ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಣೆ ತಡೆಗೆ ಕಾನೂನು ಅರಿವೇ ಮದ್ದು

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ
Last Updated 20 ಸೆಪ್ಟೆಂಬರ್ 2019, 13:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕಾನೂನಿನ ವಿವೇಚನೆ ಇಲ್ಲದೆ ಆಗುವ ಅನಾಹುತ ತಡೆಗಟ್ಟಲು ಮತ್ತು ಶೋಷಣೆಯಿಂದ ಮುಕ್ತರಾಗಲು ಮಹಿಳೆಯರು ಕಾನೂನಿನ ಅರಿವು ಪಡೆಯಬೇಕು’ ಎಂದು ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಎಸ್‌.ಎಚ್‌.ಕೋರಡ್ಡಿ ತಿಳಿಸಿದರು.


ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


‘ಬಾಲ್ಯ ವಿವಾಹ, ಮಕ್ಕಳ ಕಳ್ಳ ಸಾಗಾಣಿಕೆ, ಹೆಣ್ಣು ಮಕ್ಕಳ ಶೋಷಣೆ, ದೌರ್ಜನ್ಯ ನಡೆಸುವವರಿಗೆ ಕಾನೂನಿನಡಿಯಲ್ಲಿ ಶಿಕ್ಷೆ ಇದೆ. ಇಂತಹ ಪ್ರಕರಣಗಳನ್ನು ಸಮಾಜದಲ್ಲಿ ತಡೆ ಹಿಡಿಯಲು ವಿದ್ಯಾರ್ಥಿಗಳ ಸಹಕಾರ ಅಗತ್ಯ. ಮಕ್ಕಳ ಮತ್ತು ಮಹಿಳೆಯರ ಅಮೂಲ್ಯವಾದ ಹಕ್ಕುಗಳನ್ನು ನಾವು ನೀವು ಕಾಪಾಡಬೇಕು. ಇದರ ಅರಿವು ಜ್ಞಾವ ಬಹಳ ದೊಡ್ಡದು ಆದ್ದರಿಂದ ಇಂತಹ ಚಿಂತನೆಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.


‘ಅಂತರರಾಷ್ಟ್ರೀಯ ಸಮೀಕ್ಷೆಯೊಂದರ ಪ್ರಕಾರ ಸುಮಾರು 2 ಕೋಟಿ ಮಕ್ಕಳು ಮತ್ತು ಮಹಿಳೆಯರು ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ. ಅಂದರೆ ಭಾರತದಲ್ಲಿ ಪ್ರತಿ 2 ನಿಮಿಷಕ್ಕೆ ಒಂದು ಮಗು ಶೋಷಣೆ, ದೌರ್ಜನ್ಯ, ವೇಶ್ಯಾವಾಟಿಕೆಗೆ ಬಲಿಯಾಗುತ್ತಿದೆ. ಎಂತಹ ಪರಿಸ್ಥಿಯಲ್ಲಿ ನಾವು ಬದುಕುತ್ತಿದ್ದೇವೆ ಎಂದು ನೆನೆಸಿಕೊಂಡರೆ ಭಯವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.


‘ಇತ್ತೀಚೆಗೆ ಮಕ್ಕಳು ಮತ್ತು ಮಹಿಳೆರ ಮೇಲೆ ದೌರ್ಜನ್ಯ ನಡೆದರೆ ಧೈರ್ಯವಾಗಿ ಮುಂದೆ ಬಂದು ಕಾನೂನಿನ ನೆರವು ಪಡೆದುಕೊಳ್ಳಬೇಕು. ಮಕ್ಕಳಿಗೆ ಮತ್ತು ಮಹಿಳೆಯರ ರಕ್ಷಣೆಗಾಗಿ ಹಲವಾರು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಇದರ ಬಗ್ಗೆ ತಿಳಿದುಕೊಂಡರೆ ಮುಂದೆ ಯಾರಿಗಾದರೂ ಅನ್ಯಾಯವಾದಾಗ ಅವರಿಗೆ ನೀವು ಸಹಾಯ ಮಾಡಬಹುದು’ ಎಂದು ಹೇಳಿದರು.


ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಟಿ.ನಾಗರಾಜಯ್ಯ ಮಾತನಾಡಿ, ‘ಶೈಕ್ಷಣಿಕವಾಗಿ ಮಹಿಳೆ ಮುಂದುವರೆದರೇ ಮಾತ್ರ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಿಟ್ಟಿಸಿಕೊಳ್ಳಲು ಸಾಧ್ಯ. ಜೀವನದ ಬಹು ಮುಖ್ಯಘಟ್ಟ ವಿದ್ಯಾರ್ಥಿ ಜೀವನ. ಆದ್ದರಿಂದ, ವಿದ್ಯಾರ್ಥಿಗಳು ಮನಸ್ಸಿನಲ್ಲಿ ಗುರಿ ಇಟ್ಟು, ಪರಿಶ್ರಮವಹಿಸಿ ಉನ್ನತ ವಿದ್ಯಾಭ್ಯಾಸ ಕೈಗೊಂಡಾಗ ಮಾತ್ರ ಭವಿಷ್ಯ ಉತ್ತಮವಾಗಿರುತ್ತದೆ’ ಎಂದರು.


‘ಸಮಾಜದಲ್ಲಿ ಮಹಿಳೆಯರ ಮೇಲೆ ಸಾಕಷ್ಟು ದೌರ್ಜನ್ಯಗಳು ನಡೆಯುತ್ತಿವೆ. ಆದರೆ ಅದರಲ್ಲಿ ಶೇ 1ರಷ್ಟು ಪ್ರಕರಣಗಳನ್ನು ಮಾತ್ರ ನಾವು ನೋಡುತ್ತಿದ್ದೇವೆ. ಶೇ 99 ರಷ್ಟು ಮಹಿಳೆಯರು ಮಾನ, ಮರ್ಯಾದೆಗೆ ಅಂಜಿ ನಿತ್ಯ ಶೋಷಣೆಗೆ ಒಳಗಾಗುತ್ತಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಕ್ರಮಗಳ ಸದುಪಯೋಗ ಪಡೆದು, ದೌರ್ಜನ್ಯಗಳಿಂದ ಪಾರಾಗಬೇಕು’ ಎಂದು ತಿಳಿಸಿದರು.


ಹಿರಿಯ ಸಿವಿಲ್‌ ನ್ಯಾಯಾಧೀಶ ಎಚ್‌.ದೇವರಾಜ್‌, ವಕೀಲ ಸಂಘದ ಖಜಾಂಚಿ ಹರಿಕೃಷ್ಣ, ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್, ವಕೀಲ ಕೆ.ಸಿ.ಪ್ರಕಾಶ್, ಕನ್ನಡ ವಿಭಾಗದ ಮುಖ್ಯಸ್ಥ ನರಸಿಂಹಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT