ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣಕ್ಕಾಗಿ ಪತ್ರ ಚಳವಳಿ

ಜಿಲ್ಲಾಧಿಕಾರಿಯವರಿಗೆ ವಿದ್ಯಾರ್ಥಿಗಳ ಮನವಿ
Last Updated 23 ಫೆಬ್ರುವರಿ 2021, 4:31 IST
ಅಕ್ಷರ ಗಾತ್ರ

ಗುಡಿಬಂಡೆ: ತಾಲ್ಲೂಕಿನಲ್ಲಿ ಉತ್ತಮವಾದ ಕ್ರೀಡಾಂಗಣ ದಶಕಗಳ ಬೇಡಿಕೆಯಾಗಿದ್ದು, ಎಷ್ಟೇ ಮನವಿಗಳು ನೀಡಿದರೂ ಇಲ್ಲಿಯವರೆಗೂ ಕ್ರೀಡಾಂಗಣಕ್ಕೆ ಸ್ಥಳ ಮಂಜೂರಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, ಜಿಲ್ಲಾಧಿಕಾರಿಯವರಿಗೆ ಎರಡು ಸಾವಿರ ಪತ್ರ ಕಳುಹಿಸುವ ಚಳವಳಿ ಆರಂಭಿಸಿದ್ದಾರೆ.

ಗುಡಿಬಂಡೆ ತಾಲ್ಲೂಕು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಹೋರಾಟ ಸಮಿತಿಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಂದ ಜಿಲ್ಲಾಧಿಕಾರಿಯವರಿಗೆ ಪತ್ರ ಚಳವಳಿಯ ಮೂಲಕ ಕ್ರೀಡಾಂಗಣಕ್ಕಾಗಿ ಮನವಿ ಮಾಡಲಾಗುತ್ತಿದೆ.

ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಹೋರಾಟ ಸಮಿತಿಯ ಸದಸ್ಯ ನವೀನ್ ಮಾತನಾಡಿ, ‘ಹತ್ತು ವರ್ಷಗಳಿಂದ ಕ್ರೀಡಾಂಗಣ ನಿರ್ಮಾಣಕ್ಕಾಗಿ ಹೋರಾಟ ಸಮಿತಿಯಿಂದ ಅನೇಕ ಬಾರಿ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಗಮನಕ್ಕೂ ತರಲಾಗಿದೆ. ಅವರು ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡಿದ್ದರು. ಪಟ್ಟಣದ ಅಮಾನಿಬೈರಸಾಗರ ಕೆರೆಯ ಬಳಿ ಸರ್ವೆ ನಂಬರ್ 3ರಲ್ಲಿ 6 ಎಕರೆ ಜಮೀನು ಕ್ರೀಡಾಂಗಣಕ್ಕಾಗಿ ಜಿಲ್ಲಾಧಿಕಾರಿ ಅವರಿಗೆ ಕಡತ ಸಲ್ಲಿಸಲಾಗಿದೆ. ಆದರೆ, ಆರು ತಿಂಗಳಾದರೂ ಅನುಮತಿ ನೀಡದೇ ಇರುವುದರಿಂದ ಪತ್ರ ಕಳುಹಿಸುವ ಚಳವಳಿ ಪ್ರಾರಂಭ ಮಾಡಿದ್ದೇವೆ’ ಎಂದು ತಿಳಿಸಿದರು.

ರೈತ ಮುಖಂಡ ವರದರಾಜು ಮಾತನಾಡಿ, ‘ಸುಮಾರು ವರ್ಷಗಳಿಂದ ಕ್ರೀಡಾಂಗಣ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಸರ್ಕಾರ ಮಾತ್ರ ಈ ಕುರಿತು ಗಮನ ಹರಿಸುತ್ತಿಲ್ಲ. ತಾಲ್ಲೂಕಿನಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಪಟುಗಳಿದ್ದಾರೆ. ಈ ನಿಟ್ಟಿನಲ್ಲಿ ಕೂಡಲೇ ತಾಲ್ಲೂಕಿನಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಜಮೀನು ಮಂಜೂರು ಮಾಡಬೇಕು. ವಿದ್ಯಾರ್ಥಿಗಳ ಪತ್ರ ಚಳವಳಿಗೆ ನಮ್ಮ ಬೆಂಬಲವಿದೆ’ ಎಂದರು.

ತಹಶೀಲ್ದಾರ್ ಸಿಗ್ಬತುಲ್ಲಾ ಪ್ರತಿಕ್ರಿಯಿಸಿ, ‘ಶಾಸಕರ ಸೂಚನೆಯಂತೆ ಕ್ರೀಡಾಂಗಣಕ್ಕಾಗಿ ಕೆರೆ ಸಮೀಪದ ಸರ್ವೆ ನಂಬರ್ 3ರಲ್ಲಿ 6 ಜಮೀನು ಮಂಜೂರಾತಿಗೆ ಕಡತ ಸಲ್ಲಿಸಲಾಗಿದೆ. ಕೊರೊನಾ ಸೋಂಕು ತಡೆಯವ ವಿಚಾರದಲ್ಲಿ ಜಿಲ್ಲಾಧಿಕಾರಿಯವರು ಮಗ್ನರಾಗಿದ್ದು, ಮತ್ತೊಮ್ಮೆ ಅವರ ಗಮನಕ್ಕೆ ತಂದು ಅದಷ್ಟು ಬೇಗ ಜಮೀನು ಮಂಜೂರಾತಿ ಪಡೆಯಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT