ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಮುಂದುವರಿದ ಕೋವಿಡ್‌ ಅಟ್ಟಹಾಸ, ಸೋಂಕಿತರು 11ಕ್ಕೆ ಏರಿಕೆ

ಪರಿಸ್ಥಿತಿ ಹತೋಟಿಗೆ ತರಲು ಜಿಲ್ಲಾಡಳಿತದ ಹರಸಾಹಸ
Last Updated 8 ಏಪ್ರಿಲ್ 2020, 11:17 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್‌ 19 ಪ್ರಕರಣಗಳು ಏರುಮುಖವಾಗುತ್ತಿದ್ದು, ಬುಧವಾರ ಕೋವಿಡ್‌ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾಗಿ ಜಿಲ್ಲೆಯ ನಾಗರಿಕರಲ್ಲಿ ಮತ್ತಷ್ಟು ತಲ್ಲಣ ಮೂಡಿಸಿದೆ.

ಕಳೆದ ಒಂದು ವಾರದಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗದೆ ಜನರು ನಿಟ್ಟುಸಿರು ಬಿಡುವ ಮುನ್ನವೇ ಇದೀಗ ನವದೆಹಲಿಯ ನಿಜಾಮುದ್ದೀನ್‌ನಲ್ಲಿ ಕಳೆದ ತಿಂಗಳು ನಡೆದ ತಬ್ಲಿಗಿ ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಗೌರಿಬಿದನೂರು ತಾಲ್ಲೂಕಿನ ಹಿರೇಬಿದನೂರಿನ 23 ವರ್ಷದ ಯುವಕನೊಬ್ಬನಿಗೆ ಕೋವಿಡ್ 19 ಸೋಂಕು ತಗಲಿರುವುದು ಬುಧವಾರ ದೃಢಪಟ್ಟಿದೆ.

ಮೆಕ್ಕಾ ಯಾತ್ರೆ ಕೈಗೊಂಡ ಗೌರಿಬಿದನೂರಿನ ನಾಲ್ಕು ಜನರಲ್ಲಿ ಮಾರ್ಚ್‌ ಕೊನೆಯ ವಾರದಲ್ಲಿ ಕೋವಿಡ್‌ ಪತ್ತೆಯಾಗಿತ್ತು. ಈ ಪೈಕಿ 72 ವರ್ಷದ ವೃದ್ದೆಯೊಬ್ಬರು ಮಾರ್ಚ್‌ 25 ರಂದು ಮೃತಪಟ್ಟಿದ್ದರು. ಬಳಿಕ, ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಪೈಕಿ ಆರು ಜನರಲ್ಲಿ ಸೋಂಕಿರುವುದು ಪತ್ತೆಯಾಗಿತ್ತು.

ಕೋವಿಡ್‌ ಸೋಂಕಿತರ ಪೈಕಿ ಬೆಂಗಳೂರಿನ ರಾಜೀವ್‌ ಗಾಂಧಿ ಎದೆರೋಗ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೌರಿಬಿದನೂರಿನ 65 ವಯೋಮಾನದ ಮಹಿಳೆಯೊಬ್ಬರು ಗುಣಮುಖರಾಗಿ ಇತ್ತೀಚೆಗಷ್ಟೇ ಮನೆಗೆ ಮರಳಿದ್ದರು. ಇದು ಸಾರ್ವಜನಿಕರಲ್ಲಿ ಸಮಾಧಾನ ತರುವ ಮುನ್ನವೇ ಮತ್ತೊಂದು ಪ್ರಕರಣ ವರದಿಯಾಗಿದ್ದು, ಆತಂಕ ಸೃಷ್ಟಿಸಿದೆ.

ಸೋಮವಾರ ದೃಢಪಟ್ಟ ಪ್ರಕರಣದ ಸೋಂಕಿತ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದಲ್ಲಿರುವ ಕೋವಿಡ್‌ ವಾರ್ಡ್‌ಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕಿತನ ತಾಯಿ, ಸ್ನೇಹಿತ, ಅಕ್ಕ, ಭಾವ ಮತ್ತವರ ಇಬ್ಬರು ಮಕ್ಕಳನ್ನು ಕ್ವಾರಂಟೈನ್‌ಗೆ ಒಳಪಡಿಸಿ, ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಸಿಬ್ಬಂದಿ ಬುಧವಾರ ಸೋಂಕಿತ ವ್ಯಕ್ತಿಯ ಮನೆ ಸುತ್ತಲಿನ ಪರಿಸರದಲ್ಲಿ ಸಮೀಕ್ಷೆ ನಡೆಸಿದ್ದು, ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಮಾಹಿತಿ ಕಲೆ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ.

ಜತೆಗೆ ಹಿರಿಯ ಅಧಿಕಾರಿಗಳು ಪರಿಸ್ಥಿತಿ ಹತೋಟಿಗೆ ತರುವ ಕ್ರಮಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಪೊಲೀಸರು ಕೂಡ ಲಾಕ್‌ಡೌನ್‌ ಮತ್ತಷ್ಟು ಬಿಗಿಗೊಳಿಸಿ, ಜನರು ಮನೆಯಿಂದ ಹೊರಬರದಂತೆ ಕಾವಲು ಕಾಯುತ್ತಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ರಾಜ್ಯ ಸರ್ಕಾರವು ಇತ್ತೀಚೆಗೆ ಗೌರಿಬಿದನೂರು ತಾಲ್ಲೂಕಿನವರೇ ಆದ ಸಕಾಲ ಮಿಷನ್ ಹೆಚ್ಚುವರಿ ನಿರ್ದೇಶಕ ಬಿ.ಎನ್.ವರಪ್ರಸಾದ್ ರೆಡ್ಡಿ ಅವರನ್ನು ಜಿಲ್ಲೆಗೆ ಕೋವಿಡ್‌ ಉಸ್ತುವಾರಿ ವಿಶೇಷ ಅಧಿಕಾರಿಯಾಗಿ ನಿಯೋಜನೆ ಮಾಡಿದೆ. ಜತೆಗೆ, ಜಿಲ್ಲಾಡಳಿತ ಗೌರಿಬಿದನೂರು ಸೇರಿದಂತೆ ವಿವಿಧೆಡೆ ಕೊರೊನಾ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಟನಲ್‌ಗಳನ್ನು ಕೂಡ ಸ್ಥಾಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT