ಬುಧವಾರ, ಜನವರಿ 29, 2020
29 °C
ರಾಜ್ಯ ಕಂದಾಯ ಇಲಾಖೆ ನೌಕರರ ಸಂಘ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಸಹಯೋಗದಲ್ಲಿ ‘ಕಂದಾಯ ದಿನಾಚರಣೆ’

ಉತ್ತಮ ಸೇವೆ ನೌಕರರಿಗೆ ಆದ್ಯತೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಸ್ವಾತಂತ್ರ್ಯ ಬಂದ ನಂತರ ಕಂದಾಯ ಇಲಾಖೆಯು ಮಾತೃ ಇಲಾಖೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಎಷ್ಟೇ ಕಷ್ಟ ಎದುರಾದರು ಕಂದಾಯ ಇಲಾಖೆ ನೌಕರರು ಸಿಬ್ಬಂದಿ ಚುನಾವಣೆ ಮತ್ತು ಮಾದರಿ ನೀತಿ ಸಂಹಿತೆಯಂತಹ ತಮ್ಮ ಕರ್ತವ್ಯಗಳನ್ನು ಅತಿ ಜಾಗರೂಕತೆಯಿಂದ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿರುವುದು ಇಲಾಖೆಯ ದಕ್ಷತೆಗೆ ಹಿಡಿದ ಕನ್ನಡಿಯಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ಹೇಳಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ರಾಜ್ಯ ಕಂದಾಯ ಇಲಾಖೆ ನೌಕರರ ಸಂಘ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಂದಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಂದಾಯ ಇಲಾಖೆಯ ನೌಕರರು ನ್ಯಾಯ ಬದ್ಧವಾದ ಸೇವೆಯನ್ನು ಜನರಿಗೆ ನೀಡಬೇಕು. ಯಾವುದೇ ಸಮಸ್ಯೆಗಳು ಬಂದರೆ ತ್ವರಿತಗತಿಯಲ್ಲಿ ಕೆಲಸ ಪೂರ್ಣ ಮಾಡುವ ಇಚ್ಛಾ ಶಕ್ತಿ ಬೆಳೆಸಿಕೊಳ್ಳಬೇಕು. ಇಲಾಖೆ ನೌಕರರಿಗೆ ಕೆಲಸ ಸಮಾಜ ಸೇವೆಯಾಗಬೇಕು. ಸರ್ಕಾರಗಳ ಯಾವುದೇ ಹೊಸ ಯೋಜನೆಗಳನ್ನು ಜನರಿಗೆ ತಲುಪಿಸಿ, ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವುದು ಕಂದಾಯ ಇಲಾಖೆಯಿಂದ ಮಾತ್ರ ಸಾಧ್ಯ’ ಎಂದು ತಿಳಿಸಿದರು.

ಸಕಾಲ ಯೋಜನೆಯ ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಜಿಲ್ಲೆ ಪ್ರಥಮ ಹಾಗೂ ದ್ವೀತಿಯ ಸ್ಥಾನಗಳನ್ನು ಗಳಿಸಲು ಕಾರಣರಾದ ಚಿಕ್ಕಬಳ್ಳಾಪುರ ತಹಶಿಲ್ದಾರ್ ಕೆ.ನರಸಿಂಹಮೂರ್ತಿ, ಗುಂಡಿಬಂಡೆ ತಹಶೀಲ್ದಾರ್ ಹನುಮಂತರಾಯ ಮತ್ತು ಸಕಾಲ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕ್ರೀಡಾಕೂಟಗಳಲ್ಲಿ ವಿಜೇತರಾದ ಮತ್ತು ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ಲತಾ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ತಹಶೀಲ್ದಾರ್ ಕೆ. ನರಸಿಂಹಮೂರ್ತಿ, ಗುಡಿಬಂಡೆ ತಹಶೀಲ್ದಾರ್ ಹನುಮಂತರಾಯ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ತಾಲ್ಲೂಕಿನ ತಹಶೀಲ್ದಾರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು