ಶುಕ್ರವಾರ, ಡಿಸೆಂಬರ್ 3, 2021
20 °C

ಅಭಿವೃದ್ಧಿಗೆ ಕೆ.ಆರ್.ರಮೇಶ್ ಕುಮಾರ್, ಶಿವಶಂಕರ ರೆಡ್ಡಿ ಅಡ್ಡಿ: ಸಚಿವ ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಕೋಚಿಮುಲ್ ಮತ್ತು ಡಿಸಿಸಿ ಬ್ಯಾಂಕ್ ವಿಭಜನೆ ವಿಚಾರದಲ್ಲಿ ಶಾಸಕರಾದ ಕೆ.ಆರ್‌.ರಮೇಶ್ ಕುಮಾರ್, ಶಿವಶಂಕರರೆಡ್ಡಿ ಅಡ್ಡಗಾಲು ಹಾಕುತ್ತಿದ್ದಾರೆ. ಇದಿಷ್ಟೇ ಅಲ್ಲ ಜಿಲ್ಲೆಯ ಅಭಿವೃದ್ಧಿಯ ವಿಚಾರಗಳಿಗೂ ಅಡ್ಡಿ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಜರಬಂಡನಹಳ್ಳಿಯಲ್ಲಿ ಮಾತನಾಡಿದ ಅವರು,
 ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಶಿವಶಂಕರರೆಡ್ಡಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಲಿಲ್ಲ. ನಾನು ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಗೆ ಆದ್ಯತೆ ನೀಡುವೆ ಎಂದರು.

ಡಿಸಿಸಿ ಬ್ಯಾಂಕ್ ಮತ್ತು ಕೋಚಿಮುಲ್ ಪ್ರತ್ಯೇಕ ಆಗಬೇಕು. ಇದು ಜನರ ಆಸೆ. ಜನರ ಆಸೆಯನ್ನು ತೀರಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ರೈತರ ಬದುಕಿನ ಜತೆ ಶಿವಶಂಕರ ರೆಡ್ಡಿ ರಾಜಕೀಯ ಮಾಡುತ್ತಿದ್ದಾರೆ. ಅವರು ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದು ದೂರಿದರು.

ರಮೇಶ್ ಕುಮಾರ್, ಶಿವಶಂಕರ ರೆಡ್ಡಿಯಂತಹ ನೂರು ಜನರು ಬಂದರೂ ಕೋಚಿಮುಲ್ ವಿಭಜನೆ ಮಾಡಿಯೇ ಸಿದ್ದ. ಕೋಲಾರ ಡಿಸಿಸಿ ಬ್ಯಾಂಕ್ ನದ್ದು ಮಹಾಭಾರತದ ಕಥೆ ಎಂದರು.

ಡಿಸಿಸಿ ಬ್ಯಾಂಕ್ ರಿಂಗ್ ಮಾಸ್ಟರ್‌ ಕೆ.ಆರ್.ರಮೇಶ್ ಕುಮಾರ್. ಬ್ಯಾಂಕ್ ಅಧ್ಯಕ್ಷ ಗೋವಿಂದ ಗೌಡ ಬರಿ ನಟ ಅಷ್ಟೇ.ಅವರದ್ದು ಏನೂ ಇಲ್ಲ. ನಿರ್ದೇಶಕ ನಿರ್ಮಾಪಕ ಎಲ್ಲ ರಮೇಶ್ ಕುಮಾರ್. ಶಾಸಕ ಶ್ರೀನಿವಾಸಗೌಡ ಬುದ್ದಿವಂತರು. ಆದರೆ ಅವರಿಗೂ ನಿರ್ದೇಶನ ಮಾಡುವುದಕ್ಕೆ ಬರಲ್ಲ. ಎರಡೂ ಜಿಲ್ಲೆಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಬೇಕು ಎನ್ನುವುದು ರಮೇಶ್ ಕುಮಾರ್ ದುರುದ್ದೇಶ.

ಕೆಜಿಎಫ್ ಮತ್ತು ಶ್ರೀನಿವಾಸಪುರ ಕ್ಷೇತ್ರಕ್ಕೆ ತಲಾ 400 ಕೋಟಿ ಸಾಲ ನೀಡಿದ್ದಾರೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ನಷ್ಟು ರಾಜಕೀಯ ಬೇರೆ ಯಾವುದೇ ಬ್ಯಾಂಕ್ ನಲ್ಲಿಯೂ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಡಿಸಿಸಿ ಬ್ಯಾಂಕ್ ಅಕ್ರಮಗಳ ಬಗ್ಗೆ ತನಿಖೆ ಮಾಡಿಸಿಯೇ ಮಾಡಿಸುವೆ. ಭ್ರಷ್ಟಾಚಾರವನ್ನು ಹೊರಗೆ ಎಳೆಯುವೆ ಎಂದರು.

ಕಳೆದ ಒಂದೂವರೆ ವರ್ಷದಿಂದ ಸಹಕಾರ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದೇನೆ‌. ಆದರೆ ಅಧಿಕಾರಿಗಳು ಜಡ್ಡುಗಟ್ಟಿದ್ದಾರೆ. ಭಷ್ಟರಿಗೆ ರಕ್ಷಣೆ ನೀಡುತ್ತಿದ್ದಾರೆ. ಸಹಕಾರ ಸಚಿವ ಸೋಮಶೇಖರ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನಿಸುತ್ತಿದ್ದಾರೆ. ಡಿಸಿಸಿ ಬ್ಯಾಂಕ್ ಭ್ರಷ್ಟಾಚಾರ ಮಟ್ಟ ಹಾಕುತ್ತೇವೆ. ಭ್ರಷ್ಟ ರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಗುಡುಗಿದರು.

ದಂಡಿಗಾನಹಳ್ಳಿ ಜಲಾಶಯದಿಂದ 63 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಜಾರಿಗೊಳಿಸುತ್ತಿದ್ದೇನೆ. ಇದನ್ನು ಶಾಸಕ ಶಿವಶಂಕರ ರೆಡ್ಡಿ ಅವರಿಗೆ ಮಾಡಲು ಸಾಧ್ಯ ಆಗಲಿಲ್ಲ ಎಂದು ಹೇಳಿದರು.

ಗೌರಿಬಿದನೂರನಲ್ಲಿ ಹೊಸದಾಗಿ ತಾಲ್ಲೂಕು ಆಸ್ಪತ್ರೆ  ನಿರ್ಮಿಸಲು ಗಮನ ನೀಡುತ್ತೇನೆ ಎಂದರು.

ಎತ್ತಿನಹೊಳೆ ಯೋಜನೆ ಮೂಲಕ ಆದಷ್ಟು ಶೀಘ್ರದಲ್ಲಿ ಜಿಲ್ಲೆಗೆ ನೀರು ಕೊಡಲಾಗುವುದು. ಚಿಕ್ಕಬಳ್ಳಾಪುರ ಜಿಲ್ಲೆಯ ನೆರೆಯ ಆಂಧ್ರಪ್ರದೇಶದಲ್ಲಿ ಕೃಷ್ಣಾ ನದಿ  ನೀರು ಹರಿಯುತ್ತಿದೆ. ಅದನ್ನು ಜಿಲ್ಲೆಗೆ ತರುವ ದಿಕ್ಕಿನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು