ಸೋಮವಾರ, ಸೆಪ್ಟೆಂಬರ್ 27, 2021
28 °C
ಧೂಮಪಾನ, ಮೂತ್ರ ವಿಸರ್ಜನೆ ಮಾಡಿದವರಿಂದ ದಂಡ ವಸೂಲಿ ಪ್ರಕರಣ; ಜಿಲ್ಲಾ ಕೆಎಸ್‌ಆರ್‌ಟಿಸಿ ಒಳಗೆ ಅಸಮಾಧಾನದ ಹೊಗೆ

ಕೆಎಸ್‌ಆರ್‌ಟಿಸಿ: ಹಣ ದುರುಪಯೋಗ; ವರ್ಷವಾದರೂ ಕ್ರಮವಿಲ್ಲ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಭಾಗದ ಕೆಎಸ್‌ಆರ್‌ಟಿಸಿ ಭದ್ರತಾ ಮತ್ತು ಜಾಗೃತ ಶಾಖೆಯ ಸಿಬ್ಬಂದಿಯಿಂದ ನಡೆದಿರುವ ಹಣ ದುರುಪಯೋಗದ ಬಗ್ಗೆ ತನಿಖಾಧಿಕಾರಿ ವರದಿ ನೀಡಿ ಒಂದು ವರ್ಷ ಪೂರ್ಣವಾಗಿದೆ. ಆದರೆ ಇಲ್ಲಿಯವರೆಗೂ ಶಿಸ್ತು ಕ್ರಮ ಜಾರಿಯಾಗದೆ ಇರುವುದು ಜಿಲ್ಲಾ ಕೆಎಸ್‌ಆರ್‌ಟಿಸಿ ನಿಗಮದ ಕೆಳಹಂತದ ಸಿಬ್ಬಂದಿಯಲ್ಲಿ ಅಸಮಾಧಾನ ಮೂಡಿಸಿದೆ.

2016ರ ಆಗಸ್ಟ್‌ನಿಂದ 2019ರ ಡಿಸೆಂಬರ್‌ ಅವಧಿಯಲ್ಲಿ ನಿಗಮದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ಮೂತ್ರ ವಿಸರ್ಜನೆ ಮಾಡಿದವರಿಂದ ಸಂಗ್ರಹಿಸಿದ್ದ ₹ 70,500 ದಂಡದ ಹಣವನ್ನು ವಿಭಾಗೀಯ ಕಚೇರಿ, ಘಟಕಗಳ ನಗದು ಶಾಖೆಗೆ ಪಾವತಿಸದೆ ದುರುಪಯೋಗಪಡಿಸಿಕೊಳ್ಳಲಾಗಿದೆ. ಧೂಮಪಾನ ದಂಡ ರಸೀದಿ ಪುಸ್ತಕಗಳ ದಾಸ್ತಾನನ್ನು ಸರಿಯಾಗಿ ನಿರ್ವಹಿಸದೇ ಇರುವುದರಿಂದ 15 ಪುಸ್ತಕಗಳು ದುರ್ಬಳಕೆ ಆಗಿವೆ. ಇದರಿಂದ ಸಂಸ್ಥೆಗೆ ₹ 75,000 ನಷ್ಟ ಉಂಟಾಗಿದೆ. ಈ ಲೋಪಗಳಿಂದ ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ವಿಭಾಗಕ್ಕೆ ಒಟ್ಟು ₹ 1,45,500 ದುರುಪಯೋಗ ಆಗಿರುವುದು ದೃಢಪಟ್ಟಿದೆ ಎಂದು ಪ್ರಕರಣದ ತನಿಖೆ ನಡೆಸಿದ ಕೆಎಸ್‌ಆರ್‌ಟಿಸಿ ಬೆಂಗಳೂರು ಕೇಂದ್ರ ವಿಭಾಗದ ಭದ್ರತಾ ಮತ್ತು ಜಾಗೃತಾಧಿಕಾರಿಯು ವರದಿಯಲ್ಲಿ ತಿಳಿಸಿದ್ದಾರೆ.

ಕರ್ತವ್ಯದಲ್ಲಿ ಬೇಜವಾಬ್ದಾರಿ, ನಿರ್ಲಕ್ಷ್ಯ ಹಾಗೂ ಲೋಪ ಎಸಗಿರುವ ಸಿಬ್ಬಂದಿಯ ವಿರುದ್ಧ ಸೂಕ್ತ ಶಿಸ್ತುಕ್ರಮ ಜರುಗಿಸಲು ಕೋರಲಾಗಿದೆ ಎಂದು ತನಿಖಾಧಿಕಾರಿಯು 2020ರ ಜೂನ್‌ನಲ್ಲಿ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿದ್ದಾರೆ. ತನಿಖಾ ವರದಿಯಲ್ಲಿ ಉಲ್ಲೇಖಿಸಿರುವಂತೆ ₹ 100ರಿಂದ ₹ 44,000ದವರೆಗೂ ಹಣ ದುರುಪಯೋಗ ಆಗಿದೆ.

ವಿಭಾಗದ ವಿವಿಧ ಘಟಕಗಳ ಸಿಬ್ಬಂದಿಯಾದ ಎಸ್‌.ಲೋಕೇಶ್, ಜಿ.ಕೆ.ಬದ್ರಿನಾಥ, ಕೆ.ವಿಜಯ್‌ಕುಮಾರ್, ಜಿ.ಡಿ.ನಾಗರಾಜ್, ಕೆ.ವಿ.ವೆಂಕಟೇಶ್, ಎಲ್‌.ಪಿ.ವೆಂಕಟೇಶ್, ವಿ.ಎನ್.ಶ್ರೀನಿವಾಸ್, ಎಂ.ಸಿ.ಕೃಷ್ಣಪ್ಪ, ಬಿ.ಎನ್.ವೆಂಕಟರವಣಪ್ಪ, ಕೆ.ಎಲ್.ಸುರೇಶ್, ವರಲಕ್ಷ್ಮಿ, ಬಾಬಾ ಫಕ್ರುದ್ಧೀನ್, ಸಿ.ನಾಗರಾಜ್, ಎಸ್.ಶ್ರೀನಿವಾಸ್ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಅಧಿಕಾರಿಗಳಾದ ಶಿವಕುಮಾರ್ ಐಹೊಳೆ, ಬಿ.ಸಿ.ಉಮೇಶ್ ತಮ್ಮ ಕರ್ತವ್ಯದಲ್ಲಿ ಬೇಜಾಬ್ದಾರಿ ತೋರಿದ್ದಾರೆ. ನ್ಯೂನತೆಗಳನ್ನು ಗಮನಿಸಿದ್ದಲ್ಲಿ ಸಂಸ್ಥೆಗೆ ನಷ್ಟವಾಗುತ್ತಿರಲಿಲ್ಲ. ಇವರ ಬೇಜಬಾಬ್ದಾರಿತನವಿದೆ. ಇವರ ವಿರುದ್ಧ ಶಿಸ್ತುಕ್ರಮಕೈಗೊಳ್ಳಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ತಪ್ಪಿತಸ್ಥ ಕೆಲವು ಸಿಬ್ಬಂದಿ ಈಗಾಗಲೇ ಬೇರೆ ಕಡೆಗಳಿಗೆ ವರ್ಗಾವಣೆ ಸಹ ಆಗಿದ್ದಾರೆ.

ಹೀಗೆ ತನಿಖಾಧಿಕಾರಿ ಪ್ರಕರಣದ ವರದಿಯನ್ನು ನೀಡಿ ಒಂದು ವರ್ಷ ಪೂರ್ಣವಾದರೂ ಇನ್ನೂ ತನಿಖೆ ಆಗಬೇಕು ಎನ್ನುವ ಮೇಲಧಿಕಾರಿಗಳ ನಡೆ ಕೆಳಹಂತದ ಸಿಬ್ಬಂದಿಯಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ನಿರ್ವಾಹಕರು ಟಿಕೆಟ್ ನೀಡದಿದ್ದರೆ ತಕ್ಷಣವೇ ದಂಡ ವಿಧಿಸಲಾಗುತ್ತದೆ. ಇಲ್ಲವೆ ಕ್ರಮ ಜರುಗಿಸಲಾಗುತ್ತದೆ. ಆದರೆ ಹಣ ದುರುಪಯೋಗ ಆಗಿದೆ ಎಂದು ವರದಿ ನೀಡಿ ಒಂದು ವರ್ಷವಾದರೂ ಕ್ರಮ ಏಕೆ ಕೈಗೊಂಡಿಲ್ಲ ಎಂದು ಸಂಸ್ಥೆಯ ಕೆಲವು ಸಿಬ್ಬಂದಿ ಅಸಮಾಧಾನ ವ್ಯಕ್ತಪ‍ಡಿಸುತ್ತಿದ್ದಾರೆ.

‘ಚಾಲಕರು ಮತ್ತು ನಿರ್ವಾಹಕರಿಗೆ ಒಂದು ಕಾನೂನು ಅಧಿಕಾರಿಗಳಿಗೆ ಒಂದು ಕಾನೂನು ಎನ್ನುವಂತೆ ಆಗಿದೆ. ವರದಿ ನೀಡಿ ಒಂದು ವರ್ಷವಾದರೂ ಕ್ರಮಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣ ಆಗುವುದಿಲ್ಲವೆ. ತಪ್ಪಿತಸ್ಥರನ್ನು ರಕ್ಷಿಸುತ್ತಿದ್ದಾರೆ ಅಲ್ಲವೇ’ ಎಂದು ಸಂಸ್ಥೆಯಿಂದ ಅಮಾನತುಗೊಂಡ ಸಿಬ್ಬಂದಿಯೊಬ್ಬರು ಅಸಮಾಧಾನ ವ್ಯಕ್ತಪಡಿಸುವರು.

ಕ್ರಮದ ಭರವಸೆ
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ವರದಿಯನ್ನು ನೀಡಿದ್ದಾರೆ. ತಪ್ಪಿತಸ್ಥ ಸಿಬ್ಬಂದಿಯ ವಿರುದ್ಧ ಶಿಸ್ತುಕ್ರಮ ಬಾಕಿ ಇದೆ. ಶಿಸ್ತುಕ್ರಮಕೈಗೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಬ್ಬಂದಿಯ ವಿರುದ್ಧ ನೇರವಾಗಿ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ತನಿಖಾಧಿಕಾರಿ ವರದಿ ಕೊಟ್ಟಿದ್ದಾರೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು