ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಂದ್ವ ಹೇಳಿಕೆ ನೀಡುವುದು ನಿಲ್ಲಿಸಲಿ

ರೈತಸಂಘ: ಕೋಡಿಹಳ್ಳಿ ಚಂದ್ರಶೇಖರ್ ಬಣದ ಮುಖಂಡರ ವಿರುದ್ಧ ಪುಟ್ಟಣಯ್ಯ ಬಣದವರ ವಾಗ್ದಾಳಿ
Last Updated 18 ಫೆಬ್ರುವರಿ 2020, 13:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಹೆಬ್ಬಾಳ–ನಾಗವಾರ ಕೆರೆಗಳ ನೀರನ್ನು ಸಂಸ್ಕರಿಸಿ ಜಿಲ್ಲೆಯ ಕೆರೆಗಳನ್ನು ತುಂಬುವ ಯೋಜನೆಯನ್ನು ಈ ಹಿಂದೆ ವಿರೋಧಿಸಿ, ಪ್ರತಿಭಟನೆ ನಡೆಸಿದ್ದ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಬಣದ ಮುಖಂಡರು ಇವತ್ತು ತಮ್ಮ ಹೋರಾಟದಿಂದಲೇ ಜಿಲ್ಲೆಗೆ ನೀರು ಹರಿಯುತ್ತಿದೆ ಎಂದು ಪ್ರಚಾರ ಮಾಡುತ್ತಿರುವುದು ಹಾಸ್ಯಾಸ್ಪದ’ ಎಂದು ರೈತಸಂಘದ (ಪುಟ್ಟಣಯ್ಯ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಆರ್.ಲಕ್ಷ್ಮೀನಾರಾಯಣರೆಡ್ಡಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ 90ರ ದಶಕದಿಂದಲೂ ಜಲತಜ್ಞ ಪರಮಶಿವಯ್ಯ ಅವರ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆಯ ಜಾರಿಗೆ ಆಗ್ರಹಿಸಿ ಕಾಲ್ನಡಿಗೆ ಜಾಥಾ ಸೇರಿದಂತೆ ಹಲವು ಹೋರಾಟಗಳನ್ನು ನಡೆಯುತ್ತ ಬಂದಿವೆ. 2015ರ ಬಳಿಕ ಜಿಲ್ಲೆಯಲ್ಲಿ ಕಾಣಿಸಿಕೊಂಡ ಚಂದ್ರಶೇಖರ್ ಬಣದವರು ಸಾಲ ಮನ್ನಾ ಮಾಡಿಸುವುದಾಗಿ ರೈತರಿಂದ ಲಕ್ಷಾಂತರ ಲೂಟಿ ಮಾಡುವ ಜತೆಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಚಾರ ಮಾಡಿ ನಾಪತ್ತೆಯಾಗಿದ್ದರು’ ಎಂದು ತಿಳಿಸಿದರು.

‘ಜಿಲ್ಲೆಗೆ ಶುದ್ಧ ಕುಡಿಯುವ ನೀರಾವರಿ ಯೋಜನೆಯ ಜಾರಿಗೆ ಆಗ್ರಹಿಸಿ ಹಲವು ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸುತ್ತಲೇ ಬಂದಿವೆ. ಇದರ ನಡುವೆಯೇ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಶಾಸಕ ಡಾ.ಕೆ.ಸುಧಾಕರ್ ಅವರು ಎಚ್‌.ಎನ್.ವ್ಯಾಲಿ ಯೋಜನೆಗಳ ಮೂಲಕ ಕೆರೆ ತುಂಬಿಸಲು ಶ್ರಮಿಸುತ್ತಿದ್ದಾರೆ. ನೀರಿಲ್ಲದೆ ಒಣಗಿರುವ ಕೆರೆಗಳಿಗೆ ಯಾವುದಾದರೂ ಮೂಲದಿಂದ ನೀರು ಬರಲಿ ಎಂದು ಇದನ್ನು ಅನೇಕ ಸಂಘಟನೆಗಳು ಸ್ವಾಗತಿಸಿದ್ದವು. ಆದರೆ ಚಂದ್ರಶೇಖರ್ ಬಣದವರು ಯೋಜನೆಯನ್ನು ವಿರೋಧಿಸಿ, ತಮಗೆ ಕೊಳಚೆ ನೀರು ಬೇಡವೆಂದು ಪಟ್ಟುಹಿಡಿದಿದ್ದು ಮರೆತಿದ್ದಾರೆ’ ಎಂದರು.

‘ಕಂದವಾರ ಕೆರೆಗೆ ಎಚ್‌.ಎನ್.ವ್ಯಾಲಿ ನೀರು ಹರಿಯುತ್ತಿದ್ದಂತೆ ಚಂದ್ರಶೇಖರ್ ಬಣದವರು ತಮ್ಮ ಹೋರಾಟದಿಂದಲೇ ನೀರು ಬಂದಿದೆ ಎಂದು ಹಳ್ಳಿಯ ಮುಗ್ಧ ಜನರನ್ನು ಮರಳು ಮಾಡಲು ಮುಂದಾಗಿದ್ದಾರೆ. ಹಲವು ಸಂಘಟನೆಗಳು, ಜನಪ್ರತಿನಿಧಿಗಳ ಶ್ರಮದಿಂದ ಜಾರಿಗೊಂಡಿರುವ ಯೋಜನೆ ಕುರಿತು ಮಾತನಾಡುವ ಸಂದರ್ಭದಲ್ಲಿ ಎಚ್ಚರಿಕೆಯಿಂದ ಮಾತನಾಡಬೇಕು, ದ್ವಂದ್ವ ಹೇಳಿಕೆ ನೀಡುವುದು ಬಿಡಬೇಕು’ ಎಂದು ಹೇಳಿದರು.

ಶಿಡ್ಲಘಟ್ಟ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಮಾತನಾಡಿ, ‘ಚ್‍ಎನ್ ವ್ಯಾಲಿ ಯೋಜನೆ ವಿಳಂಬವಾಗಲು ಇಲ್ಲಿನ ನೀರಾವರಿ ಹೋರಾಟಗಾರರೇ ಕಾರಣ. ಕೆಲ ಸಂಘಟನೆಗಳ ನಿರ್ಲಕ್ಷ್ಯದಿಂದ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ. ಸಂಸ್ಕರಿಸಿದ ನೀರು ಕೆರೆಗಳನ್ನು ತುಂಬಿದ ಬಳಿಕ ನೀರಿನ ಗುಣಮಟ್ಟ ಪರೀಕ್ಷಿಸುವ ಬದಲು ಆರಂಭದಲ್ಲಿಯೇ ನಮಗೆ ಬೇಡ ಎಂದು ಕೋರ್ಟ್‌ ಮೆಟ್ಟಿಲೇರುವುದು ಎಷ್ಟು ಸರಿ? ಇವತ್ತು ನೀರಾವರಿ ಹೋರಾಟಗಳ ಹೆಸರಲ್ಲಿ ಜನರನ್ನು ದಿಕ್ಕುತಪ್ಪಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಎಚ್‍.ಎನ್ ವ್ಯಾಲಿ ಯೋಜನೆ ಅಡಿ ಹರಿಸುವ ನೀರನ್ನು ಮೂರನೇ ಹಂತದ ಸಂಸ್ಕರಣೆ ಮಾಡಬೇಕು. ಜಿಲ್ಲೆಯಲ್ಲಿ ನಿೀಲಗಿರಿ ಮರಗಳನ್ನು ತೆರವುಗೊಳಿಸಿದ ಬಳಿಕ ಎದುರಾಗುವ ತೋಟಗಾರಿಕೆ ಬೆಳೆಗಳ ಬಳಸುವ ಕಡ್ಡಿಗಳ ಸಮಸ್ಯೆ ಬಗೆಹರಿಸಲು ರೈತರಿಗೆ ಕೂಚಗಳಿಗಾಗಿ ₹1 ಲಕ್ಷ ಸಹಾಯಧನ ನೀಡಬೇಕು’ ಎಂದು ಒತ್ತಾಯಿಸಿದರು.

ರೈತಸಂಘದ ಶಿಡ್ಲಘಟ್ಟ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಭಕ್ತರಹಳ್ಳಿ ಚನ್ನೇಗೌಡ, ಚಿಕ್ಕಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟರವಣಪ್ಪ, ಪದಾಧಿಕಾರಿಗಳಾದ ಶ್ರೀನಿವಾಸ್, ನಾಗರಾಜ್, ಮುದ್ದುರಾಜ್, ಶ್ರೀಧರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT