟ್ಟಿದೆ. ಅ. 27ರಂದು ನಡೆಯುವ ಸಾಮಾನ್ಯ ಸಭೆಯಲ್ಲಿ ಒಕ್ಕೂಟ ವಿಭಜನೆಯ ಪರ ಜಿಲ್ಲೆಯ ಎಷ್ಟು ಡೇರಿಗಳು ಇವೆ, ವಿರುದ್ಧ ಎಷ್ಟು ಸಂಘಗಳು ಇವೆ ಎನ್ನುವುದು ಪ್ರಸ್ತಾಪವಾಗುವ ಸಾಧ್ಯತೆ ಇದೆ.

ಪ್ರತ್ಯೇಕವಾದರೆ ಅನುಕೂಲ
ಕೋಚಿಮುಲ್ ಪ್ರತ್ಯೇಕವಾದರೆ ಅನುಕೂಲ. ನಾವು ಒಕ್ಕೂಟ ಕೆಲಸ ಕಾರ್ಯಗಳಿಗೆ ಕೋಲಾರಕ್ಕೆ ಹೋಗಬೇಕು ಎಂದರೆ ಕಷ್ಟ. ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 14 ವರ್ಷಗಳು ಪೂರ್ಣವಾಗಿದೆ. ಜಿಲ್ಲೆಯು ಸ್ವಂತ ಅಸ್ತಿತ್ವವನ್ನು ಹೊಂದಿದೆ. ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟವಾಗಬೇಕು. ಕೋಚಿಮುಲ್ ಅಧ್ಯಕ್ಷ ಕೆ.ವೈ. ನಂಜೇಗೌಡ ಅವರಲ್ಲಿಯೂ ಈ ವಿಚಾರವಾಗಿ ಮನವಿ ಮಾಡುತ್ತೇವೆ ಎನ್ನುತ್ತಾರೆ ಶಿಡ್ಲಘಟ್ಟ ತಾಲ್ಲೂಕು ವರದನಾಯಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದೇವರಾಜು.

ಪ್ರತಿಷ್ಠೆಗಾಗಿ ವಿಭಜನೆ ಬೇಡ
ರಾಜಕೀಯ ಪ್ರತಿಷ್ಠೆಗಾಗಿ ಕೋಚಿಮುಲ್ ವಿಭಜನೆಗೆ ಪ್ರಯತ್ನಗಳು ನಡೆಯುತ್ತಿವೆ. ವಿಭಜನೆಯಾದರೆ ಅಧ್ಯಕ್ಷರಾಗಬಹುದು, ನಿರ್ದೇಶಕ ಸ್ಥಾನಗಳು ಹೆಚ್ಚುತ್ತವೆ... ಹೀಗೆ ನಾನಾ ರಾಜಕೀಯ ಲೆಕ್ಕಾಚಾರಗಳು ಸಹ ಇವೆ. ವಿಭಜನೆಯಾದರೆ ಹೈನುಗಾರರ ಬದುಕು ಹಸನುಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಒಂದು ವೇಳೆ ಸಹಕಾರ ಧುರೀಣರ ಉದ್ಧಾರಕ್ಕೆ ಈ ವಿಭಜನೆ ಕಾರಣವಾಗುವುದಾದರೆ ಈಗ ಇರುವಂತೆಯೇ ಮುಂದುವರಿಯಲಿ. ಪತ್ರಿಕೆಯಲ್ಲಿ ನಮ್ಮ ಹೆಸರು ಪ್ರಕಟವಾದರೆ ನಮ್ಮ ಮೇಲೆ ಮುಗಿಬೀಳುತ್ತಾರೆ ಎಂದು ಗೌರಿಬಿದನೂರು ತಾಲ್ಲೂಕಿನ ಡೇರಿಯೊಂದರ ಅಧ್ಯಕ್ಷರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT