ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಕವಿ ಕುವೆಂಪು ಕಂಡ ನಂದಿಗಿರಿಧಾಮ

ಇಂದು ಕುವೆಂಪು ಅವರ ಜನ್ಮದಿನ; ರಸ ಋಷಿಗೆ ಮಲೆನಾಡಿನ ತುಣುಕಿನಂತೆ ಕಂಡಿದ್ದ ನಂದಿ ಬೆಟ್ಟ
Last Updated 29 ಡಿಸೆಂಬರ್ 2019, 10:01 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ನಂದಿಬೆಟ್ಟದ ಕುರಿತಾದ ವರ್ಣನೆಯನ್ನು ಕುವೆಂಪು ಅವರು ತಮ್ಮ ಆತ್ಮಕತೆ ‘ನೆನಪಿನ ದೋಣಿಯಲ್ಲಿ’ ಕೃತಿಯಲ್ಲಿ ಬರೆದಿದ್ದಾರೆ. ಅವರು ಭೇಟಿ ಮಾಡಿದ್ದುದು 1932 ರ ನವೆಂಬರ್ 24ರಂದು. ಎಂಭತ್ತೇಳು ವರ್ಷಗಳ ಹಿಂದೆ ಭೇಟಿ ನೀಡಿದ್ದ ಕುವೆಂಪು ಅವರಿಗೆ ಮಲೆನಾಡಿನ ತುಣುಕಿನಂತೆ ನಂದಿಬೆಟ್ಟ ಕಂಡಿತ್ತು. ಕುವೆಂಪುರವರಿಗೆ ಬೆಟ್ಟದ ಮೇಲಿಂದ ಸುಂದರ ಬಯಲು ಸೀಮೆಯ ದೃಶ್ಯ ಕಂಡಿತ್ತು.

ದಾರಿಯಲ್ಲಿ ರಮಣೀಯವಾದ ದೃಶ್ಯಗಳಿದ್ದವು. ನಂದಿಬೆಟ್ಟ ಸಮೀಪವಾದಂತೆಲ್ಲ ಅದರ ಗಿರಿಶ್ರೇಣಿಯು ದಿಗಂತಕ್ಕೆದುರಾಗಿ ಶೃಂಗಶೃಂಗವಾಗಿ ಮೇಲೆದ್ದಿತು. ಅರ್ಧ ವರ್ತುಲಾಕಾರದ ಕಣಿವೆಯೊಂದು ರಮಣೀಯವಾದುದು. ನನಗೆ ಮಲೆನಾಡಿನ ಗಿರಿವನಗಳ ನೆನಪಾಯಿತು. ಬೆಟ್ಟವನ್ನಡರಿದ ಅರಣ್ಯಗಳು ನಿಬಿಡ ಶ್ಯಾಮಲವಾಗಿದ್ದುವು. ಹತ್ತುವ ಸೋಪಾನ ಶ್ರೇಣಿಯು ತರುಗಳ ಮಧ್ಯೆ ವಕ್ರವಕ್ರವಾಗಿ ಸರ್ಪಾಕಾರವಾಗಿತ್ತು.

ಮೆಟ್ಟಿಲುಗಳನ್ನು ಹತ್ತಿಹತ್ತಿ ನೆತ್ತಿಗೆ ಬಂದೆವು. ನಂದಿಯು ರಮಣೀಯವೂ ಶಾಂತವೂ ಆದ ಸ್ಥಳ. ಅಮೃತ ಸರೋವರವು ಆದರ್ಶವಾಗಿದೆ. ಕಿನ್ನರ ಪ್ರಪಂಚದಲ್ಲಿ ಇದ್ದಂತೆ! ಸುತ್ತಲೂ ಅನೇಕ ನೂರು ಮೈಲಿಗಳ ವಿಸ್ತಾರವಾದ ಬಯಲುಸೀಮೆಯ ದೃಶ್ಯ. ಇದೊಂದು ಮಾತ್ರ ಮಲೆನಾಡಿನ ಒಂದು ‘ದ್ವೀಪದಂತೆ!’ ಅಲ್ಲಲ್ಲಿ ಗುಡ್ಡಗಳು ಬೆಳ್ಳಗೆ ಕೆಂಪಗೆ ಹೊಳೆಯುವ ಕೆರೆಗಳು. ಮಂಜು ಕವಿದು ಸುತ್ತಲೂ ಲೋಕವೂ ನಾಕವೂ ಭೂಮಿಯೂ ಆಕಾಶವೂ ಒಂದು ಹಾಲ್ಗಡಲಂತೆ ತೋರಿತು’ ಎಂದು ಕುವೆಂಪು ಅವರು ಬಣ್ಣಿಸಿದ್ದಾರೆ.

‘ನಂದಿಗಿರಿಧಾಮ ಒಂದೊಂದು ಹವಾಮಾನದಲ್ಲಿ ಒಂದೊಂದು ರೀತಿಯಾಗಿರುತ್ತದೆ. ಪ್ರಕೃತಿ ಆರಾಧಕರು ಅದಕ್ಕಾಗಿಯೇ ನಂದಿಗಿರಿಧಾಮವನ್ನು ಹೆಚ್ಚು ಇಷ್ಟಪಡುತ್ತಾರೆ. ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರಾದ ಕುವೆಂಪು ಅವರು ನಂದಿಗಿರಿಯ ಸೌಂದರ್ಯವನ್ನು ಕಂಡು ಮನಸೋತಿದ್ದರು’ ಎಂದು ತೋಟಗಾರಿಕೆ ಇಲಾಖೆಯ ನಂದಿಗಿರಿಧಾಮದ ವಿಶೇಷ ಅಧಿಕಾರಿ ಎನ್.ರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT