ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಮಾರ್ಗಸೂಚಿ ಪಾಲನೆಯಲ್ಲಿ ‘ಅಂತರ’

ನಾಮ್‌ಕಾವಸ್ತೆ ಎಂಬಂತಾದ ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವಿಕೆ ನಿಯಮಗಳು
Last Updated 31 ಅಕ್ಟೋಬರ್ 2020, 4:18 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನೇ ದಿನೇ ಏರುಮುಖವಾಗುತ್ತ 11 ಸಾವಿರದ ಗಡಿ ದಾಟಿದರೂ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು ಧರಿಸದೆ, ಅಂತರ ಕಾಯ್ದುಕೊಳ್ಳದೆ ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಬೇಜವಾಬ್ದಾರಿ ಪ್ರದರ್ಶನದ ನಡವಳಿಕೆ ಹೆಚ್ಚುತ್ತಿರುವುದು ಪ್ರಜ್ಞಾವಂತರ ಬೇಸರ ತರಿಸಿದೆ.

ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಸಿದ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಒಂದೇ ಸಮನೆ ಹೆಚ್ಚಳವಾಗುತ್ತಿದೆ. ಇನ್ನೊಂದೆಡೆ ಈವರೆಗೆ ವರದಿಯಾದ ಪ್ರಕರಣಗಳಲ್ಲಿ ಶೇ 97 ರಷ್ಟು ಮಂದಿಯಲ್ಲಿ ಸೋಂಕಿನ ಲಕ್ಷಣಗಳೇ ಕಾಣಿಸಿಕೊಂಡಿಲ್ಲ. ಇದರಿಂದಾಗಿ ಅಂತವರ ಸಂಪರ್ಕಕ್ಕೆ ಬಂದವರಲ್ಲಿ ಕೆಲವರು ಸೋಂಕಿತರಾಗಿ ಆಸ್ಪತ್ರೆಗಳನ್ನು ಸೇರುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 109 ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ.

ಪರಿಸ್ಥಿತಿ ಹೀಗಿದ್ದರೂ ವಾಣಿಜ್ಯ ಚಟುವಟಿಕೆಗಳಿಗೆ ಹಿನ್ನಡೆಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಲಾಕ್‌ಡೌನ್‌ ಸಡಿಲಿಸಿದೆ. ವಿವಿಧ ವಲಯಗಳಿಗೆ ಸೇವೆ ಪುನರಾರಂಭಿಸಲು ಷರತ್ತುಬದ್ಧ ಅನುಮತಿಯನ್ನು ನೀಡುವ ಜತೆಗೆ ಪ್ರತ್ಯೇಕ ನಿಯಮಗಳನ್ನು ರೂಪಿಸಿ, ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದೆ. ಆದರೆ, ಈಗ ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ವಿವಿಧ ನಿಯಮಗಳು ನಾಮ್‌ಕಾವಸ್ತೆ ಎಂಬಂತಾಗಿದೆ.

ಲಾಕ್‌ಡೌನ್ ಸಡಿಲಿಕೆಯ ಬಳಿಕ ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಕೆಲವೊಂದು ನಿಯಮ ಹಾಗೂ ನಿರ್ಬಂಧಗಳೊಂದಿಗೆ ಸರ್ಕಾರ ವಿವಿಧ ಚಟುವಟಿಕೆಗಳಿಗೆ ಅವಕಾಶ ನೀಡಿದೆ. ಆದರೆ, ಮಾರುಕಟ್ಟೆಗಳು, ಕಚೇರಿಗಳು, ಸಾರ್ವಜನಿಕ ಸ್ಥಳಗಳು ಸೇರಿದಂತೆ ವಿವಿಧೆಡೆ ಸಾಮಾನ್ಯ ನಿಯಮಗಳು ಕೂಡ ಪಾಲನೆಯಾಗುತ್ತಿಲ್ಲ.

ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಏ.15 ರಂದು ಮಾಸ್ಕ್ ಧರಿಸಿ ಓಡಾಡುವುದನ್ನು ಕಡ್ಡಾಯಗೊಳಿಸಿದೆ. ಕೇಂದ್ರದ ಆದೇಶದಂತೆ ಕರ್ನಾಟಕ ರಾಜ್ಯ ಪೌರಸಭೆಗಳ ಅಧಿನಿಯಮದ ಕಲಮು248 ಮತ್ತು 246 ಅಡಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.

ಕೇಂದ್ರದ ಸರ್ಕಾರದ ಆದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಾಸ್ಕ್‌ ಕಡ್ಡಾಯಗೊಳಿಸಿ, ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು ನಗರಾಭಿವೃದ್ಧಿ ಕೋಶಕ್ಕೆ ವಹಿಸಿದೆ. ಪರಿಣಾಮ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಸ್ಕ್‌ ಧರಿಸದೆ ಓಡಾಡುವವರಿಗೆ ದಂಡ ವಿಧಿಸುವ ಚಿತ್ರಣ ಆಗಾಗ ಕಂಡುಬರುತ್ತಿದೆ.

ಮೊದಲ ಬಾರಿಗೆ ನಿಯಮ ಉಲ್ಲಂಘಿಸಿ ಬೇಜವಾಬ್ದಾರಿ ಪ್ರದರ್ಶನ ಮಾಡಿದರೆ ₹ 100 ದಂಡ ವಿಧಿಸಲಾಗುವುದು. ಮತ್ತೆ ಅದೇ ವ್ಯಕ್ತಿ ನಿಯಮ ಉಲ್ಲಂಘನೆ ಮಾಡಿದರೆ ದಂಡದ ಮೊತ್ತವನ್ನು ದ್ವಿಗುಣಗೊಳಿಸಿ ₹ 200 ವಿಧಿಸಲಾಗುವುದು. ಪದೇ ಪದೇ ನಿಯಮ ಉಲ್ಲಂಘಿಸುವ ಜನರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಆದರೂ, ಜಿಲ್ಲೆಯಲ್ಲಿ ಜನರು ಮಾಸ್ಕ್‌ ಧರಿಸದೇ ಎಲ್ಲೆಂದರಲ್ಲಿ ಓಡಾಡುವುದು, ಅಂತರ ಕಾಯ್ದುಕೊಳ್ಳದೆ ಗುಂಪುಗೂಡುವುದು ಸಾಮಾನ್ಯ ಚಿತ್ರಣವಾಗಿದೆ. ವಿಶೇಷ ಎಂದರೆ ಕೋವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಜನಸಾಮಾನ್ಯರಿಗೆ ಆದರ್ಶವಾಗಿರಬೇಕಾದ ಜನಪ್ರತಿನಿಧಿಗಳು, ಶಾಸಕರು, ಸಚಿವರೇ ಸಾರ್ವಜನಿಕ ಬದುಕಿನಲ್ಲಿ ಬೇಕಾಬಿಟ್ಟಿ ವರ್ತಿಸುತ್ತಿರುವುದು ಆಗಾಗ ಚರ್ಚೆಗೆ ಎಡೆ ಮಾಡುತ್ತಿದೆ.

ಮಾರ್ಗಸೂಚಿ ಉಲ್ಲಂಘಿಸುವ ಜನಸಾಮಾನ್ಯರಿಗೆ ಮುಲಾಜಿಲ್ಲದೆ ದಂಡ ವಿಧಿಸುವ ಅಧಿಕಾರಿಗಳು ಶಾಸಕರು, ಸಚಿವರು, ರಾಜಕಾರಣಿಗಳು, ಮರಿ ಪುಢಾರಿಗಳ ಸ್ವೆಚ್ಛಾ ವರ್ತನೆ ಕಂಡರೂ ಕಾಣದಂತೆ ಜಾಣ ಕುರುಡು ಪ್ರದರ್ಶನ ಮಾಡುತ್ತಿರುವುದು ಸಹ ಪ್ರಜ್ಞಾವಂತರ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಪ್ರಜ್ಞೆ ಕಣ್ಮರೆ

ಐದಾರು ತಿಂಗಳ ಹಿಂದೆ ಒಂದಿಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮನೆಯಿಂದ ಹೊರಗೆ ಬರಲು ಜನರು ಭಯಪಡುತ್ತಿದ್ದರು. ಈಗ ಮಾರ್ಗಸೂಚಿ ‍ಪಾಲಿಸುತ್ತಿಲ್ಲ. ಯಾವುದೇ ಭಯ ಇಲ್ಲದೆ ನಿರ್ಭಯವಾಗಿ ಓಡಾಡುತ್ತಾ ದೈನಂದಿನ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಜನರ ಈ ವರ್ತನೆಯು ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ.

ಮಾಸ್ಕ್‌ ಧರಿಸದಿದ್ದರೆ ಪೊಲೀಸರು ದಂಡ ವಸೂಲಿ ಮಾಡುತ್ತಾರೆ ಎಂಬ ಏಕೈಕ ಕಾರಣದಿಂದ ಬೆರಳೆಣಿಕೆಯಷ್ಟು ಮಂದಿ ಮಾಸ್ಕ್‌ ಧರಿಸುತ್ತಾರೆ. ಅದನ್ನು ಹೊರತುಪಡಿಸಿದರೆ ಅಂತರ ಕಾಯ್ದುಕೊಳ್ಳಬೇಕು; ಎಲ್ಲೆಂದರಲ್ಲಿ ಉಗುಳಬಾರದು ಎಂಬ ಸಾಮಾಜಿಕ ಪ್ರಜ್ಞೆ ಕಣ್ಮರೆಯಾಗಿದೆ.

ಪ್ರತಿದಿನ ವ್ಯಾಪಾರ ವಹಿವಾಟು ನಡೆಸುವ ಬಹುತೇಕ ಹೋಟೆಲ್, ಕಿರಾಣಿ ಅಂಗಡಿ, ಜವಳಿ ಅಂಗಡಿ, ಆಭರಣದ ಅಂಗಡಿಗಳ ಮಾಲೀಕರು ಸ್ಯಾನಿಟೈಜ್ ಮರೆತಿದ್ದಾರೆ. ಬೆರಳೆಣಿಕೆಯಷ್ಟು ಅಂಗಡಿಗಳಲ್ಲಿ ಮಾತ್ರ ಸೋಂಕಿನ ಕಡಿವಾಣಕ್ಕೆ ನಿಯಮ ಪಾಲನೆಯಾಗುತ್ತಿದೆ. ತರಕಾರಿ ಮಾರುಕಟ್ಟೆ, ಸಂತೆ ನಡೆಯುವ ಸಂದರ್ಭದಲ್ಲಿಯೂ ನಾಗರಿಕರು ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಇದರಿಂದ ಸೋಂಕು ಉಲ್ಪಣಿಸುತ್ತಿದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ಏನಂತಾರೆ ನಾಗರಿಕರು?

ಜನಪ್ರತಿನಿಧಿಗಳೂ ಕಾಳಜಿ ವಹಿಸಲಿ

ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಲೇಬಾರದು. ಅದು ನಮ್ಮೆಲ್ಲರ ರಕ್ಷಣೆಗಾಗಿಯೇ ಮಾಡಿರುವುದು. ಮಾಸ್ಕ್ ಸರಿಯಾಗಿ ಮೂಗು ಮತ್ತು ಬಾಯಿ ಮುಚ್ಚುವ ರೀತಿಯಲ್ಲಿಯೇ ಧರಿಸಬೇಕು. ಜತೆಗೆ, ಅಂತರವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳುವ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜನಪ್ರತಿನಿಧಿಗಳು ಸಹ ಕಾಳಜಿ ವಹಿಸಬೇಕು.

ಮುಕೇಶ್, ಶಿಡ್ಲಘಟ್ಟ

ಉದಾಸೀನತೆ ಸಲ್ಲದು

ಕೋವಿಡ್‌ ವಿಚಾರದಲ್ಲಿ ಜನರು ಮತ್ತು ಜನಪ್ರತಿನಿಧಿಗಳು ಉದಾಸೀನತೆಯ ಮನೋಭಾವನೆ ಬಿಡಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಅಂತರ ಕಾಪಾಡಿಕೊಳ್ಳಬೇಕು. ಜನಪ್ರತಿನಿಧಿಗಳು ಸಾರ್ವಜನಿಕ ಬದುಕಿನಲ್ಲಿ ಜನಸಾಮಾನ್ಯರಿಗೆ ಮಾದರಿಯಾಗುವಂತಹ ನಡವಳಿಕೆ ರೂಢಿಸಿಕೊಳ್ಳಬೇಕಾದ ತುರ್ತಿದೆ.

ವಿ.ವನಿತಾದೇವಿ, ಬಾಗೇಪಲ್ಲಿ

ಪ್ರತಿಯೊಬ್ಬರ ಜವಾಬ್ದಾರಿ

ಸೋಂಕಿಗೆ ಕಡಿವಾಣ ಹಾಕುವುದು ಆರೋಗ್ಯ ಇಲಾಖೆ, ಪುರಸಭೆಯ ಜವಾಬ್ದಾರಿಯಲ್ಲ. ಇದು ಎಲ್ಲರ ಜವಾಬ್ದಾರಿ. ಪ್ರತಿಯೊಬ್ಬರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ ಎನ್ನುವಂತಿಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಸೋಂಕು ತಡೆ ಸಾಧ್ಯ.

ಯಲುವಹಳ್ಳಿ ಸೊಣ್ಣೇಗೌಡ, ಚಿಕ್ಕಬಳ್ಳಾಪುರ

ಎಲ್ಲರೂ ಅರ್ಥ ಮಾಡಿಕೊಳ್ಳಬೇಕು

ಮಾಸ್ಕ್ ಧರಿಸಿ ಎಂದು ಹೇಳುವುದು ನಮ್ಮ ಆರೋಗ್ಯ ರಕ್ಷಣೆಗೆ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಒಬ್ಬರಿಗೆ ಕೊರೊನಾ ಸೋಂಕು ತಗುಲಿದರೆ ಕುಟುಂಬದವರಿಗೆಲ್ಲಾ ಹರಡುತ್ತದೆ. ಖಾಸಗಿಯಾಗಲೀ ಸರ್ಕಾರಿ ಆಗಲೀ ಕಾರ್ಯಕ್ರಮಗಳಲ್ಲಿ ಜನರು ಅಂತರ ಕಾಪಾಡಿಕೊಳ್ಳಲೇಬೇಕು.

ಭರತ್, ಶಿಡ್ಲಘಟ್ಟ

ಜನಪ್ರತಿನಿಧಿಗಳಿಗೆ ಬದ್ಧತೆ ಇರಲಿ

ನಾಗರಿಕರ ಬದುಕನ್ನು ಉಳಿಸಿ ಇತರರಿಗೆ ತೊಂದರೆಯಾಗದಂತೆ ಕಾಪಾಡುವ ಉದ್ದೇಶದಿಂದ ಸರ್ಕಾರ ಕೋವಿಡ್‌ ಮಾರ್ಗಸೂಚಿ ಮತ್ತು ನಿಯಮಗಳನ್ನು ಜಾರಿಗೊಳಿಸಿದೆ. ಆದರೆ ಇದರ ಬಗ್ಗೆ ಜನಪ್ರತಿನಿಧಿಗಳಿಗೆ ಬದ್ಧತೆ ಇರಬೇಕಾಗಿದೆ. ಇತರರಿಗೂ ಇದರ ಅರಿವು ಮೂಡಿಸುವುದು ಅವರ ಜವಾಬ್ದಾರಿಯಾಗಿದೆ.

ಸುಜಯ್, ಬಂದಾರ್ಲಹಳ್ಳಿ

ವೈಜ್ಞಾನಿಕ ಮನೋಭಾವ ಬೆಳೆಸಲಿ

ಸ್ವಾತಂತ್ರ್ಯ ದೊರೆತು ಏಳು ದಶಕಗಳು ಕಳೆದರೂ ಇಂದಿಗೂ ನಮ್ಮ ಜನರಲ್ಲಿ ಆಳುವವರು ವೈಜ್ಞಾನಿಕ ಮನೋಭಾವ ಬೆಳೆಸುವ ಕೆಲಸ ಮಾಡಿಲ್ಲ. ಅದರ ಪರಿಣಾಮ, ಕೋವಿಡ್‌ ಕಾಲದಲ್ಲಿ ಕಾಣುತ್ತಿದ್ದೇವೆ. ಮೊದಲು ಸಮಾಜದ ದೃಷ್ಠಿಕೋನ ಬದಲಾಗಬೇಕಿದೆ. ಆ ನಿಟ್ಟಿನಲ್ಲಿ ಮೂಲಭೂತ ಕರ್ತವ್ಯಗಳಲ್ಲಿ ಒಂದಾದ ಅನುಚ್ಛೇದ 51 ಎ(ಎಚ್) ರಂತೆ ಜನರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕಿದೆ. ಆಗ ಸರ್ಕಾರ ದಂಡ ವಿಧಿಸುವಂತಹ ಪ್ರಮೇಯಗಳು ಬರುವುದಿಲ್ಲ.

ಡಾ.ಅನಿಲ್ ಕುಮಾರ್, ಬಾಗೇಪಲ್ಲಿ

ಜನದಟ್ಟಣೆ ಮೇಲೆ ನಿಗಾ ಇರಲಿ

ಜನರ ಜೀವನದ ಜತೆ ಕಣ್ಣಾಮುಚ್ಚಾಲೆ ಆಡುತ್ತಿರುವ ಕೋವಿಡ್‌ ತಡೆಯುವುದು
ಎಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ
ಜನಪ್ರತಿನಿಧಿಗಳೂ ಇದರ ತೀವ್ರತೆಯನ್ನು ಅರಿತು ಸಭೆ, ಸಮಾರಂಭಗಳನ್ನು ನಡೆಸದಂತೆ
ಮತ್ತು ಜನದಟ್ಟಣೆ ಸೇರದಂತೆ ನೋಡಿ
ಕೊಳ್ಳಬೇಕಿದೆ.

ಚಂದ್ರಕಲಾ, ಗೌರಿಬಿದನೂರು

ರಾಜಕಾರಣಿಗಳೇ ಪಾಲಿಸದಿದ್ದರೆ ಹೇಗೆ?

ಕೋವಿಡ್‌ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ, ರಾಜಕಾರಣಿಗಳು, ಜನಪ್ರತಿನಿಧಿಗಳು, ಮುಖಂಡರು ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕು. ನಿಯಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿರುವ ಸರ್ಕಾರ ಮತ್ತು ಆಡಳಿವರ್ಗದ ನಾಯಕರು, ಮುಖಂಡರು ಸೂಚನೆಗಳನ್ನು ಪಾಲಿಸಬೇಕು. ತಾವೇ ಪಾಲಿಸದಿದ್ದರೆ ಇತರರಿಗೆ ಹೇಗೆ ಜಾಗೃತಿ ಮೂಡಿಸಲು ಸಾಧ್ಯ?

ಕೈವಾರ ಶ್ರೀನಿವಾಸ್, ಚಿಂತಾಮಣಿ

ರಾಜಕಾರಣಿಗಳನ್ನು ಯಾಕೆ ಪ್ರಶ್ನಿಸುವುದಿಲ್ಲ?

ಬಡವರು, ಅನಕ್ಷರಸ್ಥರು ನಿಯಮ ಪಾಲಿಸದೆ ಇರುವಾಗ ಗದರಿ ದಂಡ ಹಾಕುವ ಪೊಲೀಸರು, ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಅದೇ ಜನಪ್ರತಿನಿಧಿಗಳು ನಿಯಮ ಉಲ್ಲಂಘಿಸಿದಾಗ ಯಾಕೆ ಪ್ರಶ್ನಿಸುವುದಿಲ್ಲ? ದಂಡ ಹಾಕುವುದಿಲ್ಲ? ನೆಲದ ಕಾನೂನು ಎಲ್ಲರಿಗೂ ಒಂದೇ. ಅಧಿಕಾರಿಗಳು ಮೊದಲು ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆಯಾಗುವಂತೆ ನೋಡಿಕೊಳ್ಳಲಿ. ಬಳಿಕ ಜನಸಾಮಾನ್ಯರಿಗೆ ದಂಡ ವಿಧಿಸಲಿ.

ನಾರಮಾಕಲಹಳ್ಳಿ ಕೃಷ್ಣ, ಚಿಂತಾಮಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT