ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿಗೆ ಸೋಂಕಿದ ಕೋವಿಡ್‌ ಸೋಂಕು

ಕೋವಿಡ್‌ ಸೋಂಕಿತರ ಸಂಖ್ಯೆ 22ಕ್ಕೆ ಏರಿಕೆ: ಜಿಲ್ಲೆಯ ಮೂರನೇ ನಗರದಲ್ಲಿ ಮೂಡಿದ ತಲ್ಲಣ
Last Updated 9 ಮೇ 2020, 13:09 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಲಾಕ್‌ಡೌನ್‌ ನಿಯಮಾವಳಿ ಸಡಿಲಗೊಂಡುಗೊಂಡು ಜಿಲ್ಲೆಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಹೊತ್ತಿನಲ್ಲಿಯೇ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಶನಿವಾರ ಮೊದಲ ಬಾರಿಗೆ ಕೋವಿಡ್‌ 19 ಪ್ರಕರಣ ವರದಿಯಾಗಿ ತಲ್ಲಣ ಮೂಡಿಸಿದೆ.

ಚಿಂತಾಮಣಿಯ ಎನ್‌.ಆರ್.ಎಕ್ಸ್ಟೆನ್ಷನ್ ನಿವಾಸಿ, 71 ವರ್ಷದ ವ್ಯಕ್ತಿಯಲ್ಲಿ ಕೋವಿಡ್‌ ಇರುವುದು ಶನಿವಾರ ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

ಲಾಕ್‌ಡೌನ್‌ ಘೋಷಣೆಗೂ ಮುನ್ನ ಬೆಂಗಳೂರಿನ ವಿಜಯನಗರದಲ್ಲಿರುವ ಮಗಳ ಮನೆಯಲ್ಲಿದ್ದ ಎನ್‌.ಆರ್.ಎಕ್ಸ್ಟೆನ್ಷನ್ ನಿವಾಸಿ, ಏಪ್ರಿಲ್ 27 ರಂದು ಚಿಂತಾಮಣಿಗೆ ಮರಳಿ, ಮನೆಯಲ್ಲಿಯೇ ಸ್ವಯಂ ದಿಗ್ಭಂಧನಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

ಮೊಳಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದ ಅವರ ಪತ್ನಿ ಇತ್ತೀಚೆಗಷ್ಟೇ ಜ್ವರ ಕಾಣಿಸಿಕೊಂಡು ಮೃತಪಟ್ಟಿದ್ದರು. ಈ ವೇಳೆ ಆರೋಗ್ಯ ಇಲಾಖೆ ಅಧಿಕಾರಿಗಳು ಕುಟುಂಬದ ಏಳು ಸದಸ್ಯರ ಪೈಕಿ ಐದು ಜನರ ಗಂಟಲು ಮಾದರಿಗಳನ್ನು ಸಂಗ್ರಹಿಸಿ ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

ಪ್ರಯೋಗಾಲಯದ ವರದಿಯಲ್ಲಿ 71 ವರ್ಷದ ವ್ಯಕ್ತಿಯಲ್ಲಿ ಕೋವಿಡ್‌ ಇರುವುದು ದೃಢಪಟ್ಟ ಬೆನ್ನಲ್ಲೇ ಸೋಂಕಿತ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ಕೋವಿಡ್‌ ವಾರ್ಡ್‌ಗೆ ಸ್ಥಳಾಂತರಿಸಿ, ಅವರ ಕುಟುಂಬದ ನಾಲ್ಕು ಸದಸ್ಯರಿಗೆ ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಸೋಂಕಿತ ವ್ಯಕ್ತಿಯ ಕುಟುಂಬದಲ್ಲಿ ಇನ್ನೂ ಇಬ್ಬರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಧರಿಸಿದ್ದಾರೆ.

ಇದಕ್ಕೂ ಹಿಂದೆ ಚಿಕ್ಕಬಳ್ಳಾಪುರದ 17ನೇ ವಾರ್ಡ್‌ನ 30 ವರ್ಷದ ವ್ಯಕ್ತಿಯೊಬ್ಬರಲ್ಲಿ ಮೇ 4 ರಂದು ಕೋವಿಡ್‌ ಸೋಂಕು ಕಾಣಿಸಿಕೊಂಡಿತ್ತು.

ಜಿಲ್ಲೆಯಲ್ಲಿ ಈವರೆಗೆ ಗೌರಿಬಿದನೂರಿನ 12, ಚಿಕ್ಕಬಳ್ಳಾಪುರದ 9 ಮತ್ತು ಚಿಂತಾಮಣಿಯ ಒಬ್ಬ ಸೇರಿದಂತೆ 22 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ. ಈ ಪೈಕಿ ಇಬ್ಬರು (ಗೌರಿಬಿದನೂರು, ಚಿಕ್ಕಬಳ್ಳಾಪುರದ ತಲಾ ಒಬ್ಬರು) ಮೃತಪಟ್ಟಿದ್ದಾರೆ.

ಉಳಿದಂತೆ ಗೌರಿಬಿದನೂರಿನ 11 ಮತ್ತು ಚಿಕ್ಕಬಳ್ಳಾಪುರದ ನಾಲ್ಕು ಸೋಂಕಿತರು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ ಜಿಲ್ಲಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಆರು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಗೌರಿಬಿದನೂರು ಸೋಂಕು ಮುಕ್ತವಾಯಿತು ಎನ್ನುವ ಹೊತ್ತಿನಲ್ಲಿಯೇ ಚಿಕ್ಕಬಳ್ಳಾಪುರದಲ್ಲಿ ಕಾಣಿಸಿಕೊಂಡ ಕೋವಿಡ್‌ ಪ್ರಕರಣಗಳು ಜಿಲ್ಲಾಡಳಿತಕ್ಕೆ ತಲೆನೋವು ತಂದಿಟ್ಟಿದ್ದವು. ಇದೀಗ ಜಿಲ್ಲಾ ಕೇಂದ್ರದಲ್ಲಿ ಪರಿಸ್ಥಿತಿ ತಹಬದಿಗೆ ತರಲು ಪ್ರಯತ್ನಿಸುತ್ತಿರುವ ವೇಳೆಯಲ್ಲಿಯೇ ಮೂರನೇ ನಗರಕ್ಕೂ ಕೋವಿಡ್‌ ಕಾಲಿರಿಸಿರುವುದು ಅಧಿಕಾರಿಗಳಲ್ಲಿ ಕಳವಳ ಮೂಡಿಸಿದೆ.

ಮಾರ್ಚ್‌ನಲ್ಲಿ ಲಾಕ್‌ಡೌನ್‌ ಘೋಷಣೆಯಾದ ಬೆನ್ನಲ್ಲೇ ಸುಮಾರು ಒಂದೂವರೆ ತಿಂಗಳ ಕಾಲ ಮನೆಯಲ್ಲೇ ಸೇರಿಕೊಂಡಿದ್ದ ಜನರು ಹೊರಬರಲು ಹಾತೊರೆಯುತ್ತಿದ್ದರು. ಮೇ 4ರ ಬಳಿಕ ಅನುಷ್ಠಾನಗೊಂಡ ಮೂರನೇ ಸುತ್ತಿನ ಲಾಕ್‌ಡೌನ್‌ನಲ್ಲಿ ಹಲವು ನಿಯಮಾವಳಿ ಬದಲಾದ ಬೆನ್ನಲೇ ಜನರು ಬೀದಿಗಿಳಿಯುವ ಧೈರ್ಯ ತೋರಿದ್ದರು.

ನಗರ, ಪಟ್ಟಣ ಪ್ರದೇಶಗಳಲ್ಲಿ ಮದ್ಯದಂಗಡಿಗಳು ವಹಿವಾಟು ಆರಂಭಿಸಿದ ಬೆನ್ನಲ್ಲೇ ಒಂದೊಂದೇ ವಾಣಿಜ್ಯ, ಆರ್ಥಿಕ ಚಟುವಟಿಕೆಗಳು ಗರಿಗೆದರಲು ಆರಂಭಿಸಿ, ವರ್ತಕರು ನೆಮ್ಮದಿಯ ನಿಟ್ಟುಸಿರುವ ಬಿಡುವ ಹೊತ್ತಿಗಾಗಲೇ ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿಗೆ ಸೋಂಕು ವ್ಯಾಪಿಸಿರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT