ಚೇಳೂರು: ತಾಲ್ಲೂಕಿನ ಸೋಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬರಪಲ್ಲಿ- ರಾಚವಾರಪಲ್ಲಿ ಸಂಪರ್ಕ ರಸ್ತೆಗೆ ಡಾಂಬರು ಭಾಗ್ಯವಿಲ್ಲದ ಕಾರಣ ಕುರುಬರಪಲ್ಲಿ ಹಾಗೂ ಚಿನ್ನಗಾನಪಲ್ಲಿ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಂತೆ ಈ ರಸ್ತೆ ಗೋಚರಿಸುತ್ತಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕುರುಬರಪಲ್ಲಿ ಗ್ರಾಮದಿಂದ ಚಿನ್ನಗಾನಪಲ್ಲಿ ಗ್ರಾಮದವರೆಗಿನ ರಸ್ತೆಯನ್ನು ದುರಸ್ತಿ ಮಾಡುವ ನೆಪದಲ್ಲಿ ಅಧಿಕಾರಿಗಳು ಸುಮಾರು 5 ವರ್ಷಗಳ ಹಿಂದೆ ರಸ್ತೆಯನ್ನು ಅಗೆದು, ಜಲ್ಲಿಕಲ್ಲು ಸುರಿದು ಹೋಗಿದ್ದರು. ಆದರೆ, ಕಾಮಗಾರಿ ಆರಂಭವಾಗಿ ಅರ್ಧ ದಶಕ ಉರುಳಿದರೂ ಅಧಿಕಾರಿಗಳು ಮಾತ್ರ ಇತ್ತ ಮುಖ ಮಾಡಿಲ್ಲ. ಅರ್ಧಕ್ಕೆ ನಿಂತಿರುವ ಈ ಕಾಮಗಾರಿಯಿಂದಾಗಿ ರಸ್ತೆಯುದ್ದಕ್ಕೂ ಚೂಪಾದ ಜಲ್ಲಿಕಲ್ಲುಗಳು ಎದ್ದು ನಿಂತಿವೆ. ಇದು ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.

ಚಿನ್ನಗಾನಪಲ್ಲಿ ಗ್ರಾಮದಿಂದ ರಾಚವಾರಪಲ್ಲಿ ಮುಖ್ಯ ರಸ್ತೆಯವರೆಗಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈ ಮಾರ್ಗದಲ್ಲಿ ಸಂಪೂರ್ಣವಾಗಿ ಡಾಂಬರು ಕಿತ್ತು ಹೋಗಿದೆ. ರಸ್ತೆ ಯಾವುದು, ಗುಂಡಿ ಯಾವುದು ಎಂದು ಗುರುತಿಸುವುದೇ ಕಷ್ಟವಾಗಿದೆ. ಬೃಹತ್ ಗಾತ್ರದ ಗುಂಡಿಗಳಿಂದಾಗಿ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದು ಅದೆಷ್ಟೋ ಅಪಘಾತಗಳು ಸಂಭವಿಸಿವೆ. ಗರ್ಭಿಣಿಯರು, ವೃದ್ಧರು ಹಾಗೂ ಶಾಲಾ ಮಕ್ಕಳು ಈ ರಸ್ತೆಯಲ್ಲಿ ಓಡಾಡಲು ಭೀತಿಪಡುವಂತಾಗಿದೆ. ತೇಪೆ ಹಾಕುವ ಕನಿಷ್ಠ ಸೌಜನ್ಯವನ್ನೂ ಲೋಕೋಪಯೋಗಿ ಇಲಾಖೆ ತೋರುತ್ತಿಲ್ಲ ಎನ್ನುವುದು ಸಾರ್ವಜನಿಕರ ಪ್ರಮುಖ ಆರೋಪವಾಗಿದೆ.

ಸಾಮಾನ್ಯವಾಗಿ 5 ಕಿಲೋಮೀಟರ್ ದೂರವನ್ನು ಕ್ರಮಿಸಲು ವಾಹನಗಳಲ್ಲಿ ಗರಿಷ್ಠ 10 ರಿಂದ 15 ನಿಮಿಷ ಸಾಕು. ಆದರೆ, ಈ ನರಕಸದೃಶ ರಸ್ತೆಯಲ್ಲಿ ಕೇವಲ 5 ಕಿಲೋಮೀಟರ್ ಪ್ರಯಾಣಿಸಲು ಬರೋಬ್ಬರಿ ಒಂದು ಗಂಟೆ ಸಮಯ ಹಿಡಿಯುತ್ತಿದೆ. ಗುಂಡಿ ಹಾಗೂ ಜಲ್ಲಿಕಲ್ಲುಗಳಿಂದಾಗಿ ನಿತ್ಯವೂ ವಾಹನಗಳ ಟೈರ್ ಪಂಕ್ಚರ್ ಆಗುವುದು, ಎಂಜಿನ್ ಕೆಡುವುದು ಸಾಮಾನ್ಯವಾಗಿದೆ. ಕೆಲಸ ಕಾರ್ಯಗಳಿಗೆ, ಕಚೇರಿಗಳಿಗೆ ಮತ್ತು ಆಸ್ಪತ್ರೆಗಳಿಗೆ ಹೋಗುವವರು ಸಕಾಲಕ್ಕೆ ತಲುಪಲಾಗದೆ ನಿತ್ಯವೂ ಪರದಾಡುತ್ತಿದ್ದಾರೆ.

ಚುನಾವಣೆ ಬಂದಾಗ ಮತ ಕೇಳಲು ಸಾಲು ಸಾಲಾಗಿ ಬರುವ ಜನಪ್ರತಿನಿಧಿಗಳು, ಗೆದ್ದ ನಂತರ ಇತ್ತ ತಲೆಹಾಕಿಯೂ ಮಲಗುತ್ತಿಲ್ಲ. ಗ್ರಾಮಸ್ಥರು ಹಲವು ಬಾರಿ ಮನವಿ ನೀಡಿದರೂ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ವ್ಯವಸ್ಥೆಯ ಈ ಉದಾಸೀನ ಧೋರಣೆ ಸಾರ್ವಜನಿಕರ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಕೂಡಲೇ ಕುರುಬರಪಲ್ಲಿ - ರಾಚವಾರಪಲ್ಲಿ ಸಂಪರ್ಕ ರಸ್ತೆಯ ಗುಂಡಿಗಳನ್ನು ಮುಚ್ಚಿ, ಸಂಪೂರ್ಣ ಡಾಂಬರೀಕರಣ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಗ್ರಾಮಸ್ಥರು ಒಟ್ಟಾಗಿ ರಸ್ತೆ ತಡೆ ನಡೆಸಿ, ಉಗ್ರ ಹೋರಾಟ ಮಾಡುವುದಾಗಿ ಹಾಗೂ ಮುಂಬರುವ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.