ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕ ಕಲ್ಯಾಣಕ್ಕಾಗಿ ಬಹುಸಂಸ್ಕೃತಿ ಉಳಿಯಲಿ

ಸತ್ಯಸಾಯಿಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅಭಿಮತ
Last Updated 5 ಅಕ್ಟೋಬರ್ 2019, 10:52 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಮನುಷ್ಯನಿಗೆ ಉಚಿತವಾಗಿ ಸಿಗಬೇಕಾದ ಅನ್ನ, ಅಕ್ಷರ, ಔಷಧದಂತಹ ಮೂಲಭೂತ ಸವಲತ್ತುಗಳು ಕೂಡ ಇವತ್ತು ಮಾರುಕಟ್ಟೆ ಸರಕಾಗುತ್ತಿರುವ ಕಾರಣ ಅನೇಕ ಅವಾಂತರಗಳು ಸೃಷ್ಟಿಯಾಗುತ್ತಿವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದರು.

ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಶುಕ್ರವಾರ ಭಾಗವಹಿಸಿ ಅವರು ಮಾತನಾಡಿದರು.

‘ಶಾಂತಿ ಮತ್ತು ಪ್ರೇಮದ ಸಂದೇಶವನ್ನು ಜಗತ್ತಿಗೆ ಸಾರಿದ ಬುದ್ಧನ ತವರು ಭಾರತ. ಈ ದೇಶದ ಮೇಲೆ ನಿರಂತರವಾಗಿ ಪರಕೀಯರ ದಾಳಿ ನಡೆದಿದೆ. ಆದರೂ ಭಾರತೀಯರು ತಮ್ಮತನವನ್ನು ಕಳೆದುಕೊಂಡಿಲ್ಲ. ಸಹಿಷ್ಣುತೆ ನಮ್ಮ ಜೀವಾಳ. ಅದನ್ನು ಕಾಪಾಡಿಕೊಂಡು, ಜಗತ್ತಿನ ವಿವಿಧೆಡೆ ಸೇವಾದರ್ಶದ ಸದಾಚಾರವನ್ನು ಬಿತ್ತರಿಸಬೇಕಾಗಿದೆ’ ಎಂದು ತಿಳಿಸಿದರು.

‘ದೈವ ಪ್ರೇಮ, ಜೀವ ಕಾರುಣ್ಯಗಳು ಮಾನವೀಯತೆಯ ಅಡಿಗಲ್ಲು. ಆದರೆ ಅವು ತೆರೆಮರೆಗೆ ಸಂದ ಕಾರಣ ವಿಶ್ವದಾದ್ಯಂತ ಕ್ಷೋಭೆಯುಂಟಾಗಿದೆ. ಆದರೆ ಭಗವಂತನೊಂದಿಗೆ ಸಹಯೋಗ ಹೊಂದಿದ ಜನರು ಭಾರತದಲ್ಲಿದ್ದಾರೆ. ಅವರಿಂದಾಗಿಯೇ ಶಾಂತಿಯನ್ನು ಅರಸುವ ಜನರು ಭಾರತದೆಡೆಗೆ ಆಶಯದ ನೋಟ ಬೀರುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ‘ಬಸವಣ್ಣ, ಗಾಂಧೀಜಿ, ವಿವೇಕಾನಂದರು ಮಾನವೀಯತೆಯ ಪಾಠವನ್ನೇ ಬೋಧಿಸುತ್ತಾ ಅದರ ಪ್ರತಿಪಾದನೆಗಾಗಿ ಬದುಕಿ ಬಾಳಿದವರು. ಆದುದರಿಂದಲೇ ಭಾರತದಲ್ಲಿ ಮಾನವೀಯತೆಯ ಅಂತಃಸತ್ವ ಅವ್ಯಾಹತವಾಗಿ ಹರಿದು ಬಂದಿದೆ. ಇದನ್ನು ಉಳಿಸಿ ಬೆಳೆಸಬೇಕಾಗಿರುವುದು ಎಲ್ಲರ ಕರ್ತವ್ಯ’ ಎಂದು ಹೇಳಿದರು.

ಸಾಯಿ ಬಾಬಾ ಅವರ ಸಂದೇಶ ವಾಹಕ ಮಧುಸೂದನ್ ಸಾಯಿ ಮಾತನಾಡಿ, ‘ಭಾರತದ ವೈವಿಧ್ಯ ಸಂಸ್ಕೃತಿಯು ಏಕಕಾಲದಲ್ಲಿ ಶಸ್ತ್ರ- ಶಾಸ್ತ್ರಗಳೆರಡನ್ನು ಸಮಾನವಾಗಿ ಕಾಣುತ್ತಾ ಪ್ರಪಂಚಕ್ಕೆ ಮಾದರಿಯಾಗಿ ಆದರ್ಶವನ್ನು ಬಿತ್ತುತ್ತಿದೆ. ಆದ್ದರಿಂದ ಮುಂದಿನ ಜನಾಂಗವನ್ನು ಆದರ್ಶದಿಂದ ಬೆಳೆಸಬೇಕಾದರೆ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವೀಯತೆಯ ಬೋಧನೆಗೆ ಪ್ರಾಶಸ್ತ್ಯ ನೀಡಬೇಕಾಗಿದೆ’ ಎಂದರು.

ಕೊಲ್ಕತ್ತಾದ ಕಲಾವಿದೆ ತನುಶ್ರೀ ಶಂಕರ್ ಮತ್ತು ತಂಡದವರು ಕಾರ್ಯಕ್ರಮದಲ್ಲಿ ಮಹಿಷಾಸುರ ಮರ್ಧಿನಿ -ಸಂಗೀತ ನೃತ್ಯರೂಪಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT