ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ,ಕಮಲ’ ಕಾರ್ಯಕರ್ತರ ಸಂಭ್ರಮ

ಕೊಪ್ಪಳದ ಗವಿಮಠ ಮೈದಾನದಲ್ಲಿ ಅಕ್ಷರಶಃ ಜಾತ್ರೆ
Last Updated 16 ಮೇ 2018, 13:10 IST
ಅಕ್ಷರ ಗಾತ್ರ

ಕೊಪ್ಪಳ: ನಗರದ ಗವಿಮಠದ ಆವರಣದಲ್ಲಿ ಮಂಗಳವಾರ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳ ಗೆಲುವಿನ ಸಂಭ್ರಮ ಮನೆಮಾಡಿತ್ತು. ಜಿಲ್ಲೆಯ ಐದು ಕ್ಷೇತ್ರಗಳ ಅಭ್ಯರ್ಥಿಗಳ ಬೆಂಬಲಿಗರು, ಕಾರ್ಯಕರ್ತರು ಒಂದೆಡೆ ಜಮಾಯಿಸಿದ್ದರು. ತಮ್ಮ ಅಭ್ಯರ್ಥಿಗಳ ಗೆಲುವು ಖಚಿತವಾಗುತ್ತಿದ್ದಂತೆ ಕಾರ್ಯಕರ್ತರು ಪರಸ್ಪರೊಂದಿಗೆ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು. ಬಳಿಕ ಆಯಾ ಪಕ್ಷಗಳ ಕಾರ್ಯಕರ್ತರು ಸಿಳ್ಳೆ ಹಾಕಿ, ನೃತ್ಯ ಮಾಡಿದರು. ಅವರ ಅಭ್ಯರ್ಥಿಗಳ ಪರ ಹಾಗೂ ಪಕ್ಷದ ಪರ ಜೈಕಾರ ಕೂಗಿದರು. ಪಟಾಕಿ ಸಿಡಿಸಿದರು.

ನಗರದ ದೇವರಾಜ್ ಅರಸು ಕಾಲೊನಿಯಲ್ಲಿ ಕಾರ್ಯಕರ್ತರು ಕಾಂಗ್ರೆಸ್‌ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ್‌ ಗೆಲುವಿಗೆ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು. ಹೀಗೆ ನಗರದ ವಿವಿಧ ಕಡೆಗಳ ಕಾರ್ಯಕರ್ತರಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಪರಸ್ಪರರು ಸಿಹಿ ಹಂಚಿದರು. 9 ಸುತ್ತಿನ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು ಕೇಕೆ ಹಾಕಿದರು. ಅಲ್ಲಿಂದ ಉಳಿದ ಸುತ್ತುಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿನ ಅಂತರ ಹೆಚ್ಚಾಗುತ್ತಾ ಸಾಗಿತು. ಹಾಗಾಗಿ 13 ಸುತ್ತಿನ ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್‌ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ್‌ ಮತಎಣಿಕೆ ಕೇಂದ್ರಕ್ಕೆ ಆಗಮಿಸಿದರು. ಅವರ ಜತೆಗೆ ಬೆಂಬಲಿಗರಾದ ಎಪಿಎಂಸಿ ಅಧ್ಯಕ್ಷ ವೆಂಕನಗೌಡ್ರ ಹಿರೇಗೌಡ್ರ ಇದ್ದರು. ಗೆಲುವು ಖಚಿತವಾಗುತ್ತಿದ್ದಂತೆ ಕಾರ್ಯಕರ್ತರು ಜೈ ರಾಘಣ್ಣ, ಜೈ ಸಿದ್ದರಾಮಯ್ಯ ಹಾಗೂ ಜೈ ಕಾಂಗ್ರೆಸ್‌ ಎಂದು ಜೈಕಾರ ಕೂಗಿದರು. ಅಲ್ಲದೆ ಬಣ್ಣ ಹಚ್ಚಿಕೊಂಡು, ಪಟಾಕಿ ಸಿಡಿಸಿದರು.

ನಗರದ ಗವಿಮಠ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಬೈಕ್‌ ಜಾಥಾ ನಡೆಸಿದರು. ಜೋರು ಧ್ವನಿಯಲ್ಲಿ ಬೈಕ್‌ಗಳು ನಗರದ ಎಲ್ಲ ಬಡಾವಣೆಗಳಲ್ಲಿ ಸಂಚರಿಸಿದವು. ಗವಿಮಠ ಆವರಣದಲ್ಲಿ ಬರುವ ವಾಹನಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಸಂಚಾರಕ್ಕೆ ಕೆಲ ಸಮಯ ಅಡಚಣೆ ಉಂಟಾಯಿತು.

ಸಮೀಪ ಭಾಗ್ಯನಗರದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರ್ಯಕರ್ತರು ಬೈಕ್‌ ಮೂಲಕ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ ಜಾಥಾ ನಡೆಸಿದರು. ಅಭ್ಯರ್ಥಿ ಹಾಗೂ ಪಕ್ಷದ ಪರ ಜೈಕಾರ ಕೂಗಿದರು. ಧ್ವನಿವರ್ಧಕ ಬಳಸಿ ನೃತ್ಯ ಮಾಡಿದರು. ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಪಟಾಕಿ ಸಿಡಿಸಿದರು.

ಬಿಜೆಪಿ ಕಾರ್ಯಕರ್ತರೇನೂ ಕಡಿಮೆ ಇರಲಿಲ್ಲ. ಕಾಂಗ್ರೆಸ್‌ ಸಂಭ್ರಮಕ್ಕೆ ಸರಿಯಾಗಿಯೇ ಸ್ಪರ್ಧೆ ಒಡ್ಡಿದರು. ಐದು ಕ್ಷೇತ್ರಗಳ ಪೈಕಿ ಮೂರರಲ್ಲಿ ಸಾಧಿಸಿದ ಗೆಲುವಿನಿಂದ ಬಿಜೆಪಿ ಬೀಗಿತ್ತು. ಅಭ್ಯರ್ಥಿಗಳ ಬೆಂಬಲಿಗರು ತಮ್ಮ ನಾಯಕನ ಗೆಲುವು ಖಚಿತವಾಗುತ್ತಿದ್ದಂತೆಯೇ ಗವಿಮಠದತ್ತ ಮುಖಮಾಡಿ ಕೈ ಮುಗಿದರು.

ವಿಜಯೋತ್ಸವ ಆಚರಿಸದಂತೆ ನಿರ್ಬಂಧ ವಿಧಿಸಲಾಗಿತ್ತಾದರೂ ಕಾರ್ಯಕರ್ತರು ಅದ್ಯಾವುದನ್ನೂ ಗಣನೆಗೇ ತೆಗೆದುಕೊಳ್ಳಲಿಲ್ಲ. ಸಂಭ್ರಮಿಸಲು ಪೊಲೀಸರೂ ಅಡ್ಡಿಪಡಿಸಲಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ ವೇಳೆ ವಿಜಯೋತ್ಸವ ಭರ್ಜರಿಯಾಗಿ ಸಾಗಿದೆ.

ಅನಿಲ್‌ ಬಾಚನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT